ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಅಂಬೇಡ್ಕರ್ ನಗರದಲ್ಲಿನ ಚರ್ಮದ ಮಂಡಿಯನ್ನು ಸ್ಥಳಾಂತರಿಸಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕೆಂದು ಆಗ್ರಹಿಸಿ ಅಲ್ಲಿನ ನಿವಾಸಿಗಳು ಮತ್ತು ಸಾರ್ವಜನಿಕರು ಪುರಸಭೆ ಮುಂದೆ ಸೋಮವಾರ ಹಲಗೆ ಬಾರಿಸಿ ಪ್ರತಿಭಟನೆ ನಡೆಸಿದರು.
‘ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸರಿಯಾದ ಚರಂಡಿಗಳಿಲ್ಲ. ರಸ್ತೆಯಲ್ಲಿ ಕೊಳಚೆ ನೀರು ನಿಲ್ಲುವಂತಾಗಿದೆ. ಅದರಲ್ಲಿಯೇ ನಳದ ನೀರು ಬಳಕೆ ಮಾಡಬೇಕಾಗಿದೆ. ಅಲ್ಲದೆ ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕೊಳಚೆ ನೀರಿನ ದುರ್ವಾಸನೆಯಿಂದ ಮನೆಯಲ್ಲಿ ವಾಸಿಸದಂತಾಗಿದೆ. ಅದರಿಂದಾಗಿ ವಿವಿಧ ಸಾಂಕ್ರಾಮಿಕ ರೋಗಗಳು ಹರಡು ಭಯ ಭೀತಿಯಲ್ಲಿ ಜನ ವಾಸವಾಗಿದ್ದಾರೆ. ಈ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೆ ಇಂದು ನಾಳೆ ಅಭಿವೃದ್ಧಿ ಮಾಡಲಾಗುವುದು ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ತಿಳಿಯದಾಗಿದೆ’ ಎಂದು ಪ್ರತಿಭಟನಾ ನಿರತ ಇಲ್ಲಿನ ನಿವಾಸಿಗಳು ಅಳಲನ್ನು ತೊಡಿಕೊಂಡರು.
ಅಂಬೇಡ್ಕರ್ ನಗರದಲ್ಲಿ ಚರ್ಮದ ಮಂಡಿಯಿದ್ದು, ಪ್ರಾಣಿಗಳ ಚರ್ಮ ತಂದು ಅದಕ್ಕೆ ಉಪ್ಪು ಹಚ್ಚಿ ಹದ ಮಾಡುತ್ತಿರುವ ಕಾರಣ ಅದರ ದುರ್ವಾಸನೆಯಿಂದ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಅನಾರೋಗ್ಯದಿಂದ ಬಳಲಿ ಆಸ್ಪತ್ರೆಗೆ ಹೋಗುವಂತಾಗಿದೆ. ಮನೆಯಲ್ಲಿ ನೆಮ್ಮದಿಯಿಂದ ವಾಸ ಮಾಡದಂತಾಗಿದೆ. ಊಟ, ಉಪಹಾರ ಸೇರುತ್ತಿಲ್ಲ. ಸಂಬಂಧಿಕರು ಮನೆಗೆ ಬಾರದಂತಾಗಿದೆ. ಅಲ್ಲಿನ ಕುಡಿಯುವ ನೀರಿನಿಂದ ಸಹ ಆರೋಗ್ಯಕ್ಕೆ ಹಾನಿ ಉಂಟಾಗುತ್ತಿದೆ. ತಕ್ಷಣ ಇಲ್ಲಿನ ಚರ್ಮದ ಮಂಡಿಯನ್ನು ಸ್ಥಳಾಂತರಿಸಬೇಕು. ಆರೋಗ್ಯಕರ ವಾತಾವರಣ ಮೂಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಂಬೇಡ್ಕರ್ ನಗರಕ್ಕೆ ಜಿಲ್ಲಾ ಯೋಜನಾಧಿಕಾರಿ ಮಮತಾ ಹೊಸಗೌಡ್ರ, ಮುಖ್ಯಾಧಿಕಾರಿ ಎ.ಶಿವಪ್ಪ, ಪಿ.ಎಸ್.ಐ ನಿಂಗರಾಜ ಕರಕನ್ನವರ ಭೇಟಿ ನೀಡಿ ಪರಿಶೀನೆ ನಡೆಸಿದರು. ತಕ್ಷಣ ಇಲ್ಲಿನ ಚರಂಡಿಗಳ ಕಾಮಗಾರಿಗೆ ಚಾಲನೆ ನೀಡಿದರು. ಕೊಳಚೆಯಲ್ಲಿನ ನಳದ ಸ್ಥಳ ಬದಲಾಯಿಸುವಂತೆ ಹೇಳಿದರು. ಚರ್ಮ ಮಂಡಿಯ ಮಾಲೀಕರಿಗೆ ಸ್ಥಳಾಂತರಿಸುವಂತೆ ನೋಟಿಸ್ ಕಳುಹಿಸಲಾಗುವುದು. ಒಂದೂವರೆ ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಯೋಜನಾಧಿಕಾರಿಗಳು ತಿಳಿಸಿದರು.
ಮುಖಂಡರಾದ ಹನುಮಂತಪ್ಪ ಹೊಸಮನಿ, ದುರ್ಗಪ್ಪ ದೊಡ್ಡಮನಿ, ಮಾಲತೇಶ ಮಾದರ, ಕರೆಪ್ಪ ಸಣ್ಣಮನಿ, ಫಕ್ಕೀರಪ್ಪ ಸಣ್ಣಮನಿ, ನೀಲಪ್ಪ ಮಾದರ, ದುರ್ಗವ್ವ ಮಾದರ, ಹನುಮವ್ವ ಮಾದರ, ರೇಖಾ ಮಾದರ, ಆಂಜನೇಯ ಹೊಸಮನಿ ಸೇರಿದಂತೆ ಅಂಬೇಡ್ಕರ್ ನಗರದ ಅನೇಕ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.