ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಪಟ್ಟಣ | ಶ್ವಾನಗಳ ಅಟ್ಟಹಾಸಕ್ಕೆ ಜನರು ಹೈರಾಣ

ಎಸ್‌.ಎಸ್‌.ನಾಯಕ
Published 23 ನವೆಂಬರ್ 2023, 3:46 IST
Last Updated 23 ನವೆಂಬರ್ 2023, 3:46 IST
ಅಕ್ಷರ ಗಾತ್ರ

ಕುಮಾರಪಟ್ಟಣ: ಮನೆ, ತೋಟ ಸೇರಿದಂತೆ ಸ್ವಯಂ ರಕ್ಷಣೆಗಾಗಿ ನಾಯಿಗಳನ್ನು ಜನರು ನಾಯಿಗಳನ್ನು ಸಾಕುತ್ತಿದ್ದರು. ಮನೆಯಲ್ಲಿ ಇರಬೇಕಾದ ನಾಯಿಗಳು ಬೀದಿಗಿಳಿದಿವೆ. ಆದರೆ ನಾಯಿಗಳನ್ನು ಕಂಡರೆ ಭಯ ಪಡುವಂಥ ಪರಿಸ್ಥಿತಿ ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ ನಿರ್ಮಾಣವಾಗಿದೆ. ನಾಯಿಗಳಿಂದ ರಕ್ಷಿಸಿ ಎಂದು ಜನರು ಮೊರೆಯಿಡುವಂತಾಗಿದೆ.

ಗ್ರಾಮದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ನಾಯಿಗಳದೇ ಕಾರುಬಾರು. ಸುಮಾರು 10-15 ನಾಯಿಗಳ ಹಿಂಡು ಸಾಮಾನ್ಯವಾಗಿ ಕಂಡು ಬರುತ್ತಿದೆ. ಮೈಮರೆತು ಓಡಾಡುವವರನ್ನು ಕಚ್ಚಿ ಗಾಯಗೊಳಿಸುತ್ತಿವೆ. ಬೀದಿ ನಾಯಿಗಳಿಗೆ ಕಡಿವಾಣ ಇಲ್ಲದಂತಾಗಿದೆ. ಏಕಾಏಕಿ ಜನರ ಮೈಮೇಲೆ ಎರಗುತ್ತವೆ. ಚಿಕ್ಕವರಿಂದ ಹಿಡಿದು ಶಾಲಾ ಮಕ್ಕಳು, ಮಹಿಳೆಯರು, ವಯಸ್ಸಾದವರು ಭಯದಲ್ಲೆ ಓಡಾಡುವಂತಾಗಿದೆ. 6 ತಿಂಗಳ ಹಿಂದೆಯಷ್ಟೇ ಪಂಚಾಯ್ತಿ ವತಿಯಿಂದ 50ಕ್ಕೂ ಹೆಚ್ಚು ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಿದ್ದರೂ ಜನರ ಸಂಕಟ ಮಾತ್ರ ದೂರವಾಗಿಲ್ಲ.

ಗ್ರಾಮ ಪಂಚಾಯ್ತಿ ಆಸುಪಾಸು, ಬಾವಿಕಟ್ಟೆ, ಬಲಮುರಿ ಗಣಪತಿ ದೇವಸ್ಥಾನದ ಆವರಣ, ಹಳೇ ಮಸೀದಿ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ಕಾಲೊನಿ, ಬಸವೇಶ್ವರ ನಗರ, ಚೌಡೇಶ್ವರಿ ದೇವಸ್ಥಾನದ ಆವರಣ, ವಾಲ್ಮೀಕಿ ವೃತ್ತ, ವಿನಾಯಕ ನಗರ, ಮಾಂಸದ ಅಂಗಡಿಗಳ ಸುತ್ತಮುತ್ತ ಬೀದಿ ನಾಯಿಗಳು ದಂಡೇ ಕಂಡು ಬರುತ್ತದೆ. ಜನರನ್ನು ಕಂಡರೆ ಬೊಗಳುತ್ತವೆ, ಮೊರೆಯಿಡುತ್ತವೆ. ಬೀದಿ ನಾಯಿಗಳ ಅಟ್ಟಹಾಸ ಜನರಲ್ಲಿ ಭೀತಿ ಹುಟ್ಟುವಂತೆ ಮಾಡಿದೆ.

ಕರುವಿಗೆ ಗಾಯ

ಆರು ತಿಂಗಳ ಹಿಂದೆಯಷ್ಟೇ ಸದಾಶಿವಪ್ಪ ಅವರಿಗೆ ಸೇರಿದ ಎಳೆ ಕರುವನ್ನು ಬೀದಿ ನಾಯಿಗಳು ಮನಬಂದಂತೆ ಕಚ್ಚಿ ಗಾಯ ಪಡಿಸಿದ್ದವು. ಇತ್ತೀಚೆಗೆ ಅನನ್ಯ ಎಂಬ ಶಾಲಾ ಬಾಲಕಿಯನ್ನು ಕಚ್ಚಿ ಗಾಯಪಡಿಸಿದ್ದವು. ಕಳೆದ ವಾರ ಅಂಬೇಡ್ಕರ್‌ ಕಾಲೊನಿಯಲ್ಲಿ 5 ಮಂದಿಯನ್ನು ಕಚ್ಚಿ ಜನರಲ್ಲಿ ಭೀತಿ ಹೆಚ್ಚುವಂತೆ ಮಾಡಿವೆ. ಪ್ರಾಣಿಗಳಿಗಿಂತ ಜನರ ಮೇಲೆ ಹೆಚ್ಚು ದಾಳಿ ಮಾಡುತ್ತಿವೆ. ನಾಯಿ ನಂಜಿನಿಂದ ಪಾರಾಗಲು ಗಾಯಗೊಂಡವರು ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎನ್ನುತ್ತಾರೆ ನಾಯಿ ಕಡಿತಕ್ಕೆ ಒಳಗಾದವರು.

ನೆಮ್ಮದಿಯಿಲ್ಲ

ಬೀದಿ ನಾಯಿಗಳ ಹಾವಳಿಂದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ರಾತ್ರಿ ವೇಳೆ ಜೋರಾಗಿ ಬೊಗಳುತ್ತವೆ, ತಡರಾತ್ರಿವರೆಗೆ ಕೆಲಸ ಮುಗಿಸಿ ಬರುವ ಬೈಕ್‌ ಸವಾರರು ಹಾಗೂ ಪಾದಾಚಾರಿಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ.

ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತವೆ. ಜನರ ಭಯವಿಲ್ಲದೆ ಗಂಡು ಮತ್ತು ಹೆಣ್ಣು ನಾಯಿಗಳು ಚಿನ್ನಾಟ ಆಡುತ್ತವೆ. ನಾಯಿಗಳನ್ನು ಕಂಡರೆ ಸಂಕಟ ಶುರುವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಬಸವೇಶ್ವರ ನಗರದ ನಿವಾಸಿಗಳು.

ನಿದ್ರೆಗೆ ಭಂಗ

'ರಾತ್ರಿ ವೇಳೆ ಜನರ ನೆಮ್ಮದಿಯ ನಿದ್ರೆಗೆ ಭಂಗ ತಂದೊಡ್ಡಿವೆ.. ಬೇರೆ ಕಡೆಯಿಂದ ಅಪರಿಚಿತ ನಾಯಿ ಬಂದರೆ ಸಾಕು ನಾಯಿಗಳ ದೊಡ್ಡ ದಂಡು ಸೇರುತ್ತದೆ. ನಾಯಿಗಳ ಜಗಳ ಶುರುವಾಗಿ ಜೋರಾಗಿ ಬೊಗಳುತ್ತವೆ. ಗ್ರಾಮ ಪಂಚಾಯ್ತಿ ಹಾಗೂ ಸಂಬಂಧ ಇಲಾಖೆಯವರು ಜನರಿಗೆ ತೊಂದರೆ ಕೊಡುವ ಬೀದಿ ನಾಯಿಗಳನ್ನು ಹಿಡಿದು ಸಾಗಿಸಿ’ ಎಂದು ಸ್ಥಳೀಯ ನಿವಾಸಿ ಬಸವರಾಜಪ್ಪ ಆಗ್ರಹಿಸುತ್ತಾರೆ.

ನಿಯತ್ತಿನ ಪ್ರಾಣಿಗೆ ನೆಲೆಯಿಲ್ಲ

ಮೊದಲು ಜನರು ಪ್ರತಿ ಮನೆಯಲ್ಲೂ ಹೊಟ್ಟೆ ತುಂಬಾ ಆಹಾರ ಕೊಟ್ಟು ಒಂದೆರಡು ಶ್ವಾನಗಳನ್ನು ಸಾಕುತ್ತಿದ್ದರು. ಈಚೆಗೆ ಶೋಕಿಗಾಗಿ ಜನರು ವಿಭಿನ್ನ ತಳಿಯ ಶ್ವಾನಗಳನ್ನು ಸಾಕುತ್ತಾರೆ. ರೈತರು ಜಾನುವಾರು ಸಾಕಣೆ ಮಾಡುವವರು ಕುರಿಗಾಹಿಗಳು ಮಾತ್ರ ನಾಯಿಗಳನ್ನು ಪೋಷಣೆ ಮಾಡುತ್ತಾರೆ. ಊರುಗಳಲ್ಲಿ ನಾಯಿಗಳನ್ನು ಸಾಕುವವರು ಇಲ್ಲದೆ ಬೀದಿಗೆ ಬಂದಿವೆ. ಆಹಾರಕ್ಕಾಗಿ ಮಾಂಸ ಕೋಳಿ ಮೀನು ಮಾರಾಟ ಮಾಡುವ ಅಂಗಡಿಗಳಿಂದ ಸಿಗುವ ಮೂಳೆಗಾಗಿ ಗೋಗರೆಯುತ್ತವೆ. ಶ್ವಾನಗಳಿಗೆ ನೆಲೆಯಿಲ್ಲದಂತಾಗಿದೆ. ನಿಯತ್ತಿಗೆ ಹೆಸರಾದ ನಾಯಿಗೆ ಆಹಾರ ಕೊಟ್ಟರೆ ಅದು ನಮ್ಮನ್ನು ಕಾಯುತ್ತದೆ. ಅವು ಯಾರಿಗೂ ತೊಂದರೆ ಮಾಡುವುದಿಲ್ಲ ಎನ್ನುತ್ತಾರೆ ಶ್ವಾನ ಪ್ರಿಯರು.

ನಾಯಿಗಳ ಹಾವಳಿ ತಪ್ಪಿಸುವ ದೃಷ್ಟಿಯಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಕೂಡಲೇ ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಕ್ರಮ ತೆಗೆದುಕೊಳ್ಳಲಾಗುವುದು
ದೇವರಾಜ್‌, ಪಿಡಿಒ, ಕೊಡಿಯಾಲ
ಚಿಕ್ಕ ಮಕ್ಕಳು ಹಾಗೂ ವೃದ್ಧರನ್ನು ಮನೆಯಿಂದ ಹೊರಗೆ ಬಿಡಲು ಭಯ ಪಡುವಂತಾಗಿದೆ. ಬೀದಿ ನಾಯಿಗಳಿಂದ ಜನರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕು
ಮಹಾಂತೇಶ ಕೊಡಿಯಾಲ, ಸ್ಥಳೀಯ ನಿವಾಸಿ
ಮಹಾಂತೇಶ್‌ ಕೊಡಿಯಾಲ ಎಂಬುವವರ ಕಾಲಿಗೆ ನಾಯಿ ಕಚ್ಚಿ ಗಾಯಗೊಳಿಸಿರುವುದು
ಮಹಾಂತೇಶ್‌ ಕೊಡಿಯಾಲ ಎಂಬುವವರ ಕಾಲಿಗೆ ನಾಯಿ ಕಚ್ಚಿ ಗಾಯಗೊಳಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT