ಸೋಮವಾರ, ಮೇ 16, 2022
21 °C
ರೈತ ಮುಖಂಡರೊಂದಿಗೆ ಸಭೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ಹಾವೇರಿ: ತಾಲ್ಲೂಕುವಾರು ವಿಮಾ ಕಚೇರಿ ಆರಂಭಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರೈತರಿಗೆ ಸ್ಥಳೀಯವಾಗಿ ಬೆಳೆವಿಮೆ ನೋಂದಣಿ, ವಿಮಾ ಪರಿಹಾರ ಮಾಹಿತಿ ನೀಡಲು ಜಿಲ್ಲೆಗೆ ಸೂಚಿತ ವಿಮಾ ಕಂಪನಿಗಳು ತಾಲ್ಲೂಕುವಾರು ತಮ್ಮ ಶಾಖಾ ಕಚೇರಿಗಳನ್ನು ಆರಂಭಿಸಲು ವಿಮಾ ಕಂಪನಿಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. 

ಜಿಲ್ಲಾ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ, ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕಾದ ಬೇಡಿಕೆಗಳ ವಿವರವನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ರೈತ ಮುಖಂಡರಿಗೆ ತಿಳಿಸಿದರು. 2015-16ನೇ ಸಾಲಿನಿಂದ 2020-21ನೇ ಸಾಲಿನವರೆಗೆ ಬೆಳೆ ವಿಮೆ ಸಮಸ್ಯೆ ಕುರಿತಂತೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. 

ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ, ‘2015-16ನೇ ಸಾಲಿನಿಂದ 2020-21ನೇ ಸಾಲಿನವರೆಗೆ ಬೆಳೆವಿಮೆ ನೋಂದಣಿ, ಮಂಜೂರಾತಿ, ವಿಮಾ ಪರಿಹಾರ ಪಾವತಿ, ತಂತ್ರಾಂಶದಲ್ಲಿ ತೊಡಕುಗಳು, ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ವಿವರವಾಗಿ ಸಭೆಗೆ ಮಾಹಿತಿ ನೀಡಿದರು.

ವಿದ್ಯುತ್ ಸಂಪರ್ಕ: ರೈತರ ಕೊಳವೆಬಾವಿಗೆ ವಿದ್ಯುತ್‌ ಪರಿವರ್ತಕ ಕೂರಿಸಲು ಸೀನಿಯಾರಿಟಿ ಕಡೆಗಣಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದವು. ಹೆಸ್ಕಾಂ ಕಚೇರಿವಾರು ಆಯಾ ವ್ಯಾಪ್ತಿಯ ರೈತರು ವಿದ್ಯುತ್ ಸಂಪರ್ಕ ಕೋರಿ ಬಂದಿರುವ ಅರ್ಜಿಗಳ ಹಿರಿತನದ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಹೆಸ್ಕಾಂ ಎಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. 

ವಿದ್ಯುತ್ ಸಂಪರ್ಕ ಕಲ್ಪಿಸಲು ಅಕ್ರಮ-ಸಕ್ರಮ ಯೋಜನೆಯಡಿ ಜಿಲ್ಲೆಯಲ್ಲಿ 2262 ಕೊಳವೆಬಾವಿಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಕೆ ಕಾರ್ಯ ಕೈಗೊಳ್ಳಲಾಗಿದ್ದು, ಈಗಾಗಲೇ 1948 ಪ್ರವರ್ತಕಗಳನ್ನು ಅಳವಡಿಸಲಾಗಿದೆ. ಬಾಕಿ 814 ವಿದ್ಯುತ್ ಪ್ರವರ್ತಕಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ರಸಗೊಬ್ಬರ ಕೊರತೆ: ಮುಂದಿನ ಮುಂಗಾರು ಹಂಗಾಮಿಗೆ ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಬೇಕು. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮವಹಿಸಬೇಕು, ಎಂ.ಆರ್.ಪಿ. ದರದಲ್ಲಿ ಗೊಬ್ಬರ ದೊರಕಬೇಕೆಂಬ ರೈತರ ಬೇಡಿಕೆಗೆ ಜಿಲ್ಲಾಧಿಕಾರಿ ವಿವರ ನೀಡಿ, ಮುಂದಿನ ಹಂಗಾಮಿನಲ್ಲಿ ಕೃತಕ ಅಭಾವ ಉಂಟಾಗದಂತೆ ಅಧಿಕಾರಿಗಳ ತಂಡ ರಚಿಸಿ ನಿಗಾವಹಿಸಲಾಗುವುದು ಎಂದರು. 

ಮೆಕ್ಕೆಜೋಳ ಖರೀದಿ ಕೇಂದ್ರ: ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ರೈತರು ಬೇಡಿಕೆ ಸಲ್ಲಿಸಿದರು. ವಾರದಲ್ಲಿ ಕೇಂದ್ರ ಆರಂಭಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ಜಿಲ್ಲೆಯ ರೈತರು ಮೆಕ್ಕೆಜೋಳ ಸಂಸ್ಕರಣ ಘಟಕ ಸ್ಥಾಪಿಸಿದರೆ ಜಿಲ್ಲಾಡಳಿತದಿಂದ ಎಲ್ಲ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಸಿಬಿಲ್ ದರ ಅನ್ವಯಿಸದಂತೆ ಬೇಡಿಕೆ: ರೈತರಿಗೆ ಬೆಳೆಸಾಲ ನೀಡುವಾಗ ಬ್ಯಾಂಕ್‍ಗಳು ಸಿಬಿಲ್ ಮಾನದಂಡವನ್ನು ಅನುಸರಿಸುತ್ತವೆ. ಕೃಷಿ ಸಾಲಕ್ಕೆ ಈ ಮಾನದಂಡ ಅನುಸರಿಸದೇ ಸಾಲ ನೀಡಬೇಕು ಎಂದು ರೈತರು ಮನವಿ ಮಾಡಿದರು. 

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು