ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯದ ವಹಿವಾಟು ಸ್ಥಗಿತಕ್ಕೆ ನಿರ್ಧಾರ

ಅಕ್ಕಿಆಲೂರು: ಕೋವಿಡ್ ಪ್ರಕರಣ, ಸಾವು ಹೆಚ್ಚಳ
Last Updated 18 ಮೇ 2021, 2:44 IST
ಅಕ್ಷರ ಗಾತ್ರ

ಅಕ್ಕಿಆಲೂರ: ಅಕ್ಕಿಆಲೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಕರಣ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಮಾಡಿ, ಜನಸಂಚಾರಕ್ಕೆ ಬ್ರೇಕ್ ಹಾಕಲು ಇಲ್ಲಿ ನಡೆದ ವರ್ತಕರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇಲ್ಲಿನ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ತಹಶೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್., ಅಕ್ಕಿಆಲೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲೇಬೇಕಿದೆ. ಕೊರೊನಾ ಪ್ರಸರಣದ ಸರಪಳಿ ತುಂಡರಿಸುವ ಜಾಣತನ ಪ್ರದರ್ಶಿಸಬೇಕಿದ್ದು, ವರ್ತಕರು ವಾರಾಂತ್ಯದಲ್ಲಿ ವಹಿವಾಟು ಸ್ಥಗಿತಗೊಳಿಸಿ ಸಾಥ್ ನೀಡಬೇಕಿದೆ ಎಂದು ಮನವಿ ಮಾಡಿದರು.

ಪಿಡಿಒ ಪ್ರವೀಣಕುಮಾರ್ ಬಿಜ್ಜೂರ ಮಾತನಾಡಿ, ನಾವು ಆರೋಗ್ಯವಾಗಿದ್ದೇವೆ, ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ನಿರ್ಲಕ್ಷ್ಯ ವಹಿಸಿದರೆ ಅಪಾಯ ಮೈಮೇಲೆ ಎಳೆದುಕೊಂಡಂತೆ. ಅಕ್ಕಿಆಲೂರಿನಲ್ಲಿ ಯುವಕರಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿದೆ. ಸಾವು-ನೋವು ಸಹ ಸಂಭವಿಸುತ್ತಿದ್ದು, ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಲೇಬೇಕಿದೆ ಎಂದರು.

ಸಭೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದ ಅನೇಕ ವರ್ತಕರು, ಸರ್ಕಾರದ ಜತೆ ಕೈ ಜೋಡಿಸುತ್ತೇವೆ. ಕೊರೊನಾ ನಿಯಂತ್ರಣಕ್ಕೆ ವಹಿವಾಟು ಸ್ಥಗಿತಗೊಳಿಸುತ್ತೇವೆ. ವಾರಾಂತ್ಯದಲ್ಲಿ ಸ್ಥಳೀಯ ಸೇರಿದಂತೆ ಸುತ್ತಮುತ್ತಲಿಮ ಗ್ರಾಮಗಳ ಜನ ಓಡಾಡದಂತೆ ನೋಡಿಕೊಳ್ಳೋಣ ಎಂದರು. ವಾರಾಂತ್ಯದಲ್ಲಿ ವೈದ್ಯಕೀಯ ಸೇವೆ ಹೊರತು ಪಡಿಸಿ ಯಾವುದೇ ಅಂಗಡಿ ತೆರೆಯದಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ತಾಲ್ಲೂಕ ಪಂಚಾಯ್ತಿ ಇಒ ಸುನೀಲ್‍ಕುಮಾರ್ ಬಿ., ಹಾನಗಲ್ ಪಿಎಸ್‍ಐ ಶ್ರೀಶೈಲ್ ಪಟ್ಟಣಶೆಟ್ಟಿ, ತಾ.ಪಂ ಸದಸ್ಯ ಬಷೀರಖಾನ್ ಪಠಾಣ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತೆವ್ವ ಮಾದರ, ಉಪಾಧ್ಯಕ್ಷ ಮುನೀರ್‍ಅಹ್ಮದ್ ಬಾಳೂರ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು, ವರ್ತಕರು, ಸಾರ್ವಜನಿಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT