ಮಂಗಳವಾರ, ಜನವರಿ 26, 2021
28 °C
ಮತದಾರರ ಪಟ್ಟಿ ಪರಿಷ್ಕರಣೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ ಜೈನ್‌ ಖಡಕ್‌ ಎಚ್ಚರಿಕೆ

ಕರ್ತವ್ಯ ಲೋಪ ಎಸಗಿದರೆ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ವಿಧಾನಸಭಾ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಮರಣ ಹೊಂದಿದ ವ್ಯಕ್ತಿಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕುರಿತಂತೆ ವಿಶೇಷ ಗಮನಹರಿಸಬೇಕು. ಈ ಕುರಿತ ಸಾಧನೆ ನಿರಾಶಾದಾಯಕವಾಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯವಹಿಸುವ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ  ಅಮಾನತುಗೊಳಿಸಲಾಗುವುದು. ವಾರದೊಳಗಾಗಿ ಈ ಕಾರ್ಯ ಪೂರ್ಣಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಸಭೆಯಲ್ಲಿ ಹೊಸ ಮತದಾರರ ಸೇರ್ಪಡೆ, ಮಾರ್ಪಾಡು, ತಿದ್ದುಪಡಿ ಹಾಗೂ ಮರಣ ಹೊಂದಿದ ವ್ಯಕ್ತಿಗಳ ದೃಢಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ಕೈಬಿಡುವ ಕುರಿತಂತೆ ಮತಗಟ್ಟೆವಾರು ಸಭೆ ನಡೆಸಲು ತಿಳಿಸಿದ್ದರೂ ನಿರೀಕ್ಷಿತ ಸಾಧನೆಯಾಗಿಲ್ಲ. ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಉಪವಿಭಾಗಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 1470 ಮತಗಟ್ಟೆಗಳ ಪೈಕಿ 245 ಮತಗಟ್ಟೆಗಳಲ್ಲಿ ಸೇರ್ಪಡೆಗೆ ಹಾಗೂ 942 ಮತಗಟ್ಟೆಗಲ್ಲಿ ಕೈಬಿಡುವ ಕುರಿತಂತೆ ಯಾವುದೇ ಅರ್ಜಿಗಳು ಸ್ವೀಕೃತವಾಗಿಲ್ಲ ಹಾಗೂ 80 ವರ್ಷ ವಯೋಮಾನ ಮೇಲ್ಪಟ್ಟವರು ಜಿಲ್ಲೆಯಲ್ಲಿ 32,058 ಮತದಾರರಿದ್ದಾರೆ. ಈ ಕುರಿತಂತೆ ಮತಗಟ್ಟೆವಾರು ಪರಿಶೀಲನೆ ನಡೆಸಿ’ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ‘ಮತದಾರರ ಪರಿಷ್ಕರಣೆ ಕುರಿತಂತೆ ಎಲ್ಲ ತಹಶೀಲ್ದಾರಗಳು ವೈಯಕ್ತಿಕವಾಗಿ ಗಮನಹರಿಸಬೇಕು. ಬಿ.ಎಲ್.ಒ.ಗಳೊಂದಿಗೆ ಪ್ರತಿನಿತ್ಯ ಮಾತನಾಡಿ, ಮತಗಟ್ಟೆವಾರು ಮತದಾರರ ಪರಿಷ್ಕರಣೆ ಕುರಿತಂತೆ ಮಾಹಿತಿ ಪಡೆಯಬೇಕು ಎಂದು ಹೇಳಿದರು. 

ಹೊಸಮತದಾರರ ನೋಂದಣಿ, ಪರಿಷ್ಕರಣೆ ಕುರಿತಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ, ತಹಶೀಲ್ದಾರ್‌ಗಳಾದ ಜಿ.ಎಸ್.ಶಂಕರ, ರವಿ ಕೊರವರ, ಬಸವನಗೌಡ ಕೋಟೂರ, ಮಲ್ಲಿಕಾರ್ಜುನ ಹೆಗ್ಗಣ್ಣನವರ, ಪಿ.ಎಸ್. ಎರಿಸ್ವಾಮಿ, ಪ್ರಕಾಶ ಕುದರಿ, ಉಮಾ ಕೆ.ಎ. ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು