ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ

ಜೀತದಾಳುಗಳ ಪುನರ್ವಸತಿ ಶಿಬಿರ ಉದ್ಘಾಟನೆ: ಸಿಇಒ ಮೊಹಮ್ಮದ್ ರೋಶನ್‌ ಹೇಳಿಕೆ
Last Updated 9 ಫೆಬ್ರುವರಿ 2021, 13:10 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿ ಬಿಡುಗಡೆಗೊಂಡ ಜೀತದಾಳುಗಳು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಪುನರ್ವಸತಿಗಾಗಿ ವಾರ್ಷಿಕ ನಿಗದಿತ ಗುರಿಗಿಂತ ಅಧಿಕ ಸೌಲಭ್ಯ ನೀಡಲು ಕೇಂದ್ರ ಕಚೇರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಜಿಲ್ಲೆಯಲ್ಲಿ ಬಿಡುಗಡೆಗೊಂಡ ಜೀತದಾಳುಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಗುರುತಿಸಲ್ಪಟ್ಟಿರುವ ಅರ್ಹ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳಿಗೆ ಪುರ್ವವಸತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಕಲ್ಪಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 56 ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳನ್ನು ಗುರುತಿಸಲಾಗಿದೆ. ಸೌಲಭ್ಯ ಕಲ್ಪಿಸಲು ಬೇಕಾದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸೌಲಭ್ಯಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಮಾತನಾಡಿ, ‘ಜಿಲ್ಲೆಯಲ್ಲಿ 2016 ಹಾಗೂ 2018ರಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ ನಡೆಸಿ ಅಂತಿಮವಾಗಿ 56 ಮಂದಿಯನ್ನು ಗುರುತಿಸಲಾಗಿದ್ದು, ಈ ಪೈಕಿ ಈಗ 53 ಜನರಿದ್ದಾರೆ. ಗ್ರಾಮ ಪಂಚಾಯಿತಿವಾರು ಸಂಪರ್ಕಿಸಿ ಎಲ್ಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ’ ಎಂದರು.

53 ಫಲಾನುಭವಿಗಳ ಪೈಕಿ ಮನೆ ನಿರ್ಮಾಣಕ್ಕೆ ಎರಡು ಮಂದಿ, ಸ್ವಂ ಉದ್ಯೋಗಕ್ಕೆ 35 ಮಂದಿ, ಭೂ ಒಡೆತನಕ್ಕೆ ಒಂಬತ್ತು ಮಂದಿ, ವಾಹನ ಸೌಲಭ್ಯಕ್ಕೆ ಇಬ್ಬರು, ಉದ್ಯಮಶೀಲತೆಗೆ ಇಬ್ಬರು ಹಾಗೂ ಉಳಿದವರು ಇತರ ಸೌಲಭ್ಯಗಳಿಗೆ ಅರ್ಜಿ ಸಲ್ಲಿದ್ದಾರೆ. ಅರ್ಹತೆಯನ್ನು ಪರಿಶೀಲಿಸಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಮಕ್ಕಳಿಗೆ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ನೇರ ಪ್ರವೇಶಾತಿ ಕಲ್ಪಿಸಿ ಉಚಿತ ಶಿಕ್ಷಣ ನೀಡಲಾಗುವುದು. ತಾವು ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ದಾಖಲಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿಯೋಜನಾ ನಿರ್ದೇಶಕ ಕುಮಾರ ಮಣ್ಣವಡ್ಡರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಎಚ್. ರಾಯ್ಕರ್ ಅವರು ತಮ್ಮ ಇಲಾಖೆ ಹಾಗೂ ನಿಗಮಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಸುಭಾಸ ಬೆಂಗಳೂರು ಹಾಗೂ ಉಡಚಪ್ಪ ಮಾಳಗಿ ಅವರು ಮಾತನಾಡಿ, ಫಲಾನುಭವಿಗಳಿಗೆ ನೀಡುವ ಸಬ್ಸಿಡಿ ಮೊತ್ತವನ್ನು ಹೆಚ್ಚಳ ಮಾಡಬೇಕು ಮನವಿ ಮಾಡಿಕೊಂಡರು.ಸಭೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT