ಬುಧವಾರ, ಜನವರಿ 27, 2021
26 °C
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಧನ ಸಂಗ್ರಹಣೆ: ವಿಹಿಂಪ ಮುಖಂಡ ಮನೋಹರ ಮಠದ ಹೇಳಿಕೆ

ಹಾವೇರಿ: ಜಿಲ್ಲೆಯಲ್ಲಿ 2 ಲಕ್ಷ ಮನೆ ತಲುಪುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕೆ ಹಾಗೂ ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುವಾಗುವಂತೆ, ನಿಧಿ ಸಮರ್ಪಣಾ ಮಹಾಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಧನ ಸಂಗ್ರಹಣೆಗಾಗಿ ಜ.15ರಿಂದ ಜಿಲ್ಲೆಯ 694 ಗ್ರಾಮಗಳ ಪೈಕಿ 2 ಲಕ್ಷಕ್ಕಿಂತ ಹೆಚ್ಚು ಮನೆಗಳನ್ನು ತಲುಪಲಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಠದ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಯೋಜನೆಯ ಅನ್ವಯ ಜಾತಿ, ಧರ್ಮ ಬೇಧವಿಲ್ಲದೆ ಧನ ಸಂಗ್ರಹಣೆ ಮಾಡುತ್ತೇವೆ. ₹10, ₹100 ಹಾಗೂ ₹1000 ಮುದ್ರಿತ ಕೂಪನ್‌ಗಳ ಸಹಾಯದಿಂದ ಧನಸಂಗ್ರಹ ನಡೆಯಲಿದೆ. ₹2 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು ಹಾಗೂ ಆದಾಯ ತೆರಿಗೆ ಕಾಯ್ದೆಯ 80 ಜಿ ಸೆಕ್ಷನ್‌ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲಿದ್ದಾರೆ ಎಂದರು. 

90 ಲಕ್ಷ ಭಕ್ತರನ್ನು ತಲುಪುವ ಗುರಿ: ರಾಜ್ಯದಲ್ಲಿ ಜನವರಿ 15ರಿಂದ ಫೆ.5ರವರೆಗೆ 27,500 ಹಳ್ಳಿಗಳನ್ನು, ಸುಮಾರು 90 ಲಕ್ಷ ರಾಮಭಕ್ತರನ್ನು ತಲುಪುವ ಗುರಿ ಹೊಂದಿದ್ದೇವೆ. ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ವಿಶ್ವಸ್ಥರಲ್ಲಿ ಒಬ್ಬರಾಗಿದ್ದಾರೆ ಎಂದು ಮಾಹಿತಿ ನೀಡಿದರು. 

ಐವರು ಕಾರ್ಯಕರ್ತರನ್ನು ಒಳಗೊಂಡ ತಂಡ ಈ ನಿಧಿ ಸಮರ್ಪಣಾ ಅಭಿಯಾನದಲ್ಲಿರುತ್ತದೆ. ಸಂಗ್ರಹವಾದ ಅಷ್ಟೂ ಹಣವನ್ನು 49 ಗಂಟೆಯೊಳಗೆ ತೀರ್ಥಕ್ಷೇತ್ರ ಟ್ರಸ್ಟ್‌ನ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಲಾರ್ಸನ್‌ ಅಂಡ್‌ ಟುಬ್ರೋ (ಎಲ್‌ ಅಂಡ್‌ ಟಿ) ಸಂಸ್ಥೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಂದಿರ ನಿರ್ಮಾಣ ಕಾರ್ಯಕ್ಕೆ ತನ್ನ ಎಂಜಿನಿಯರ್‌ಗಳನ್ನು ನಿಯೋಜಿಸಲಿದೆ. ಐಐಟಿ ಮುಂಬೈ, ಐಐಟಿ ದೆಹಲಿ, ಐಐಟಿ ಚೆನ್ನೈ, ಸಿಬಿಆರ್‌ಐ ರೂರ್ಕಿ ಸಂಸ್ಥೆ ಮಂದಿರದ ಅಡಿಪಾಯದ ನೀಲನಕ್ಷೆಯ ಕೆಲಸದಲ್ಲಿ ಈಗಾಗಲೇ ತೊಡಗಿಕೊಂಡಿದೆ ಎಂದು ಹೇಳಿದರು. 

ಮಂದಿರದ ವಿವರ: ಶ್ರೀರಾಮ ಮಂದಿರ ಕಲ್ಲಿನ ಬ್ಲಾಕ್‌ಗಳ ಸಹಾಯದಿಂದ ನಿರ್ಮಿತವಾಗಲಿದೆ. ಮಂದಿರದ ವಿಸ್ತೀರ್ಣ 2.7 ಎಕರೆ, 54 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣಗೊಳ್ಳಲಿದೆ. 360 ಅಡಿ ಉದ್ದ ಹಾಗೂ 285 ಅಡಿ ಅಗಲದ ಮಂದಿರದಲ್ಲಿ ಮೂರು ಅಂತಸ್ತು ಹಾಗೂ 5 ಗೋಪುರಗಳಿರುತ್ತವೆ. ನೆಲಮಾಳಿಗೆಯಲ್ಲಿ 160 ಕಂಬಗಳು, ಮೊದಲನೇ ಮಹಡಿಯಲ್ಲಿ 132 ಕಂಬಗಳು, ಎರಡನೇ ಮಹಡಿಯಲ್ಲಿ 74 ಕಂಬಗಳಿರುತ್ತವೆ ಎಂದು ವಿವರ ನೀಡಿದರು. 

ಮಂದಿರ ನಿರ್ಮಾಣದ ಜತೆಗೆ ಅಂತರರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಮಂದಿರ, ಧರ್ಮಶಾಲೆ, ಪ್ರದರ್ಶನಾಲಯ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ರಾಜು ಐಬತ್ತಿ, ಈಶ್ವರ ಹಾವನೂರು, ಪ್ರದೀಪ ಮುಳ್ಳೂರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು