ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ತವರು ಜಿಲ್ಲೆಯಲ್ಲಿ ಜೀವರಕ್ಷಕ ಔಷಧಗಳ ಕೊರತೆ: ರೋಗಿಗಳ ಪರದಾಟ

ಹಾವೇರಿ ಜಿಲ್ಲಾಸ್ಪತ್ರೆಯ ಹೊರ ಮತ್ತು ಒಳರೋಗಿಗಳ ಚಿಕಿತ್ಸೆಗೆ ತೊಡಕು
Last Updated 28 ಜನವರಿ 2023, 19:31 IST
ಅಕ್ಷರ ಗಾತ್ರ

ಹಾವೇರಿ: ‘ಸಿಎಂ ತವರು ಜಿಲ್ಲೆಯ’ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಜೀವರಕ್ಷಕ ಔಷಧಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಹೊರ ಮತ್ತು ಒಳರೋಗಿಗಳ ಚಿಕಿತ್ಸೆಗೆ ತೊಡಕಾಗಿದೆ.

ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ದೂರ ದೂರದ ಹಳ್ಳಿಗಳಿಂದ ನಿತ್ಯ ಸಾವಿರಾರು ಬಡ ಜನರು ಬರುತ್ತಾರೆ. ನೋಂದಣಿ ವಿಭಾಗದ ಮುಂಭಾಗ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಚೀಟಿ ಪಡೆಯುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಬೇಕಾದ ಚುಚ್ಚುಮದ್ದು ಮತ್ತು ಮಾತ್ರೆಗಳು ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ.

ಜ್ವರ, ಅಲರ್ಜಿ, ಗ್ಯಾಸ್ಟ್ರಿಕ್‌, ಕ್ಯಾನ್ಸರ್‌, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಸೋಂಕು, ಕರುಳು ಬೇನೆ, ರಕ್ತಹೀನತೆ, ರಕ್ತ ಹೆಪ್ಪುಗಟ್ಟುವಿಕೆ, ಕಣ್ಣಿನ ಸೋಂಕು, ಬುದ್ಧಿಮಾಂದ್ಯತೆಗೆ ಬೇಕಾದ ಔಷಧ ಹಾಗೂ ಶಸ್ತ್ರಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸಲಕರಣೆಗಳ ಕೊರತೆ ಬಾಧಿಸುತ್ತಿದೆ.

ಸರಬರಾಜಾಗದ ಔಷಧ:

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ (ಕೆಎಸ್‌ಎಂಎಸ್‌ಸಿಎಲ್‌) ನಿರೀಕ್ಷಿತ ಮಟ್ಟದಲ್ಲಿ ಜಿಲ್ಲಾ ಮಟ್ಟದ ಔಷಧ ಉಗ್ರಾಣಕ್ಕೆ ಮಾತ್ರೆ ಮತ್ತು ಚುಚ್ಚುಮದ್ದುಗಳು ಸರಬರಾಜಾಗುತ್ತಿಲ್ಲ. ಹೀಗಾಗಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಂದ ಬೇಡಿಕೆಯ ಪಟ್ಟಿ ಕಳುಹಿಸಿದರೂ, ಜಿಲ್ಲಾ ಮಟ್ಟದ ಉಗ್ರಾಣದಿಂದ ಔಷಧಗಳು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಸಮಸ್ಯೆ ತೋಡಿಕೊಂಡರು.

₹90 ಲಕ್ಷ ಬಾಕಿ:

ಔಷಧ ಕೊರತೆ ಮತ್ತು ತುರ್ತು ಸಂದರ್ಭಗಳಲ್ಲಿ ₹5 ಲಕ್ಷದವರೆಗೆ ಜೀವರಕ್ಷಕ ಔಷಧಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಖರೀದಿಸಲು ಅವಕಾಶವಿದೆ. ಆದರೆ, ‘ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ’ (ಎಬಿಆರ್‌ಕೆ) ಯೋಜನೆಯಡಿ ಸ್ಥಳೀಯ ಮಟ್ಟದಲ್ಲಿ ಖರೀದಿಸಿದ ಔಷಧಗಳ ಬಿಲ್‌ ಸುಮಾರು ₹90 ಲಕ್ಷ ಬಾಕಿ ಉಳಿದಿದೆ. ಬಿಲ್‌ಗಳು ವಿಲೇವಾರಿಯಾಗದ ಕಾರಣ ಔಷಧ ಪೂರೈಕೆದಾರರು ಹೊಸದಾಗಿ ಔಷಧ ಪೂರೈಸಲು ಮುಂದಾಗುತ್ತಿಲ್ಲ. ಇದು ಕೂಡ ಔಷಧಗಳ ಕೊರತೆಗೆ ಕಾರಣವಾಗಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

‘ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ನಂತರ ಹೊರಗಡೆ ಮೆಡಿಕಲ್‌ ಸ್ಟೋರ್‌ನಲ್ಲಿ ಔಷಧ ಕೊಂಡುಕೊಳ್ಳಿ ಎಂದು ಚೀಟಿ ಬರೆದು ಕೊಡುತ್ತಾರೆ. ಯಾವ ಮಾತ್ರೆ, ಟಾನಿಕ್‌ ಕೇಳಿದರೂ ಸಿಗಲ್ಲ. ‘ಔಷಧ ಪೂರೈಕೆಯಾಗಿಲ್ಲ ನಾವೇನು ಮಾಡೋಣ’ ಎಂದು ಆಸ್ಪತ್ರೆ ಸಿಬ್ಬಂದಿ ಸಬೂಬು ಹೇಳುತ್ತಾರೆ. ಹೀಗಾಗಿ ಹಾವೇರಿ ಜಿಲ್ಲಾಸ್ಪತ್ರೆ ಬಡರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ’ ಎಂದು ವೆಂಕಟಪ್ಪ, ಶ್ರೀನಿವಾಸ್‌ ಮುಂತಾದ ರೋಗಿಗಳು ದೂರಿದರು.

ವಿಲೇವಾರಿಯಾಗದ ಕಡತ

ಹಾವೇರಿ ಜಿಲ್ಲಾ ಆಸ್ಪತ್ರೆಯನ್ನು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಈಚೆಗೆ ಹಸ್ತಾಂತರ ಮಾಡಲಾಗಿದ್ದು, ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ನಿರ್ದೇಶಕ ಮತ್ತು ವೈದ್ಯಕೀಯ ಅಧೀಕ್ಷಕರ ನಡುವಿನ ವೈಮನಸ್ಸಿನಿಂದ ಜಿಲ್ಲಾಸ್ಪತ್ರೆಯ ಆಡಳಿತ ನಿರ್ವಹಣೆಗೆ ತೊಡಕಾಗಿದೆ ಎನ್ನಲಾಗುತ್ತಿದೆ.

‘ನಿರ್ದೇಶಕರು ವಾರದಲ್ಲಿ 2 ಅಥವಾ 3 ದಿನ ಮಾತ್ರ ಕಚೇರಿಯಲ್ಲಿ ಲಭ್ಯವಿರುವ ಕಾರಣ, ಜಿಲ್ಲಾ ಆಸ್ಪತ್ರೆಯ ಆಡಳಿತ ನಿರ್ವಹಣೆಗೆ ತೊಡಕಾಗಿದೆ. ಕಡತಗಳು ವಿಲೇವಾರಿಯಾಗದೇ ನಿರ್ದೇಶಕರ ಕೊಠಡಿಯಲ್ಲಿ ಕೊಳೆಯುತ್ತಿವೆ’ ಎಂದು ವೈದ್ಯಕೀಯ ಅಧೀಕ್ಷಕರು ಈಚೆಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

‌ಲಭ್ಯವಿರುವ ಅನುದಾನದಲ್ಲಿ ಔಷಧ ಖರೀದಿಸಿ ರೋಗಿಗಳಿಗೆ ನೀಡುತ್ತಿದ್ದೇವೆ. ಔಷಧಗಳ ಕೊರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ
– ಡಾ.ಪಿ.ಆರ್‌. ಹಾವನೂರ, ವೈದ್ಯಕೀಯ ಅಧೀಕ್ಷಕ, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT