ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆಯಲ್ಲಿ ಕೀಚಕನ ಗರಡಿ ಮನೆ- ಈ ಸ್ಥಳಕ್ಕಿದೆ ಮಹಾಭಾರತದ ನಂಟು

ಪಾಳುಬಿದ್ದ ಕಲ್ಲಿನ ಮಂಟಪಕ್ಕೆ ಬೇಕಿದೆ ಸಂರಕ್ಷಣೆ
Last Updated 21 ಆಗಸ್ಟ್ 2021, 12:33 IST
ಅಕ್ಷರ ಗಾತ್ರ

ಹಾನಗಲ್: ಪಟ್ಟಣದ ಹೊರಭಾಗದ ಹಳೆಕೋಟಿ ಪ್ರದೇಶದಲ್ಲಿ ಕಲ್ಲಿನ ಮಂಟಪ ಪಾಳು ಬಿದ್ದಿದೆ. ಸ್ಥಳೀಯರು ಇದಕ್ಕೆ ‘ಕೀಚಕನ ಗರಡಿ ಮನೆ’ ಎನ್ನುತ್ತಾರೆ. ನಿರ್ಲಕ್ಷಕ್ಕೆ ತುತ್ತಾಗಿರುವ ಈ ಪುರಾತನ ಸ್ಮಾರಕ ಕಾಲಗರ್ಭ ಸೇರುವ ಹಂತದಲ್ಲಿದೆ.

ಕೋಟಿ ಭಾಗವು ಹಲವು ಪ್ರಾಚೀನ ಪಳೆಯುಳಿಕೆಗಳನ್ನು ಒಳಗೊಂಡ ತಾಣವಾಗಿದೆ. ಇಲ್ಲಿ ಸಾಕಷ್ಟು ಶಿಲಾ ಶಾಸನಗಳು, ಕಲ್ಲಿನ ದೇವಸ್ಥಾನಗಳು, ಸ್ಮಾರಕಗಳು, ಕಲ್ಲಿನ ಮೂರ್ತಿಗಳು ಪತ್ತೆಯಾದ ಉದಾಹರಣೆಗಳಿವೆ.

ಈ ಪ್ರದೇಶ ಹಿಂದೆ ಅದ್ಭುತ ಕೋಟೆಯಾಗಿತ್ತು. ಇಲ್ಲಿ 13ರಿಂದ 15ನೇ ಶತಮಾನದ ತನಕ ಹಾನಗಲ್ ಕದಂಬರು ಆಳ್ವಿಕೆ ನಡೆಸಿದ್ದರು. ಈ ಸ್ಥಳವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡು ರಾಜ್ಯಭಾರ ಮಾಡಿದ್ದರು ಎಂಬುದಕ್ಕೆ ಶಿಲಾ ಶಾಸನಗಳು ಸಾಕ್ಷ ಒದಗಿಸುತ್ತವೆ.

ಇದಕ್ಕೆ ಪುಷ್ಠಿ ನೀಡುವಂತೆ ಇಲ್ಲಿ 16 ಸುತ್ತಿನ ಮಣ್ಣಿನ ಕೋಟೆ ನಿರ್ಮಾಣವಾಗಿತ್ತು ಎಂಬುದನ್ನು ಈಗಿನ ಅವಶೇಷಗಳು ಸಾರುತ್ತವೆ. ಇಟ್ಟಿಗೆ ಬಳಸಿ ನಿರ್ಮಿತ ಕೋಟೆಯ ಅಳಿದುಳಿದ ಭಾಗವನ್ನು ಇಂದಿಗೂ ಕಾಣಬಹುದು. ಇಲ್ಲಿನ ಮಣ್ಣಿನ ದಿಬ್ಬವನ್ನು ಕೆದಕಿದರೆ ಇಟ್ಟಿಗೆಗಳು ಗೋಚರಿಸುತ್ತವೆ. ಈ ವಿಶಾಲ ಪ್ರದೇಶದಲ್ಲಿ ಒಮ್ಮೆ ಕಣ್ಣಾಡಿಸಿದರೆ ಮಣ್ಣಿನಲ್ಲಿ ಹೂತುಹೋದ ಶಿಲಾ ಪ್ರಕಾರಗಳು ಗಮನ ಸೆಳೆಯುತ್ತವೆ.

ಇದೇ ಪ್ರದೇಶದಲ್ಲಿ ಸುಂದರ ಶಿಲ್ಪ ಕಲಾ ರಚನೆಯ ಮಂಟಪವೊಂದು ಶಿಥಿಲ ಸ್ಥಿತಿಯಲ್ಲಿದೆ. ತನ್ನ ಗತ ವೈಭವವನ್ನು ನೋಡುಗರಲ್ಲಿ ಹುಟ್ಟಿಸುವ ಪ್ರಯತ್ನದಲ್ಲಿದೆ. ಈ ಮಂಟಪಕ್ಕೆ ಸುತ್ತಲಿನ ಗ್ರಾಮಸ್ಥರು ‘ಕೀಚಕನ ಗರಡಿ’ ಎಂದು ಕರೆಯುತ್ತಾರೆ.

ಪೌರಾಣಿಕ ಹಿನ್ನೆಲೆ: ಮಹಾಭಾರತದ ಕಥೆಯಲ್ಲಿ ಪಾಂಡವರ ಅಜ್ಞಾನವಾಸದ ದಿನಗಳು ವಿರಾಟನಗರದಲ್ಲಿ ಕಳೆಯುತ್ತವೆ. ಪಾಂಡವರು ತಲೆಮರೆಸಿಕೊಂಡು ಕಳೆದ ದಿನಗಳು ಇಂದಿನ ಹಾನಗಲ್ ಪ್ರದೇಶ ಎಂಬುದು ಪ್ರತೀತಿ.

ಹಾನಗಲ್‌ಗೆ ವಿರಾಟನಗರ ಎಂಬುದಾಗಿ ಹೆಸರಿದೆ. ಇಲ್ಲಿ ಹರಿದ ಧರ್ಮಾ ನದಿ, ಕುಂತಿ ದಿಬ್ಬ ಮತ್ತಿತರ ಕುರುಹುಗಳನ್ನು ಈಗಲೂ ಜನರು ಇದು ಮಹಾಭಾರತದ ವಿರಾಟನಗರ ಎಂಬುದಾಗಿ ನಂಬಿದ್ದಾರೆ.

ವಿರಾಟ ರಾಜನ ಆಸ್ಥಾನದ ಪರಾಕ್ರಮಿ ಸೇನಾನಿ ಕೀಚಕ. ಅದ್ಭುತ ಪೈಲ್ವಾನ್‌. ನಿತ್ಯ ಗರಡಿಯಲ್ಲಿ ತಾಲೀಮು ಮಾಡುತ್ತಿದ್ದ. ದ್ರೌಪದಿಯನ್ನು ಛೇಡಿಸಿ, ಇದೇ ಗರಡಿಮನೆಯಲ್ಲಿ ಭೀಮಸೇನನಿಂದ ಹತ್ಯೆಗೀಡಾಗಿದ್ದ ಎಂಬುದು ಈ ಕಲ್ಲಿನ ಮಂಟಪದ ಹಿಂದಿನ ಪೌರಾಣಿಕ ಸಾರಾಂಶ.

‘ಪ್ರಾಚೀನ ಸ್ಮಾಕರಗಳ ರಕ್ಷಣೆ ಜವಾಬ್ದಾರಿ ಹೊತ್ತಿರುವ ಇಲಾಖೆಗಳು ಈಗಲಾದರೂ ‘ಕೀಚಕನ ಗರಡಿ’ ಜೀರ್ಣೋದ್ಧಾರಕ್ಕೆ ಮುಂದಾಗಬೇಕು. ಅಲ್ಲದೆ, ಕೋಟಿ ಭಾಗದಲ್ಲಿ ವ್ಯವಸ್ಥಿತವಾಗಿ ಉತ್ಖನನ ಕೈಗೊಳ್ಳಬೇಕು. ಕಾಲಗರ್ಭದಲ್ಲಿ ಹುದುಗಿರುವ ಅವಶೇಷಗಳ ರಕ್ಷಣೆಯಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆ ಶ್ರೀಮಂತಗೊಳಿಸುವ ಸ್ಮಾರಕಗಳ ವೈಭವ ಮರುಕಳಿಸಬೇಕು’ ಎನ್ನುತ್ತಾರೆ ಹಾನಗಲ್‌ ನಿವಾಸಿಮಾರ್ತಾಂಡರಾವ್‌ ಪಾರಗಾವಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT