ಬುಧವಾರ, ಮಾರ್ಚ್ 3, 2021
30 °C
ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಜಿಲ್ಲಾಧಿಕಾರಿ ಮನವಿ

‘ರೈತರ ಸಮಸ್ಯೆ ಶೀಘ್ರ ಇತ್ಯರ್ಥ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಶೀಘ್ರವೇ ಸಭೆ ಕರೆದು ಜಿಲ್ಲೆಯ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ರೈತರು ಜ.26ರಂದು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಫೆ.4ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈತ ಸಂಘಟನೆಗಳ ಸಭೆ ಆಯೋಜಿಸಲಾಗುವುದು. ಜಿಲ್ಲೆಯ ವಿವಿಧ ರೈತ ಸಂಘಟನೆಗಳು ರೈತರ ಸಮಸ್ಯೆಗಳು ಕುರಿತು ಪಟ್ಟಿ ಮಾಡಿ ನೀಡಿದಲ್ಲಿ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

‘ಬೆಳೆ ಪರಿಹಾರಕ್ಕೆ ರೈತರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಈ ವರ್ಷದ ಬೆಳೆ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಶೀಘ್ರವೇ ಹಣ ಬಿಡುಗಡೆಯಾಗಲಿದೆ. ಬೆಳೆ ಪರಿಹಾರ ವಿತರಣೆಯಲ್ಲಿ ಆದ ವ್ಯವಹಾರದ ಕುರಿತು ತನಿಖೆ ಪ್ರಗತಿಯಲ್ಲಿದೆ. ತಪ್ಪಿಸ್ಥರ ವಿರುದ್ಧ ಚಾರ್ಜ್‌ಶೀಟ್‌ ಹಾಕಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಮಾತನಾಡಿ, ‘ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳಿಗೆ ಮನವಿ ಮಾಡಿಕೊಂಡರು.

ರೈತ ಮುಖಂಡರು ಮಾತನಾಡಿ, ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಾಗುವುದು. ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ಮನವಿ ಮಾಡಿಕೊಂಡರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ್ ಎನ್. ಕೂಲೇರ ಇದ್ದರು. 

***

ಬೆಂಗಳೂರಿನಲ್ಲಿ ನಡೆಯುವ ರೈತರ ಪ್ರತಿಭಟನೆಗೆ ಜಿಲ್ಲೆಯಿಂದ 20 ಟ್ರಾಕ್ಟರ್‌ಗಳು ಹಾಗೂ 500 ರೈತರು ಭಾಗವಹಿಸಲಿದ್ದಾರೆ.
–ಮಾಲತೇಶ ಪೂಜಾರ, ಪ್ರಧಾನ ಕಾರ್ಯದರ್ಶಿ, ರೈತ ಸಂಘ

***

ರಾಣೆಬೆನ್ನೂರು ನಗರದಲ್ಲಿ ಮಂಗಳವಾರ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ 200 ಟ್ರಾಕ್ಟರ್‌ಗಳು ಹಾಗೂ ಒಂದು ಸಾವಿರ ರೈತರು ಪಾಲ್ಗೊಳ್ಳಿದ್ದಾರೆ.
– ರವೀಂದ್ರಗೌಡ ಪಾಟೀಲ, ರೈತ ಮುಖಂಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು