ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಸೌಹಾರ್ದ ಬೆಸೆದ ‘ಸಕ್ಕರೆ ಗೊಂಬೆ’

‘ಗೌರಿ ಹುಣ್ಣಿಮೆ’ಗಾಗಿ 30 ವರ್ಷಗಳಿಂದ ಮುಸ್ಲಿಂ ಕುಟುಂಬದಿಂದ ‘ಸಕ್ಕರೆ ಆರತಿ’ ತಯಾರಿಕೆ
Last Updated 29 ನವೆಂಬರ್ 2020, 5:12 IST
ಅಕ್ಷರ ಗಾತ್ರ
ADVERTISEMENT
"ಹಾವೇರಿ ನಗರದಲ್ಲಿ ‘ಗೌರಿ ಹುಣ್ಣಿಮೆ’ಗಾಗಿ ಸಕ್ಕರೆ ಗೊಂಬೆ ಖರೀದಿಸುತ್ತಿರುವ ಮಹಿಳೆಯರು"

ಹಾವೇರಿ: ಉತ್ತರ ಕರ್ನಾಟಕದಲ್ಲಿ ಹಿಂದೂಗಳು ಶ್ರದ್ಧಾ,ಭಕ್ತಿಯಿಂದ ಆಚರಿಸುವ ‘ಗೌರಿ ಹುಣ್ಣಿಮೆ’ಗಾಗಿ ಕಳೆದ 30 ವರ್ಷಗಳಿಂದ ಹಾವೇರಿ ನಗರದಲ್ಲಿ ಮುಸ್ಲಿಂ ಕುಟುಂಬವೊಂದು ‘ಸಕ್ಕರೆ ಗೊಂಬೆ’ (ಸಕ್ಕರೆ ಆರತಿ)ಗಳನ್ನು ತಯಾರಿಸಿ, ಸೌಹಾರ್ದದ ಸಿಹಿಯನ್ನು ಹಂಚುತ್ತಿದೆ.

ನಗರದ ಮೇಲಿನಪೇಟೆಯಲ್ಲಿರುವ ‘ಜಯ ಕರ್ನಾಟಕ ಸ್ವೀಟ್‌ ಮಾರ್ಟ್‌’ ಮಾಲೀಕರಾದ ಬಾಬಣ್ಣ ವೀರಾಪುರ ಕುಟುಂಬದವರು ಈ ಬಾರಿಯ ಗೌರಿ ಹುಣ್ಣಿಮೆಗಾಗಿ ಕಳೆದ 10 ದಿನಗಳಿಂದ ‘ಸಕ್ಕರೆ ಗೊಂಬೆ’ ತಯಾರಿಸುವಲ್ಲಿ ನಿರತರಾಗಿದ್ದಾರೆ. ಗ್ರಾಹಕರು ಮತ್ತು ವ್ಯಾಪಾರಿಗಳು ಮುಗಿಬಿದ್ದು ‘ಸಕ್ಕರೆ ಗೊಂಬೆ‌’ ಖರೀದಿಸುತ್ತಿದ್ದಾರೆ.

ಹೆಣ್ಣುಮಕ್ಕಳು ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಗೌರಿ ಹುಣ್ಣಿಮೆಯ ವಿಶೇಷ. ಕಾರ್ತಿಕ ಮಾಸದ ಹದಿನೈದು ದಿನ ಪೂಜಿಸಿ, ಹುಣ್ಣಿಮೆಯ ದಿನ ಸಂಪನ್ನಗೊಳಿಸುವ ಗೌರಿ ಹುಣ್ಣಿಮೆ ಹಬ್ಬವು ಉತ್ತರ ಕರ್ನಾಟಕದ ರೈತಾಪಿ ಜನರ ವಿಶಿಷ್ಟ ಹಬ್ಬ.

ತರಹೇವಾರಿ ಗೊಂಬೆ: ತೇರು, ಮಂಟಪ, ಗೋಪುರ, ತುಳಸಿಕಟ್ಟೆ, ಶಿವ–ಪಾರ್ವತಿ, ಗೌರಿ, ಗಣೇಶ, ಬಸವಣ್ಣ, ಆನೆ, ಕುದುರೆ, ಒಂಟೆ, ಮುಂತಾದ ಆಕೃತಿಗಳು ಸಕ್ಕರೆ ಪಾಕದಲ್ಲಿ ರೂಪುಗೊಳ್ಳುತ್ತವೆ. ಬಿಳಿ, ಕೆಂಪು, ಕೇಸರಿ, ಹಸಿರು, ಹಳದಿ ಮುಂತಾದ ಬಣ್ಣಗಳಲ್ಲಿ ಕಂಗೊಳಿಸುವ ‘ಸಕ್ಕರೆ ಗೊಂಬೆ’ಗಳು ನೋಡುವುದಕ್ಕೆ ಅಷ್ಟೇ ಅಲ್ಲ, ತಿನ್ನುವುದಕ್ಕೂ ಸ್ವಾದಿಷ್ಟವಾಗಿರುತ್ತವೆ. ಒಂದೊಂದು ಗೊಂಬೆಯೂ ಒಂದೊಂದು ಕತೆಯನ್ನು ಸಂಕೇತಿಸುತ್ತವೆ. ಬಾಂಧವ್ಯ ವೃದ್ಧಿ, ಸಾಮರಸ್ಯದ ಬೆಸುಗೆಯ ಸಂಕೇತವೇ ಈ ಆಚರಣೆ ಎನ್ನಲಾಗುತ್ತದೆ.

ಹಾವೇರಿ ನಗರದಲ್ಲಿ ‘ಗೌರಿ ಹುಣ್ಣಿಮೆ’ಗಾಗಿಸಕ್ಕರೆಗೊಂಬೆಖರೀದಿಸುತ್ತಿರುವ ಮಹಿಳೆಯರು

ಪ್ರತಿ ವರ್ಷ 15 ಕ್ವಿಂಟಲ್‌‌: ‘ಗೌರಿ ಹುಣ್ಣಿಮೆಗಾಗಿ ಪ್ರತಿ ವರ್ಷ ಸುಮಾರು 15 ಕ್ವಿಂಟಲ್‌‌ ‘ಸಕ್ಕರೆ ಗೊಂಬೆ’ಗಳನ್ನು ತಯಾರಿಸುತ್ತೇವೆ. ಈ ಬಾರಿ 10 ಕ್ವಿಂಟಲ್‌‌ ತಯಾರಿಸಿದ ಸಕ್ಕರೆ ಗೊಂಬೆಗಳು ಈಗಾಗಲೇ ಮಾರಾಟವಾಗಿವೆ. ಇನ್ನೂ 5 ಕ್ವಿಂಟಲ್‌‌ ತಯಾರಿಸಲಿದ್ದೇವೆ. ಪ್ರತಿ ವರ್ಷ ಸುಮಾರು ₹ 1 ಲಕ್ಷ ವ್ಯಾಪಾರವಾಗುತ್ತದೆ. ಒಂದು ಕ್ವಿಂಟಲ್ ಸಕ್ಕರೆಗೆ 85 ಕೆ.ಜಿ.ಯಷ್ಟು ಸಕ್ಕರೆ ಗೊಂಬೆ ಸಿದ್ಧವಾಗುತ್ತವೆ. ಅಚ್ಚು ಮಾಡುವಾಗ ಶೇ 10ರಷ್ಟು ಮುರಿದು ಹೋಗುತ್ತವೆ’ ಎಂದು ಬಾಬಣ್ಣ ಅವರ ಮಗ ರಾಜ ವೀರಾಪುರ ಲೆಕ್ಕಾಚಾರ ಬಿಚ್ಚಿಟ್ಟರು.

‘ನಮ್ಮಲ್ಲಿ ಕೆ.ಜಿಗೆ ₹ 80ರಿಂದ ₹ 120ರ ದರದಲ್ಲಿ ಸಿಗುವ ಸಕ್ಕರೆ ಗೊಂಬೆಗಳನ್ನು ಹೆಚ್ಚಾಗಿ ವ್ಯಾಪಾರಿಗಳು ಬಂದು ಖರೀದಿಸುತ್ತಾರೆ. ಹಾವೇರಿ ಜಿಲ್ಲೆಯಾದ್ಯಂತ ಹಾಗೂ ಹುಬ್ಬಳ್ಳಿಗೆ ಕೊಂಡೊಯ್ಯುತ್ತಾರೆ. ಸಕ್ಕರೆ ಮತ್ತು ನಿಂಬೆಹಣ್ಣಿನಿಂದ ತಯಾರಾದ ಸಕ್ಕರೆಗೊಂಬೆ ತಿನ್ನಲು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಗದಗದಿಂದ ತರಿಸಿದ ಉತ್ತಮ ಬಣ್ಣಗಳನ್ನು ಮಿಶ್ರಣ ಮಾಡುತ್ತೇವೆ. ಬಿಳಿಬಣ್ಣದ ಸಕ್ಕರೆಗೊಂಬೆಗಳಿಗೆ ಬೇಡಿಕೆ ಹೆಚ್ಚು’ ಎಂದು ಶೌಕತ್ ವೀರಾಪುರ‌ ಮಾಹಿತಿ ಹಂಚಿಕೊಂಡರು.

ಕೊಪ್ಪಳದಿಂದ ಹಾವೇರಿಗೆ: ‘ನಾವು ಮೂಲತಃ ಕೊಪ್ಪಳ ಜಿಲ್ಲೆಯವರು, ನಾಲ್ಕು ತಲೆಮಾರಿನಿಂದ ಸಕ್ಕರೆ ಗೊಂಬೆ ತಯಾರಿಸುತ್ತಿದ್ದೇವೆ. ಹಾವೇರಿಗೆ ಬಂದು 30 ವರ್ಷಗಳಾದವು. ನಮ್ಮಲ್ಲಿ ವರ್ಷ ಪೂರ್ತಿ ಸಿಹಿ ತಿನಿಸು ಹಾಗೂ ಖಾರದ ಪದಾರ್ಥಗಳು ಸಿಗುತ್ತವೆ. ಜನವರಿಯಿಂದ ಏಪ್ರಿಲ್‌ವರೆಗೆ ನಡೆಯುವ ಜಾತ್ರೆಗಳಿಗೆ ವಿಶೇಷವಾಗಿ ‘ಬೆಂಡು ಬತ್ತಾಸು’ ಹಾಗೂ ಈದ್‌ ಮಿಲಾದ್‌ ಮತ್ತು ರಂಜಾನ್‌ ಸಂದರ್ಭ ಬೂಂದಿ ತಯಾರಿಸುತ್ತೇವೆ’ ಎನ್ನುತ್ತಾರೆ ಬಾಬಣ್ಣ ವೀರಾಪುರ.

ಗೌರಿ ಹುಣ್ಣಿಮೆಗಾಗಿ ನಾಲ್ಕು ತಲೆಮಾರಿನಿಂದ ನಾವು ತಯಾರಿಸುವ ಸಕ್ಕರೆ ಗೊಂಬೆಗಳು ಹಿಂದೂ–ಮುಸ್ಲಿಮರಿಗೆ ಸೌಹಾರ್ದದ ಸಂಕೇತಗಳಾಗಿವೆ
- ಬಾಬಣ್ಣ ವೀರಾಪುರ, ಸಕ್ಕರೆ ಗೊಂಬೆ ತಯಾರಕ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT