ಗುರುವಾರ , ಡಿಸೆಂಬರ್ 8, 2022
18 °C
ಕಂಚಿನೆಗಳೂರಿನಲ್ಲಿ ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ

ಹೋರಿ ಬಂತು ಬಿಡ್ರಿ ದಾರಿ... ದೂರ ಸರದು ನಿಲ್ಲರ್ರೀ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ‘ಹೋರಿ ಬಂತು ಬಿಡ್ರಿ ದಾರಿ... ದೂರ ಸರದು ನಿಲ್ಲರ್ರೀ... ಬಾಳ ಡೇಂಜರ್ ಐತಿ ಈ ಹೋರಿ... ಅಡ್ಡ ಬರಬ್ಯಾಡ್ರೀ... ಬಾಣ ಹೊಂಟಂಗ ಓಡಾಕತೈತಿ... ಸರಿರಿ ಸರಿರಿ ಮೈ ಮ್ಯಾಲೆ ಬರತೈತಿ... ಕೈಕಾಲು ಮುರುಕೊಂತಿರೀ... ಹುಷಾರಿ...! ಈ ರೀತಿಯ ಅಪ್ಪಟ ಗ್ರಾಮೀಣ ಶೈಲಿಯ ಹರ್ಷೋದ್ಗಾರಗಳೊಂದಿಗೆ ಹಾನಗಲ್ ತಾಲ್ಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಗುರುವಾರ ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ ಜನಸಾಗರದ ಮಧ್ಯೆ ಸಡಗರದಿಂದ ನೆರವೇರಿತು.

ರೋಚಕ, ರೋಮಾಂಚಕಾರಿಯಾದ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಭಯಮಿಶ್ರಿತ ವಾತಾವರಣದಲ್ಲಿಯೇ 25-30 ಸಾವಿರಕ್ಕೂ ಹೆಚ್ಚು ಜನ ನೆರೆದಿತ್ತು. ಅಪಾರ ಸಂಖ್ಯೆಯ ಪ್ರೇಕ್ಷಕರ ಸಿಳ್ಳೆ, ಕೇಕೆ, ತಮಟೆ, ಡೊಳ್ಳು, ಪಟಾಕಿಗಳ ಕಿವಿಗಡಚಿಕ್ಕುವ ಸಿಡಿಲಬ್ಬರದ ಸದ್ದು ಗದ್ದಲದೊಂದಿಗೆ ನಡೆದ ಸ್ಪರ್ಧೆ ಎದೆ ಝಲ್ ಎನಿಸುವಂತಿತ್ತು.

ಜಾನಪದ ಸೊಗಡಿನ ವಿಸ್ಮಯಕಾರಿ ಕ್ರೀಡೆ ಹಟ್ಟಿಹಬ್ಬದಲ್ಲಿ ತಮ್ಮ ಹೋರಿಗಳೊಂದಿಗೆ ಪಾಲ್ಗೊಂಡಿದ್ದ ರೈತರು ಸಂಭ್ರಮ-ಸಡಗರದಲ್ಲಿ ಮುಳುಗೆದ್ದರು. ನೆಚ್ಚಿನ ಸಂಗಾತಿ ಹೋರಿಗಳ ಕೊರಳಿಗೆ ಕೆಜಿಗಟ್ಟಲೇ ಒಣ ಕೊಬ್ಬರಿ ಕಟ್ಟಿ ನವ ವಧುವಿನಂತೆ ಸಿಂಗಾರ ಮಾಡಿ ಸಹಸ್ರಾರು ಜನ ನೆರೆದ ಪರಸಿಗೆ ತಂದು ಬಿಟ್ಟು ಬೆದರಿಸಿ ರೈತರು ಸಂಭ್ರಮಪಟ್ಟರು. ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಹೋರಿ ಚಂಗನೇ ಜಿಗಿದು ಭರ್ರನೇ... ಓಟ ಕಿತ್ತುತ್ತಿದ್ದಂತೆಯೇ ಇತ್ತ ನೆರೆದ ಜನತೆ ಹೋ... ಎಂದು ಕುಣಿದು ಕುಪ್ಪಳಿಸಿ ಕೇಕೆ ಹಾಕಿ ಸಂಭ್ರಮೋತ್ಸಾಹದಲ್ಲಿ ತೊಡಗಿದ್ದು ಕಂಡು ಬಂದಿತು.

ಹೋರಿಗಳನ್ನು ವಿಶೇಷವಾಗಿ ತಯಾರಿಸಲಾಗಿದ್ದ ಗರಿ ಗರಿ ಜೂಲ.. ಬೆಳ್ಳಿಯ ಕೊಂಬಣಸು.. ಜರತಾರಿ ಪಟ.. ಜೊತೆಗೆ ಇನ್ನೂ ಅನೇಕ ಆಲಂಕಾರಿಕ ವಸ್ತುಗಳಿಂದ ರೈತರು ಸಿಂಗರಿಸಿದ್ದರು. ತನ್ನ ಮಾಲೀಕ ಕೈ ಸನ್ನೆ ಮಾಡಿದ ಬಳಿಕವೇ ಓಟಕ್ಕೆ ನಿಲ್ಲುತ್ತಿದ್ದ ಹೋರಿಗಳು ಸ್ಪರ್ಧೆಯ ಆಕರ್ಷಣೆ ಎನಿಸಿದವು. ಈ ಭಾಗದಲ್ಲಿ ಮಾತ್ರವೇ ಕಾಣಸಿಗುವ ವಿಸ್ಮಯ ಕ್ರೀಡೆಯ ಸವಿ ಕಣ್ಮುಂಬಿಕೊಳ್ಳಲು ಹಾವೇರಿ ಮಾತ್ರವಲ್ಲದೇ ಸುತ್ತಲಿನ ಜಿಲ್ಲೆಗಳ ಜನತೆ ಇಲ್ಲಿಗೆ ದೌಡಾಯಿಸಿದ್ದರಿಂದ ಕಣ್ಣು ಹಾಯಿಸಿದಲ್ಲೆಲ್ಲ ಜನಜಂಗುಳಿಯೇ ಕಾಣಿಸುತ್ತಿತ್ತು. ಹೋಟೆಲ್‍ಗಳು ಭರ್ಜರಿ ವ್ಯಾಪಾರ-ವಹಿವಾಟು ನಡೆಸಿದವು. ಐಸ್‍ಕ್ರೀಂ, ಕಲ್ಲಂಗಡಿ, ಕಡ್ಲಿ ಗಿಡ, ಮಜ್ಜಿಗೆ, ಕಬ್ಬಿನ ಹಾಲು, ಶರಬತ್ ಸೇರಿದಂತೆ ಇನ್ನಿತರ ತಿನಿಸು, ತಂಪು ಪಾನೀಯಗಳ ಮಾರಾಟವೂ ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ತರಿಸಿತು.

ಹೋರಿ ಹಿಡಿದು ನಿಲ್ಲಿಸಿದ ಸಾಹಸಿಗರು: ಹಟ್ಟಿಹಬ್ಬದಲ್ಲಿ ಬಿರು ಬಿರುಸಾಗಿ ಓಡುತ್ತಿದ್ದ ಸಾಕಷ್ಟು ಹೋರಿಗಳನ್ನು ಹಿಡಿದು ನಿಲ್ಲಿಸಿ ಕೊಬ್ಬರಿ ಹರಿದುಕೊಳ್ಳಲು ಟೊಂಕ ಕಟ್ಟಿ ನಿಂತಿದ್ದ ಯುವಕರ ಸಂಖ್ಯೆಯೂ ಹೆಚ್ಚಿತ್ತು. ಧಾಡಸಿ ಹೋರಿಗಳ ಬೆನ್ನು ಹತ್ತಿ ಅವುಗಳನ್ನು ತಡೆದು ನಿಲ್ಲಿಸುತ್ತಿದ್ದ ಸಾಹಸಿಗಳಿಂದ ಹಟ್ಟಿಹಬ್ಬಕ್ಕೆ ಹೆಚ್ಚಿನ ಮೆರುಗು ಬಂದಿತ್ತು. ಒಂದೆಡೆ ದಷ್ಟಪುಷ್ಟ ಹೋರಿಗಳು ರಭಸವಾಗಿ ಓಡುತ್ತಿದ್ದರೆ ಇನ್ನೊಂದೆಡೆ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಿಯ ಬೆನ್ನು ಹತ್ತಿ ಹಠಕ್ಕೆ ಬಿದ್ದವರಂತೆ ಕೊಬ್ಬರಿ ಹರಿದುಕೊಳ್ಳುತ್ತಿದ್ದ ಯುವಕರ ಸಾಹಸ ಮೈ ಜುಮ್ ಎನ್ನಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು