ಬುಧವಾರ, ಡಿಸೆಂಬರ್ 8, 2021
24 °C
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ತಪ್ಪಿಲ್ಲ ಬಯಲು ಬಹಿರ್ದೆಸೆ

ತಪ್ಪಿಲ್ಲ ಬಯಲು ಬಹಿರ್ದೆಸೆ: ಕಡತದಲ್ಲಷ್ಟೇ ಹಾವೇರಿ ಜಿಲ್ಲೆ ಬಯಲು ಶೌಚ ಮುಕ್ತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯನ್ನು 2018ರಲ್ಲೇ ‘ಬಯಲು ಶೌಚ ಮುಕ್ತ’ (ಒಡಿಎಫ್‌) ಎಂದು ಸರ್ಕಾರ ಘೋಷಿಸಿದೆ. ಆದರೆ, ಈ ಘೋಷಣೆ ಕಡತಗಳಿಗೆ ಮಾತ್ರ ಸೀಮಿತವಾಗಿದೆ. ವಾಸ್ತವದಲ್ಲಿ, ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಜನರು ಇಂದಿಗೂ ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ. 

ಹಳ್ಳಿಗಳಲ್ಲಿ ನಸುಕಿನ ವೇಳೆಯಲ್ಲಿ ಕೆರೆ–ಕಟ್ಟೆಗಳತ್ತ ಚೆಂಬು ಹಿಡಿದುಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ನಗರ ಮತ್ತು ಪಟ್ಟಣಗಳಲ್ಲಿ ರೈಲ್ವೆ ಹಳಿ, ರಸ್ತೆಬದಿ ಮತ್ತು ಖಾಲಿ ನಿವೇಶನಗಳೇ ಬಯಲು ಶೌಚದ ತಾಣಗಳಾಗಿವೆ. ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ತೀವ್ರ ಕೊರತೆಯಿದ್ದು, ಜನರು ನಗರ ಸ್ಥಳೀಯ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.  

ಹಾವೇರಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 2,54,180 ಕುಟುಂಬಗಳು ಹಾಗೂ ನಗರ ಪ್ರದೇಶಗಳಲ್ಲಿ 76,234 ಕುಟುಂಬಗಳು ಸೇರಿದಂತೆ ಒಟ್ಟು 3,30,414 ಕುಟುಂಬಗಳಿವೆ. ಗ್ರಾಮೀಣ ಪ್ರದೇಶದಲ್ಲಿ 2,15,004 ಕುಟುಂಬಗಳಿಗೆ ವೈಯಕ್ತಿಕ ಕೌಟುಂಬಿಕ ಶೌಚಾಲಯ ಸೌಲಭ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಅಂಕಿಅಂಶಗಳು ತಿಳಿಸುತ್ತವೆ. ಅಂದರೆ ಶೇ 84ರಷ್ಟು ಕುಟುಂಬಗಳಿಗೆ ಮಾತ್ರ ಶೌಚಾಲಯ ಸೌಲಭ್ಯವಿದೆ. 

ಜಾಗದ ಸಮಸ್ಯೆ, ಅಣ್ಣ–ತಮ್ಮಂದಿರ ವ್ಯಾಜ್ಯ, ನೀರಿನ ಸಮಸ್ಯೆ ಮುಂತಾದ ಕಾರಣಗಳಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ತೊಡಕಾಗಿದೆ. ‘ಸ್ವಚ್ಛ ಭಾರತ ಮಿಷನ್‌’ ಯೋಜನೆಯಡಿ 100ಕ್ಕೂ ಹೆಚ್ಚು ‘ಸಮುದಾಯ ಶೌಚಾಲಯ’ಗಳನ್ನು ಜಿಲ್ಲೆಯ ವಿವಿಧೆಡೆ ನಿರ್ಮಿಸಲಾಗಿದೆ. ಶೇ 100ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿಗಳು. 

ರಸ್ತೆಯಲ್ಲೇ ಶೌಚ!

ಹಿರೇಕೆರೂರು: ಪಟ್ಟಣದ ಸುಣ್ಣದ ಕಾಲುವೆ ಸುತ್ತಮುತ್ತ, ದುರ್ಗಾದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆ ಮುಂತಾದ ಕಡೆಗಳಲ್ಲಿ ಬಯಲುಶೌಚ ನಿತ್ಯವೂ ಕಂಡು ಬರುತ್ತದೆ. ಇದು ಜನತೆಗೆ ಕಿರಿಕಿರಿಯನ್ನು ಉಂಟು ಮಾಡುತ್ತಿದೆ.

‘ಎರಡು ವರ್ಷಗಳ ಹಿಂದೆ ಪಟ್ಟಣವನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಿದ್ದು, ಪ್ರತಿಯೊಂದು ಕುಟುಂಬಕ್ಕೆ ಶೌಚಾಲಯ ನಿರ್ಮಿಸಿ ಕೊಟ್ಟಿದ್ದೇವೆ. ಆದರೆ ಕೆಲವರು ಬಯಲಿನಲ್ಲಿಯೇ ಬಹಿರ್ದೆಸೆಗೆ ಹೋಗುತ್ತಾರೆ. ಬೆಳಗಿನ ಜಾವ ಹೋಗಿ ಅವರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ತಿಳಿಸಿದರು.

ಅರಿವಿನ ಕೊರತೆ

ಸವಣೂರ: ತಾಲ್ಲೂಕಿನ 64 ಹಳ್ಳಿಗಳ ಮನೆಗಳಿಗೆ ಶೌಚ ಗೃಹಗಳನ್ನು ನಿರ್ಮಾಣ ಮಾಡಿ ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ತಾಲ್ಲೂಕಿನಲ್ಲಿ 2014ರಿಂದ ಇದುವರೆಗೂ ಒಟ್ಟು 16,297 ಶೌಚ ಗೃಹಗಳನ್ನು ನಿರ್ಮಾಣ ಮಾಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಇದರಲ್ಲಿ 2018ರಿಂದ ಎಲ್ಓಬಿ 966 ಎನ್ಎಲ್ಓಬಿ 1058 ಫೇಸ್2 ರಲ್ಲಿ 428 ಸೇರಿ ಒಟ್ಟು 2452 ನಿರ್ಮಿಸಲಾಗಿದೆ. ಇದುವರೆಗೂ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಸರೂರ ಗ್ರಾ.ಪಂ. 1154 ನಿರ್ಮಾಣ ಮಾಡಿದರೆ, ತೊಂಡೂರ ಗ್ರಾ.ಪಂ 484 ಶೌಚಗೃಹಗಳನ್ನು ನಿರ್ಮಾಣ ಮಾಡಿ ತಾಲ್ಲೂಕಿನಲ್ಲಿಯೇ ಹಿಂದುಳಿದಿದೆ. ಆದರೆ, ಇನ್ನೂ ಕೆಲವು ಹಳ್ಳಿಗಳಲ್ಲಿ ಬಯಲು ಶೌಚ ಇಂದಿಗೂ ನಿಂತಿಲ್ಲ. ಜನರಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಅರಿವಿನ ಕೊರತೆ ಇರುವುದು ಕೂಡ ಇದಕ್ಕೆ ಕಾರಣ.

ತಾಲ್ಲೂಕುವಾರು ವೈಯಕ್ತಿಕ ಕೌಟುಂಬಿಕ ಶೌಚಾಲಯಗಳ ವಿವರ

ತಾಲ್ಲೂಕು; ಗ್ರಾಮೀಣ ಕುಟುಂಬ;ಶೌಚಾಲಯಗಳ ಸಂಖ್ಯೆ

ಬ್ಯಾಡಗಿ;23,094;21,773

ಹಾನಗಲ್‌;47,652;38,802

ಹಾವೇರಿ;43,966;32,976

ಹಿರೇಕೆರೂರು;42,903;40,252

ರಾಣೆಬೆನ್ನೂರು;44,321;35,605

ಸವಣೂರು;24,126;20,815

ಶಿಗ್ಗಾವಿ;28,118;24,781

ಒಟ್ಟು;2,54,180;2,15,004

ಫಲಾನುಭವಿಗಳ ಪರದಾಟ

ರಾಣೆಬೆನ್ನೂರು: ಬಯಲು ಶೌಚ ಮುಕ್ತ ಸಂಪೂರ್ಣ ಮುಗಿದಿದೆ ಎಂದು ರಾಜ್ಯ ಸರ್ಕಾರ ವರದಿ ನೀಡಿದ್ದಕ್ಕೆ ಕೇಂದ್ರ ಸರ್ಕಾರ ಅನುದಾನ ಬಂದ್‌ ಮಾಡಿದೆ ಎಂದು ವನಸಿರಿ ಸಂಸ್ಥೆಯ ಅಧ್ಯಕ್ಷ ಎಸ್‌.ಡಿ. ಬಳಿಗಾರ ದೂರಿದರು.

ಈಗ ಶೌಚಾಲಯ ಕಟ್ಟಿಸಿಕೊಂಡವರಿಗೆ ಅನುದಾನ ಸಿಗುತ್ತಿಲ್ಲ. ಕಟ್ಟಿಸಿಕೊಂಡ ಫಲಾನುಭವಿಗಳ ಪರದಾಟ ಹೇಳತೀರದು ಎನ್ನುತ್ತಾರೆ ಅವರು.

‘ಸ್ವಚ್ಛ ಭಾರತ ಯೋಜನೆಯಡಿ 2020-21ನೇ ಸಾಲಿಗೆ ತಾಲ್ಲೂಕಿನಾದ್ಯಂತ 821 ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿತ್ತು. ನೂರಕ್ಕೆ ನೂರಷ್ಟು ಗುರಿ ಮುಟ್ಟಿದ್ದೇವೆ. ಸಾಮಾನ್ಯರಿಗೆ ₹12 ಸಾವಿರ ಮತ್ತು ಎಸ್‌ಸಿ ಮತ್ತು ಎಸ್‌ಟಿ ಜನರಿಗೆ ₹15 ಸಾವಿರ ಅನುದಾನ ಬರುತ್ತದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್‌. ಮಲ್ಲಾಡದ.

ತಾಲ್ಲೂಕಿನ ತುಂಗಭದ್ರಾ ನದಿ ತೀರದ ಪ್ರದೇಶಗಳಲ್ಲಿ ಶೇ 60ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯಗಳಿಲ್ಲ. ದೇವರಗುಡ್ಡ, ಹೊನ್ನತ್ತಿ ಮತ್ತು ಮೇಡ್ಲೇರಿ ಗ್ರಾಮಗಳಲ್ಲಿ ಶೌಚಾಲಯ ಕೊರತೆಯಿಂದ ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳು ಪರದಾಡುತ್ತಿದ್ದಾರೆ. ದೇವರಗುಡ್ಡ ಜಾತ್ರೆಯ ಸಮಯದಲ್ಲಿ ಭಕ್ತರ ಪಾಡು ಹೇಳತೀರದು ಎಂದು ರಾಣೆಬೆನ್ನೂರಿನ ಸಮೃದ್ಧಿ ಸಂಸ್ಥೆಯ ಭಾಗ್ಯಾ ಬಿ.ವಿ ದೂರಿದರು.

ಪಾಳುಬಿದ್ದ ಶೌಚಾಲಯ

ಶಿಗ್ಗಾವಿ: ಗ್ರಾಮೀಣ ಭಾಗದಲ್ಲಿ ಸರ್ಕಾರ ನಿರ್ಮಿಸಿದ ಶೌಚಾಲಯಗಳನ್ನು ಜನ ಬಳಕೆ ಮಾಡುತ್ತಿಲ್ಲ. ಇನ್ನು ಕೆಲವು ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಿದರೂ ಈವರೆಗೆ ಶೌಚಾಲಯಗಳು ಮಂಜೂರಾಗಿಲ್ಲ. ಇದ್ದ ಶೌಚಾಲಯಗಳಲ್ಲಿ ತ್ಯಾಜ್ಯ ವಸ್ತುಗಳನ್ನು ತುಂಬಿ ಬಿಡುತ್ತಿದ್ದಾರೆ. ಹೀಗಾಗಿ ಬಯಲು ಶೌಚಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ. 

ಬಾಡ ಗ್ರಾಮದಲ್ಲಿ ಹತ್ತು ವರ್ಷಗಳ ಹಿಂದೆ ನಿರ್ಮಲ ಗ್ರಾಮ ಯೋಜನೆಯಡಿ ನಿರ್ಮಿಸಿದ ಬಯಲು ಶೌಚಾಲಯಗಳನ್ನು ಗ್ರಾಮಸ್ಥರು ಸರಿಯಾಗಿ ಬಳಕೆ ಮಾಡದೆ ಹಾಗೂ ಗ್ರಾಮ ಪಂಚಾಯ್ತಿ ಸರಿಯಾಗಿ ನಿರ್ವಹಣೆ ಮಾಡದೆ ಸಂಪೂರ್ಣ ಹಾಳು ಬಿದ್ದಿವೆ. ಬಾಗಿಲು, ಚಾವಣಿ ಶಿಥಿಲಗೊಂಡಿವೆ. ಸುತ್ತಲೂ ಗಿಡಗಂಟಿಗಳು ಬೆಳೆದು ಕಾಡಿನಂತೆ ಕಾಣುತ್ತಿವೆ.

₹1 ಕೋಟಿ ಅನುದಾನದ ನಿರೀಕ್ಷೆ

ಬ್ಯಾಡಗಿ: ತಾಲ್ಲೂಕಿನ 66 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲಾಗಿದೆ. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ 2ನೇ ಹಂತದಲ್ಲಿ ಕಳೆದ ವರ್ಷ 241 ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ತಾಲ್ಲೂಕು ಪಂಚಾಯ್ತಿಯಿಂದ ಒಟ್ಟಾರೆ ₹31.56 ಲಕ್ಷ ಅನುದಾನ ಖರ್ಚಾಗಿದೆ.

ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ತಾಲ್ಲೂಕಿನಲ್ಲಿ 3ನೇ ಹಂತದಲ್ಲಿ ಕೈಗೊಳ್ಳುವ ಶೌಚಾಲಯ ನಿರ್ಮಾಣಕ್ಕೆ ಅಂದಾಜು ₹1 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದು ಇಒ ಎನ್‌.ತಿಮ್ಮಾರೆಡ್ಡಿ ತಿಳಿಸಿದರು.

ಬ್ಯಾಡಗಿ ಪಟ್ಟಣವನ್ನು ಬಯಲು ಶೌಚ ಮುಕ್ತಗೊಳಿಸಲಾಗಿದೆ. ಮತ್ತೊಮ್ಮೆ ಶೌಚಾಲಯ ಇಲ್ಲದ ಮನೆಗಳ ಸಮೀಕ್ಷೆ ನಡೆಸಲಾಗುವುದು. ಬ್ಯಾಡಗಿ ಪಟ್ಟಣ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವಕ್ಕೆ ಆಯ್ಕೆಯಾಗಿದ್ದು, ಇನ್ನಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರ ಹೇಳಿದರು.

ಶೌಚಾಲಯಗಳು ನಿರ್ಮಾಣವಾದ ನಂತರ ಬಾಡಾ ಗ್ರಾಮಸ್ಥರಿಗೆ ಒಪ್ಪಿಸಲಾಯಿತು. ಬಳಕೆಯನ್ನು ಸರಿಯಾಗಿ ಮಾಡದ ಕಾರಣ ಹಾಳಾಗಿವೆ
– ರಾಮಕೃಷ್ಣ ಗುಡಿಗೇರಿ, ಬಾಡಾ ಗ್ರಾ.ಪಂ ಪಿಡಿಒ

ಶಿಗ್ಗಾವಿ ತಾಲ್ಲೂಕಿನಲ್ಲಿ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಎರಡನೇ ಹಂತದಲ್ಲಿ 1836 ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ
– ಪ್ರಶಾಂತ ತುರ್ಕಾಣಿ, ತಾಲ್ಲೂಕು ಪಂಚಾಯ್ತಿ ಇಒ

ನಮ್ಮ ಎನ್‌ಜಿಒದಿಂದ 2 ಸಾವಿರಕ್ಕೂ ಹೆಚ್ಚು ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಈವರೆಗೂ ಫಲಾನುಭವಿಗಳಿಗೆ ಹಣ ಬಂದಿಲ್ಲ
– ಎಸ್‌.ಡಿ. ಬಳಿಗಾರ, ವನಸಿರಿ ಸಂಸ್ಥೆಯ ಅಧ್ಯಕ್ಷ, ರಾಣೆಬೆನ್ನೂರು

 

 

*****

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಪ್ರಮೀಳಾ ಹುನಗುಂದ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಗಣೇಶಗೌಡ ಎಂ.ಪಾಟೀಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು