ಮಂಗಳವಾರ, ಜುಲೈ 27, 2021
21 °C
ಮೃತನ ತಾಯಿ ಶಾರದಮ್ಮ ಕಣ್ಣೀರು

ಕೋವಿಡ್‌ಗೆ ಮಹೇಶ ಬಲಿ: ಸಂಸಾರದ ಬಂಡಿಗೆ ಹೆಗಲು ಕೊಟ್ಟ ಸೊಸೆ

ಎಂ.ವಿ.ಗಾಡದ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ‘ಮನೆಗೆ ಆಸರೆಯಾಗಿದ್ದ ಮಗ ತೀರಿಕೊಂಡಿದ್ದಾನೆ. ಕುಟುಂಬದ ಬಂಡಿ ಸಾಗಿಸುವುದು ಕಷ್ಟವಾಗಿದೆ. ವಯಸ್ಸಾದ ಅತ್ತೆ–ಮಾವ, ಇಬ್ಬರು ಮಕ್ಕಳನ್ನು ನನ್ನ ಸೊಸೆ ಹೇಗೆ ನೋಡಿಕೊಳ್ಳುತ್ತಾಳೋ ಗೊತ್ತಿಲ್ಲ..’

ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ತಿಂಗಳ ಹಿಂದೆ ಕೋವಿಡ್‌ನಿಂದ ಮೃತಪಟ್ಟ ಮಹೇಶ ಚಿದಾನಂದಪ್ಪ ಬಡಿಗೇರ (37) ಅವರ ತಾಯಿ ಶಾರದಮ್ಮ ಹೀಗೆನ್ನುತ್ತ ಕಣ್ಣೀರಿಟ್ಟರು.

ಮೃತ ಮಹೇಶ ಅವರಿಗೆ 80 ವರ್ಷದ ತಂದೆ, 75 ವರ್ಷದ ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಒಂದನೇ ತರಗತಿ, ಎರಡನೇ ಮಗ ಎಲ್‌ಕೆಜಿ ಓದುತ್ತಿದ್ದಾನೆ.

ಮಹೇಶ ಬಡಿಗೇರ ಅವರು ಪ್ರತಿ ವರ್ಷ ಗಣೇಶ ಹಬ್ಬದ ಸಂದರ್ಭ ‘ಗಣೇಶ ಮೂರ್ತಿ’ ತಯಾರಿಸಿ, ಸುತ್ತ ಮುತ್ತಲ ಗ್ರಾಮಗಳಿಗೆ ಪೂರೈಕೆ ಮಾಡುತ್ತಿದ್ದರು. ಉಳಿದ ದಿನಗಳಲ್ಲಿ ಕೃಷಿ ಪರಿಕರಗಳಾದ ರೆಂಟೆ, ಕುಂಟೆ, ಕೂರಿಗೆಗಳನ್ನು ಸಿದ್ಧಪಡಿಸುವುದು ಈ ಕುಟುಂಬದ ಕಸುಬಾಗಿತ್ತು. ಅಷ್ಟೇ ಅಲ್ಲದೆ, ದುಂಡಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದರು.

ಮಹೇಶ ಅವರ ಸಾವು ಕುಟುಂಬವನ್ನು ಮಾತ್ರವಲ್ಲ; ಸುತ್ತಮುತ್ತಲ ಗ್ರಾಮಗಳ ಜನರನ್ನೂ ಮರುಗುವಂತೆ ಮಾಡಿದೆ. ಇವರ ಕುಟುಂಬಕ್ಕೆ ಸ್ವಂತ ಜಮೀನಿಲ್ಲ. ಈವರೆಗೆ ಮನೆ ಬಿಟ್ಟು ಹೊರಬಾರದ ಪತ್ನಿ ಸಾವಿತ್ರಿ ಅವರು ಈಗ ಅತ್ತೆ, ಮಾವ ಮತ್ತು ಮಕ್ಕಳನ್ನು ನೋಡಿಕೊಳ್ಳಲು, ಇತರರ ಹೊಲದಲ್ಲಿ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಕೇಳಿದ್ದಾರೆ. ಆದರೆ, ಮಕ್ಕಳನ್ನು ಬಿಟ್ಟಿರಲಾರದ ತಾಯಿ, ‘ನಮ್ಮೂರಿನ ಸರ್ಕಾರಿ ಶಾಲೆಯಲ್ಲೇ ಕಷ್ಟಪಟ್ಟು ಓದಿಸುತ್ತೇನೆ. ಎಲ್ಲಿಗೂ ಕಳುಹಿಸುವುದಿಲ್ಲ’ ಎಂದು ನೋವಿನಿಂದ ನುಡಿದಿದ್ದಾರೆ. 

‘ಹೆತ್ತ ಮಕ್ಕಳನ್ನು ಎಲ್ಲಿಗೋ ಕಳುಹಿಸಿ, ನಾನೊಬ್ಬಳೇ ಹೇಗೆ ಜೀವನ ಮಾಡಲಿ. ಕಷ್ಟವೋ– ಸುಖವೋ ನನ್ನ ಮಕ್ಕಳು ನನ್ನ ಕಣ್ಣ ಮುಂದೆ ಇರಬೇಕು. ನಮ್ಮ ಕಷ್ಟಕ್ಕೆ ಸರ್ಕಾರ ಮತ್ತು ದಾನಿಗಳು ಆರ್ಥಿಕ ನೆರವು ನೀಡಿದರೆ ಅನುಕೂಲವಾಗುತ್ತದೆ’ ಎಂದು ತಾಯಿ ಸಾವಿತ್ರಿ ದುಃಖ ತೋಡಿಕೊಂಡರು. 

‘ಅಣ್ಣನ ಸಾವಿನ ನಂತರ ಅವರ ಕುಟುಂಬದ ಸಮಸ್ಯೆಗೆ ಸ್ಪಂದಿಸಿ ನನ್ನ ಕೈಲಾದಷ್ಟು ಸಹಾಯ, ಸಹಕಾರ ಮಾಡುತ್ತೇನೆ’ ಎಂದು ಅವರ ದೊಡ್ಡಪ್ಪನ ಮಗ ಬಸವರಾಜ ಬಡಿಗೇರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು