ಶನಿವಾರ, ಡಿಸೆಂಬರ್ 7, 2019
22 °C
ಸಂಧಾನ ಸಭೆಯ ಫೋಟೊ ವೈರಲ್ * ಫೋಟೊದಲ್ಲಿ ಬಿ.ವೈ.ರಾಘವೇಂದ್ರ

ಫೋಟೊ ವೈರಲ್‌ | ತಾವರೆಕೆರೆ ಮಠದಲ್ಲಿ ಸ್ವಾಮೀಜಿ ಸಂಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಮನವೊಲಿಸುವ ಪ್ರಯತ್ನ ನಡೆದಿದ್ದು ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಮಠದಲ್ಲಿ!

ಆ ಸಂಧಾನ ಮಾತುಕತೆಯ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳು ಸೇರಿದಂತೆ ಎಂಟು ಸ್ವಾಮೀಜಿಗಳು ಆ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮಗ, ಸಂಸದ ಬಿ.ವೈ.ರಾಘವೇಂದ್ರ ಸಹ ದಾಖಲೆ ಪತ್ರವೊಂದನ್ನು ಕೈಲಿ ಹಿಡಿದುಕೊಂಡು ಕೂತಿದ್ದಾರೆ.

ಸಭೆ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಶಿವಾಚಾರ್ಯ ಸ್ವಾಮೀಜಿ, ‘ಹೌದು, ತಾವರೆಕೆರೆ ಮಠದಲ್ಲಿ ಚರ್ಚೆ ನಡೆಯಿತು. ರಾಜ್ಯದ ಅಭಿವೃದ್ಧಿ ಹೇಗೆ ಆಗಬೇಕು? ಯಾವ ರೀತಿ ಅನುದಾನ ಹಂಚಿಕೆ ಆಗಬೇಕು? ಯಾವ್ಯಾವ ಕ್ಷೇತ್ರಗಳಿಗೆ ಆದ್ಯತೆ ಕೊಡಬೇಕು ಎಂಬ ಅಂಶಗಳನ್ನು ಆಧರಿಸಿ ನಾನೊಂದು ಕಾರ್ಯಸೂಚಿ (ಅಜೆಂಡಾ) ಮಾಡಿಕೊಂಡಿದ್ದೆ. ಆ ಕಾರ್ಯಸೂಚಿಗೆ ಅನುಗುಣವಾಗಿ ಕೆಲಸ ಮಾಡಿಸುವುದಾಗಿ ಸಂಸದರು ಭರವಸೆ ನೀಡಿದ್ದರಿಂದ ನಾಮಪತ್ರ ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಂಡೆ’ ಎಂದರು.

‘ಗುರು ಪರಂಪರೆಯ ವೃತ್ತಿಯಲ್ಲಿ ಪರಮೋಚ್ಛ ಸ್ಥಾನಕ್ಕೆ ಬಂದ ಮೇಲೆ ಅದಕ್ಕಿಂತ ದೊಡ್ಡ ಪದವಿ ಬೇರೊಂದಿಲ್ಲವೆಂದು ರಂಭಾಪುರಿ ಜಗದ್ಗುರುಗಳೂ ಹೇಳಿದರು. ಅವರ ಆಜ್ಞೆಯಂತೆ ನಡೆದುಕೊಂಡಿದ್ದೇನೆ. ಗುರುವಾರ ಅಧಿಕೃತವಾಗಿ ನಾಮಪತ್ರ ವಾಪಸ್ ಪಡೆದುಕೊಳ್ಳುತ್ತೇನೆ’ ಎಂದೂ ಹೇಳಿದರು.

ಕಣ್ಮರೆಯಾಗಿರಲಿಲ್ಲ: ‘ನಾನು ಕಣ್ಮರೆ ಆಗಿರಲಿಲ್ಲ. ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಗೊಂದಲ ಇದ್ದುದರಿಂದ ಅಭಿಪ್ರಾಯ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದೆ. ಮಂಗಳವಾರ ಸಂಜೆ ತಾವರೆಕೆರೆ ಮಠಕ್ಕೆ ಬರುವಂತೆ ಆಹ್ವಾನ ಬಂದಿದ್ದರಿಂದ, ತಕ್ಷಣ ಅಲ್ಲಿಗೆ ತೆರಳಿದ್ದೆ. ಬುಧವಾರ ಬೆಳಿಗ್ಗೆ ಕಾರ್ಯಕ್ರಮದ ನಿಮಿತ್ತ ಚಿಕ್ಕಮಗಳೂರಿಗೆ ಬಂದಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಇನ್ನೂ ಆತಂಕ: ‘ಸ್ವಾಮೀಜಿ ನಾಮಪತ್ರ ವಾಪಸ್ ಪಡೆಯುವುದು ಅನುಮಾನ. ಚುನಾವಣೆಯಿಂದ ಹಿಂದೆ ಸರಿಯುವ ಹೇಳಿಕೆಗಳನ್ನು ನೀಡುತ್ತ ಎಲ್ಲರ ದೃಷ್ಟಿ ತಮ್ಮತ್ತ ಬೀಳುವಂತೆ ಮಾಡುತ್ತಿದ್ದಾರಷ್ಟೇ. ಅವರು ಖಂಡಿತವಾಗಿಯೂ ಸ್ಪರ್ಧೆ ಮಾಡುತ್ತಾರೆ’ ಎಂಬ ಮಾತುಗಳು ಹಿರೇಕೆರೂರು– ರಟ್ಟೀಹಳ್ಳಿ ಭಾಗದಲ್ಲಿ ಹರಿದಾಡುತ್ತಿವೆ. ಹೀಗಾಗಿ, ಬಿಜೆಪಿ ಪಾಳೆಯದಲ್ಲಿ ಆತಂಕ ಪೂರ್ತಿಯಾಗಿ ದೂರವಾಗಿಲ್ಲ ಎನ್ನಲಾಗುತ್ತಿದೆ. 

ನಾಮಪತ್ರ ವಾಪಸ್‌ ಪಡೆಯುವ ಶ್ರೀಗಳ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು