ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಸಭಾವಿ: ಸರ್ಕಾರಿ ಶಾಲೆಗೆ ‘ಸ್ಮಾರ್ಟ್‌ಕ್ಲಾಸ್‌’ ಮೆರುಗು

ಶುದ್ಧ ಕುಡಿಯುವ ನೀರು, ಅತ್ಯಾಧುನಿಕ ಶೌಚಾಲಯ ವ್ಯವಸ್ಥೆ: ನಳನಳಿಸುವ ಶಾಲಾ ಕೈತೋಟ
Last Updated 7 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹಂಸಭಾವಿ: ಇಲ್ಲಿಗೆ ಸಮೀಪದ ಕಚವಿ ಗ್ರಾಮದ ಸರ್ದಾರ್ ವೀರನಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಸಗಿ ಶಾಲೆಯಲ್ಲಿರಬೇಕಾದ ಎಲ್ಲ ಸೌಲಭ್ಯಗಳು ಲಭ್ಯವಿವೆ. ವಿದ್ಯಾರ್ಥಿಗಳು ದಿನನಿತ್ಯ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಸಂತಸದಿಂದ ಪಾಲ್ಗೊಳ್ಳುತ್ತಿದ್ದು, ಶಾಲೆಗೆ ಉತ್ತಮ ಫಲಿತಾಂಶ ಸಿಗುತ್ತಿದೆ.

ಉತ್ತಮ ಬೋಧನೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ತರಗತಿಗಳ ಮೂಲಕ ಬೋಧನೆ ಮಾಡಲಾಗುತ್ತಿದ್ದು, ಅವಶ್ಯವಿದ್ದಲ್ಲಿ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಶಿಕ್ಷಕರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ನೆರವಾಗುತ್ತಿದ್ದಾರೆ.

ನಮ್ಮ ಶಾಲೆಯಲ್ಲಿ ಒಟ್ಟು 112 ವಿದ್ಯಾರ್ಥಿಗಳು ಓದುತ್ತಿದ್ದು, 8ನೇ ತರಗತಿಯಲ್ಲಿ 40, 9ನೇ ತರಗತಿಯಲ್ಲಿ 41, ಎಸ್ಸೆಸ್ಸೆಲ್ಸಿಯಲ್ಲಿ 31 ದಾಖಲಾತಿ ಇದೆ. ಸರ್ಕಾರಿ ಶಾಲೆಯನ್ನು ಬೆಳೆಸಬೇಕೆನ್ನುವ ಮಹದಾಸೆಯಿಂದವೀರನಗೌಡ ಪಾಟೀಲರು ತಮ್ಮ ಸ್ವಂತ ಹಣದಿಂದ ₹ 75 ಸಾವಿರ ಮೌಲ್ಯದ ‘ಸ್ಮಾರ್ಟ್ ಕ್ಲಾಸ್‌’ ಕೊಡುಗೆ ನೀಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಮಾಲತೇಶ ನಾಡಗೇರ.

ಮುಂದಿನ ಶೈಕ್ಷಣಿಕ ವರ್ಷದಿಂದ 8 ಮತ್ತು 9ನೇ ತರಗತಿಗಳಿಗೂ ‘ಸ್ಮಾರ್ಟ್ ಕ್ಲಾಸ್’ ಅಳವಡಿಸುವುದು ಹಾಗೂ ವಿದ್ಯಾರ್ಥಿಗಳಿಗಾಗಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಮಾಡುವ ಯೋಜನೆ ಇದೆ. ನಮ್ಮ ಶಾಲೆಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳೇ ದಾಖಲಾಗುತ್ತಾರೆ. ಹೀಗಾಗಿ ಅವರನ್ನು ಶೈಕ್ಷಣಿಕ ಚಟುವಟಿಕಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಈ ‘ಸ್ಮಾರ್ಟ್ ಕ್ಲಾಸ್’ ಬೋಧನೆ ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.

ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆಗಳಲ್ಲಿಯೂ ತಮ್ಮ ಪ್ರತಿಭೆಯನ್ನು ತೋರುತ್ತಿದ್ದು, ಕಬಡ್ಡಿಯಲ್ಲಿ ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲಿ ಭಾಗವಹಿಸುತ್ತಾರೆ. ವಾಕಿಂಗ್‌ ಸ್ಪರ್ಧೆಯಲ್ಲಿ ಸಾವಿತ್ರಿಮೂಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾಳೆ.

’ನಾನು ಕಲಿತಿದ್ದು ಕೇವಲ 6ನೇ ತರಗತಿ. ಹೀಗಾಗಿ ನನ್ನಂತೆ ನನ್ನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಉನ್ನತ ವ್ಯಾಸಂಗ ಮಾಡಿಸಿದೆ. ಈಗ ಆರ್ಥಿಕವಾಗಿ ಸಬಲನಾಗಿದ್ದೇನೆ ಹಾಗೂ ನಾನು ಕಲಿತ ಶಾಲೆ ಅಭಿವೃದ್ಧಿಮಾಡಬೇಕೆಂದು ಇಲ್ಲಿನ ಶಿಕ್ಷಕರನ್ನು ಕೇಳಿದಾಗ ಅವರು ‘ಸ್ಮಾರ್ಟ್ ಕ್ಲಾಸ್’ ಬೇಡಿಕೆ ಇಟ್ಟರು. ಅದನ್ನು ಪೂರೈಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ನೀಡುತ್ತೇನೆ’ ಎಂದು ವೀರನಗೌಡ ಪಾಟೀಲ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಮೂಲಸೌಕರ್ಯಗಳ ಆಕರ್ಷಣೆ

ಇಲ್ಲಿ ಪ್ರತಿಯೊಂದೂ ಕೊಠಡಿಯಲ್ಲಿಯೂ ಫ್ಯಾನ್‌ ಅಳವಡಿಸಲಾಗಿದೆ. ಕುಡಿಯಲು ಶುದ್ಧನೀರಿನ ವ್ಯವಸ್ಥೆ, ಅತ್ಯಾಧುನಿಕ ಶೌಚಾಲಯಗಳಿವೆ. ಶಾಲಾ ಕೈತೋಟದಲ್ಲಿ ಬಿಸಿಯೂಟಕ್ಕೆ ಬೇಕಾದ ತರಕಾರಿ ಬೆಳೆಯುತ್ತಿದ್ದಾರೆ. ಪ್ರತಿ ತಿಂಗಳು ಪಾಲಕರ ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುರಿತು ಚರ್ಚೆ, ಚಿತ್ರಕಲೆ, ಶಿಕ್ಷಕರಿಂದ ವಿಶೇಷ ತರಗತಿ, ಹೊಲಿಗೆ ತರಬೇತಿಯನ್ನೂ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT