ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಇನ್‌ ಕಾರ್ಯಕ್ರಮ: ಭಯ ಬಿಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಗೆಲ್ಲಿ: ಡಿಡಿಪಿಐ

'ಪ್ರಜಾವಾಣಿ' ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ಸುರೇಶ ಹುಗ್ಗಿ ಸಲಹೆ
Published 8 ಮಾರ್ಚ್ 2024, 4:09 IST
Last Updated 8 ಮಾರ್ಚ್ 2024, 4:09 IST
ಅಕ್ಷರ ಗಾತ್ರ

ಹಾವೇರಿ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯಪಡದೇ ಆತ್ಮವಿಶ್ವಾಸದಿಂದ ಎದುರಿಸಬೇಕು. ಈ ಬಾರಿಯ ವಿಶೇಷವೆಂದರೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

‘ಪ್ರಜಾವಾಣಿ’ ಗುರುವಾರ ಏರ್ಪಡಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅಣಿಯಾಗಿರುವ ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆ ಮತ್ತು ಸಮರ್ಪಕ ಉತ್ತರ ನೀಡುವ ಮೂಲಕ ಮಕ್ಕಳಲ್ಲಿದ್ದ ಗೊಂದಲ, ಭಯ, ಆತಂಕವನ್ನು ನಿವಾರಿಸುವ ಪ್ರಯತ್ನ ಮಾಡಿದರು.

‘ಫಸ್ಟ್‌ ಈಸ್‌ ದಿ ಬೆಸ್ಟ್‌’ ಎನ್ನುವಂತೆ ಮೊದಲ ವಾರ್ಷಿಕ ಪರೀಕ್ಷೆಯನ್ನೇ ಗಂಭೀರವಾಗಿ ಪರಿಗಣಿಸಿ, ಉತ್ತಮ ಅಂಕಗಳನ್ನು ಪಡೆಯಲು ಪ್ರಯತ್ನಿಸಬೇಕು. ಅನಿವಾರ್ಯ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ತೊಂದರೆಯಾದರೆ ಅಥವಾ ನಿಮ್ಮ ಪ್ರಯತ್ನದಾಚೆಗೂ ಕಡಿಮೆ ಅಂಕಗಳು ಬಂದರೆ ಮಾತ್ರ 2ನೇ ಮತ್ತು 3ನೇ ಪರೀಕ್ಷೆ ಬಗ್ಗೆ ಯೋಚಿಸಿ ಎಂದು ಸಲಹೆ ನೀಡಿದರು.

ಈ ಮೊದಲು ವರ್ಷಕ್ಕೆ 2 ಬಾರಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿತ್ತು. ಈಗ ಐದು ತಿಂಗಳಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿರುವುದರಿಂದ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಕೂಡ ಕಡಿಮೆ ಅವಧಿಯಲ್ಲಿಯೇ ಪರೀಕ್ಷೆ ಪಾಸ್‌ ಮಾಡಿಕೊಂಡು ಕಾಲೇಜು ವ್ಯಾಸಂಗವನ್ನು ಇದೇ ವರ್ಷ ಮುಂದುವರಿಸಲು ಸುವರ್ಣಾವಕಾಶ ಸಿಕ್ಕಿದಂತಾಗಿದೆ ಎಂದರು. 

ವಿದ್ಯಾರ್ಥಿಸ್ನೇಹಿ ಪರೀಕ್ಷೆ:

ಮೂರು ವಾರ್ಷಿಕ ಪರೀಕ್ಷೆಗಳ ಬಗ್ಗೆಯೇ ಅನೇಕ ವಿದ್ಯಾರ್ಥಿಗಳು ಕರೆ ಮಾಡಿ, ತಮ್ಮ ಆತಂಕ ಮತ್ತು ಗೊಂದಲವನ್ನು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಸುರೇಶ ಹುಗ್ಗಿ ಅವರು, ಈಗಾಗಲೇ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ಮತ್ತು ಸರಣಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದೇ ಮಾದರಿಯಲ್ಲೇ ವಾರ್ಷಿಕ ಪರೀಕ್ಷೆ ನಡೆಯುತ್ತದೆ. ಪ್ರಶ್ನೆಪತ್ರಿಕೆಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೇವಲ 5 ತಿಂಗಳಲ್ಲಿ ಮೂರು ಬಾರಿ ವಾರ್ಷಿಕ ಪರೀಕ್ಷೆ ಬರೆಯುವ ಸೌಲಭ್ಯವನ್ನು ಮೊಟ್ಟ ಮೊದಲ ಬಾರಿಗೆ ಶಿಕ್ಷಣ ಇಲಾಖೆ ಕಲ್ಪಿಸಿದೆ. ಮೂರು ಬಾರಿಯೂ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ. ಮೊದಲ ಪರೀಕ್ಷೆಗಿಂತ ಹೆಚ್ಚಿನ ಅಂಕ ಗಳಿಸಲು ಹಂಬಲಿಸುವವರು ಮಾತ್ರ 2ನೇ ಮತ್ತು 3ನೇ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು. 

ವಿಜ್ಞಾನ–ಗಣಿತ ಕಬ್ಬಿಣದ ಕಡಲೆಯಲ್ಲ!

ಕಠಿಣವಾಗಿರುವ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಹೇಗೆ ಹೆಚ್ಚು ಅಂಕ ಗಳಿಸಬಹುದು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಂಪನ್ಮೂಲ ಶಿಕ್ಷಕರು, ಗೈಡ್‌ ಮತ್ತು ಪಾಸಿಂಗ್‌ ಪ್ಯಾಕೇಜ್‌ಗಳನ್ನೇ ನೆಚ್ಚಿಕೊಳ್ಳದೆ, ಪಠ್ಯಪುಸ್ತಕವನ್ನೂ ಆಳವಾಗಿ ಅಭ್ಯಸಿಸಬೇಕು. ಪರೀಕ್ಷೆಯಲ್ಲಿ ಕೇಳುವ ಎಲ್ಲ ಪ್ರಶ್ನೆಗಳು ನಿಮ್ಮ ಪಠ್ಯಪುಸ್ತಕದ ಪಾಠಗಳ ಮೇಲೆಯೇ ರಚಿತವಾಗಿರುತ್ತವೆ. ಅನ್ವಯಿಕ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲವನ್ನು ರೂಢಿಸಿಕೊಳ್ಳಿ. ವಿಷಯಗಳ ಬಗ್ಗೆ ಗೊಂದಲಗಳಿದ್ದರೆ ನಿಮ್ಮ ಶಿಕ್ಷಕರಿಂದ ನಿವಾರಿಸಿಕೊಳ್ಳಿ. ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿ ಎಂದರು. 

ಫಲಿತಾಂಶ ಸುಧಾರಣೆಗೆ ಇಲಾಖೆ ಕ್ರಮಗಳು

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಶೇಷ ತರಗತಿಗಳ ಆಯೋಜನೆ, ಶಿಕ್ಷಕರು ವಿದ್ಯಾರ್ಥಿಗಳನ್ನು ದತ್ತು ಪಡೆಯುವ ಯೋಜನೆ, ಗುಂಪು ಅಧ್ಯಯನ, ಪಾಲಕರ ಮನೆ ಭೇಟಿ, ತಾಯಂದಿರ ಸಭೆ, ರಸಪ್ರಶ್ನೆ ಕಾರ್ಯಕ್ರಮ, ಪಾಲಕರು ಮತ್ತು ಮಕ್ಕಳೊಂದಿಗೆ ಆಪ್ತ ಸಮಾಲೋಚನೆ, ರಂಗೋಲಿಯೊಂದಿಗೆ ಕಲಿಕೆ, ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ಪರೀಕ್ಷೆ ಭಯ ನಿವಾರಣೆಗೆ ಓಪನ್‌ ಬುಕ್‌ ಪರೀಕ್ಷೆ... ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಂಡಿದ್ದೇವೆ ಎಂದು ಡಿಡಿಪಿಐ ಮಾಹಿತಿ ನೀಡಿದರು. 

ಆರೋಗ್ಯ ಕಾಳಜಿ ಮರೆಯದಿರಿ

ಓದುವ ಒತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಎಲ್ಲ ಸಾಧನೆಗೂ ದೈಹಿಕ ಮತ್ತು ಮಾನಸಿಕ ಆರೋಗ್ಯವೇ ಆಧಾರ. ಹೀಗಾಗಿ ಓದಿನ ಮಧ್ಯೆ ವಿಶ್ರಾಂತಿ ಪಡೆಯುವುದು, ಹವ್ಯಾಸಗಳಿಗೂ ಸಮಯ ಕೊಡುವುದು, ನಿತ್ಯ 6ರಿಂದ 8 ಗಂಟೆ ನಿದ್ದೆ ಮಾಡುವುದು, ಪೌಷ್ಟಿಕ ಆಹಾರ ಸೇವನೆ, ಬೇಸಿಗೆಯಾದ ಕಾರಣ ದ್ರವ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ... ಈ ಎಲ್ಲ ಕ್ರಮಗಳು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್‌ ಅಧಿಕಾರಿ ಮಂಜಪ್ಪ ಆರ್‌. ತಿಳಿಸಿದರು. 

ಪ್ರಶ್ನೆ ಕೇಳಿದವರು:

ಪೂರ್ಣಿಮಾ (ಹಾವೇರಿ), ಇಶ್ರಫ್‌, ನೇತ್ರಾವತಿ (ಶಿಗ್ಗಾವಿ), ಸಪ್ತಕುಮಾರಿ (ಇಚ್ಚಂಗಿ), ನೇಹಾ (ಸವಣೂರು), ಮೋನಿಕಾ (ಕುರುಬಗೊಂಡ), ಚೇತನಾ, ಆಕಾಶ್‌ (ಹಾವೇರಿ), ವಿನಾಯಕ, ಭೂಮಿಕಾ, ಸೌಮ್ಯಾ, ಶಶಾಂಕ್‌ (ದೇವಗಿರಿ), ಭಾಗ್ಯವತಿ ಮಡಿವಾಳರ, ಸಲ್ಮಾ (ದೇವಿಹೊಸೂರು), ನಿಖಿತಾ, ಮಾರುತಿ (ಸವಣೂರು), ಕವಿತಾ, ವೈಷ್ಣವಿ ಜೋಶಿ, ಸಿಂಚನಾ ಓಲೇಕಾರ್‌ (ಹಾವೇರಿ), ನವೀನಗೌಡ, ಕಿರಣ (ಹೊಸರಿತ್ತಿ), ಭಾಗ್ಯಲಕ್ಷ್ಮಿ (ಗುಡಿಹೊನ್ನತ್ತಿ) ಹಾಗೂ ಇತರರು.

ನೆರವು: ಎಸ್‌.ಎಸ್‌.ನಾಯಕ (ಕುಮಾರಪಟ್ಟಣ), ಬಸವರಾಜ ಒಡೇರಹಳ್ಳಿ (ತುಮ್ಮಿನಕಟ್ಟಿ). 

ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ 
ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ 
ಹಾವೇರಿ ಜಿಲ್ಲೆಯ 8 ತಾಲ್ಲೂಕುಗಳಲ್ಲಿ 77 ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು ಈ ಬಾರಿ 24619 ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ
– ಸುರೇಶ ಹುಗ್ಗಿ ಡಿಡಿಪಿಐ ಹಾವೇರಿ ಜಿಲ್ಲೆ
ಪರೀಕ್ಷೆಗೆ 17 ದಿನ ಬಾಕಿ!
ಮಾರ್ಚ್‌ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು ಪರೀಕ್ಷೆಗೆ ಇನ್ನು 17 ದಿನಗಳು ಮಾತ್ರ ಬಾಕಿ ಉಳಿದಿವೆ. ವಿದ್ಯಾರ್ಥಿಗಳು ವೇಳಾಪಟ್ಟಿ ಹಾಕಿಕೊಂಡು ಆರು ವಿಷಯಗಳಿಗೂ ಸಮಾನ ಆದ್ಯತೆ ನೀಡಬೇಕು. ಬೆಳಿಗ್ಗೆ 5ರಿಂದ 8ರವರೆಗೆ ಹಾಗೂ ಸಂಜೆ 7ರಿಂದ 10ರವರೆಗೆ ನಿತ್ಯ 6 ಗಂಟೆ ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ಓದಿದ ನಂತರ ಪುನರ್‌ ಮನನ ಮಾಡಿಕೊಂಡು ಬರೆಯಬೇಕು. ನಂತರ ಸಹಪಾಠಿಗಳೊಂದಿಗೆ ಚರ್ಚೆ ಮಾಡುವ ಮೂಲಕ ವಿಷಯಗಳ ಬಗ್ಗೆ ಸ್ಪಷ್ಟತೆ ಪಡೆಯಬಹುದು. ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಬೇಕು. ಓದಿದ ನಂತರ ‘ಶಾರ್ಟ್‌ ನೋಟ್‌’ ಮಾಡಿಕೊಂಡರೆ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಹೀಗೆ 17 ದಿನಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಾವೇರಿ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶುಪಾಲ ಗಿರೀಶ ಪದಕಿ ತಿಳಿಸಿದರು. 

ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆ

  • ಪರೀಕ್ಷೆ ಸಮೀಪದಲ್ಲಿ ಇರುವುದರಿಂದ ಮೊಬೈಲ್‌ ಟಿ.ವಿ ಹಾಗೂ ಇತರ ಆಕರ್ಷಕ ಸಂಗತಿಗಳಿಂದ ದೂರವಿರಿ. 

  • ಐಪಿಎಲ್‌ ಕ್ರಿಕೆಟ್‌ಗಿಂತ ‘ಬದುಕಿನ ಮ್ಯಾಚ್‌’ ಆದ ಪರೀಕ್ಷೆಯನ್ನು ಗೆಲ್ಲುವ ಕಡೆ ಗಮನಕೊಡಿ. 

  • ಪಾಲಕರು ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಬೈಕ್‌ ಮತ್ತು ಸ್ಕೂಟರ್‌ಗಳನ್ನು ಕೊಟ್ಟು ಅಲೆದಾಡಲು ಬಿಡಬೇಡಿ

  • ಪೂರ್ವಸಿದ್ಧತೆ ಪರೀಕ್ಷೆಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡರೆ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯ

  • ಪರೀಕ್ಷೆಯಲ್ಲಿ ದೋಷರಹಿತ ಮತ್ತು ಅಂದವಾದ ಬರವಣಿಗೆ ಅತೀ ಅವಶ್ಯ.  * ಯೋಗ ಧ್ಯಾನಗಳಿಂದ ಏಕಾಗ್ರತೆ ವೃದ್ಧಿಸಿಕೊಳ್ಳಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT