ಸೋಮವಾರ, ಜನವರಿ 20, 2020
19 °C

ಶರಣ ಸಂಸ್ಕೃತಿ ಉತ್ಸವ ಜ.14ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕಿನ ಸುಕ್ಷೇತ್ರ ನರಸೀಪುರದ ‘ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ’ದ ವತಿಯಿಂದ ಜ.14 ಮತ್ತು 15ರಂದು ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಗ್ರಂಥ ಮಹಾರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಗುರುಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ತಿಳಿಸಿದರು. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವ, ಮಠದ ಪ್ರಥಮ ಪೀಠಾಧಿಪತಿ ಶಾಂತಮುನಿ ಸ್ವಾಮೀಜಿ ಅವರ 4ನೇ ಸ್ಮರಣೋತ್ಸವ, ಶಾಂತಭೀಷ್ಮಚೌಡಯ್ಯ ಸ್ವಾಮೀಜಿಯವರ ತೃತೀಯ ಪೀಠಾರೋಹಣ ವಾರ್ಷಿಕ ಮಹೋತ್ಸವ ಹಾಗೂ ಸಾಮೂಹಿಕ ಸರಳ ವಿವಾಹ ಮಹೋತ್ಸವವನ್ನು ಆಯೋಜಿಸಿದ್ದೇವೆ ಎಂದು ಮಾಹಿತಿ ನೀಡಿದರು. 

ಜ.14ರಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ. ನಂತರ ಗುರುಪೀಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿವಿಧ ಕಲಾತಂಡಗಳಿಂದ ರಾತ್ರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆನಂತರ ಅಂಬಿಗರ ಚೌಡಯ್ಯನವರ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು. 

ಜ.15ರಂದು ಬೆಳಿಗ್ಗೆ 8ಕ್ಕೆ ಧರ್ಮ ಧ್ವಜಾರೋಹಣ, ಬೆಳಿಗ್ಗೆ 8.30ಕ್ಕೆ ಸಾಮೂಹಿಕ ವಿವಾಹ, ಬೆಳಿಗ್ಗೆ 9.30ಕ್ಕೆ ಧರ್ಮಸಭೆ, ಬೆಳಿಗ್ಗೆ 11.30ಕ್ಕೆ ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವ ಹಾಗೂ ಸಂಜೆ 5ಕ್ಕೆ ಗೋಧೂಳಿ ಸಮಯದಲ್ಲಿ ವಚನ ಗ್ರಂಥ ಮಹಾರಥೋತ್ಸವ ಜರುಗುವುದು ಎಂದು ತಿಳಿಸಿದರು. 

‘ರೊಟ್ಟಿ ಜಾತ್ರೆ’ ಎಂದು ವಿಶೇಷ ಹೆಸರು ಪಡೆಯುತ್ತಿರುವ ಈ ಜಾತ್ರೆಗೆ ರಾಜ್ಯದ ಮೂಲೆ–ಮೂಲೆಯಿಂದ ಹಾಗೂ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. 2 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬಸವರಾಜ ಕಳಸೂರ, ಸುಭಾಸ ಹೆಸರಿ, ಮಾರುತಿ ಕಬ್ಬೆರ, ಮಂಜುನಾಥ ಬೂವಿ, ಪರಶುರಾಮ ಸೊನ್ನದ, ಬರಮಣ್ಣ ಉಳಗಿ ಮುಂತಾದವರು ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು