ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತು ವ್ಯಸನದಿಂದ ದೂರವಿರಿ: ನ್ಯಾಯಾಧೀಶ ಪುಟ್ಟರಾಜು ಸಲಹೆ

ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಪುಟ್ಟರಾಜು ಸಲಹೆ
Last Updated 29 ಜೂನ್ 2022, 13:50 IST
ಅಕ್ಷರ ಗಾತ್ರ

ಹಾವೇರಿ: ‘ಜಗತ್ತಿನಾದ್ಯಂತ ಡ್ರಗ್ಸ್ ಜಾಲ ವ್ಯಾಪಿಸಿದೆ. ಯುವ ಸಮೂಹ ಮಾದಕ ವಸ್ತುಗಳ ದುಶ್ಚಟದಿಂದ ದೂರವಿದ್ದಾಗ ಮಾತ್ರ ಸುಭದ್ರ ಭಾರತ ನಿರ್ಮಾಣ ಸಾಧ್ಯ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಪುಟ್ಟರಾಜು ಹೇಳಿದರು.

ನಗರದ ಎಸ್.ಜೆ.ಎಂ ವಿದ್ಯಾಪೀಠದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಂಪರ್ಕ ಇಲಾಖೆ ಸಹಯೋಗದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು, ಗುಟ್ಕಾ, ಗಾಂಜಾ, ಅಫೀಮು, ಆಲ್ಕೋಹಾಲ್ ನಂತಹ ಮಾದಕ ವಸ್ತುಗಳ ಬಳಕೆ ಮನುಷ್ಯನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ಸುತ್ತಮುತ್ತಲಿನ ಪ್ರದೇಶವನ್ನು ಕಲುಷಿತಗೊಳಿಸುತ್ತದೆ. ಎಲ್ಲರೂ ಮಾದಕ ವಸ್ತುಗಳಿಂದ ದೂರವಿರಬೇಕು ಹಾಗೂ ಡ್ರಗ್ಸ್ ಮಾರಾಟಗಾರರು ಹಾಗೂ ವ್ಯಸನಿಗಳು ಕಂಡುಬಂದಲ್ಲಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ವ್ಯಸನದಿಂದ ಹೊರತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಉತ್ತಮ ಹವ್ಯಾಸ ರೂಢಿಸಿಕೊಳ್ಳಿ:

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಜೊತೆಗೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಅಗ್ಗದ ದರದಲ್ಲಿ ಮೊಬೈಲ್ ಹಾಗೂ ಅಂತರ್ಜಾಲ ಸಂಪರ್ಕ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಅನಗತ್ಯ ಚಾಟಿಂಗ್ ನಡೆಸಿ, ಕಾನೂನು ಸುವ್ಯವಸ್ಥೆಯನ್ನು ಕದಡುತ್ತಿದ್ದಾರೆ.ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳ ಓದು ಹಾಗೂ ಕ್ರೀಡೆಗಳಲ್ಲಿ ತೊಡಗುವ ಮೂಲಕ ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್ ಹಾವನೂರ ಮಾತನಾಡಿ, ‘ಡ್ರಗ್ಸ್ ಸೇವನೆ ಎಂಬುದು ಚಕ್ರವ್ಯೂಹವಿದ್ದಂತೆ. ಅದರಲ್ಲಿ ಒಮ್ಮೆ ನುಸುಳಿದರೆ ಹೊರಬರುವುದು ಕಷ್ಟ. ಯಾವುದೇ ಒಂದು ದೇಶದ ಯುವಶಕ್ತಿಯನ್ನು ಹಾಳು ಮಾಡಲು ಯುದ್ಧದ ಅವಶ್ಯಕತೆಯಿಲ್ಲ, ಕೇವಲ ಮಾದಕ ವಸ್ತುಗಳ ಬಳಕೆ ಒಂದೇ ಸಾಕು’ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ವಡ್ಡರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಶೋಕ ನೀರಲಗಿ, ಕಾರ್ಯದರ್ಶಿ ಈಶ್ವರ ನಂದಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್. ಎಸ್ ರಾಘವೇಂದ್ರಸ್ವಾಮಿ, ಶಹರ ಪೊಲೀಸ್‌ ಠಾಣೆ ಸಿ.ಪಿ.ಐ ಸುರೇಶ ಸಗರಿ ಹಾಗೂ ರೋಜಾ ಲಮಾಣಿ ಉಪಸ್ಥಿತರಿದ್ದರು.

ಮಾನಸಿಕ ರೋಗ ತಜ್ಞ ಡಾ. ವಿಜಯಕುಮಾರ ಬಳಿಗಾರ ಉಪನ್ಯಾಸ ನೀಡಿದರು. ಪ್ರಿಯಾ ರೊಡ್ಡನವರ ನಿರೂಪಿಸಿ, ಯಲ್ಲಪ್ಪ ಓಬಣ್ಣನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT