ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಾಳಿಕೆ ಭರವಸೆ ಶೇ 85ರಷ್ಟು ಪೂರ್ಣ: ಶಾಸಕ ನೆಹರು ಓಲೇಕಾರ

ದ್ವಿಪಥ ರಸ್ತೆ ಕಾಮಗಾರಿ ಶೀಘ್ರ ಆರಂಭ
Last Updated 4 ಆಗಸ್ಟ್ 2020, 14:12 IST
ಅಕ್ಷರ ಗಾತ್ರ

ಹಾವೇರಿ: ‘ವಿಧಾನಸಭಾ ಸದಸ್ಯನಾಗಿ ಎರಡು ವರ್ಷ ಪೂರ್ಣಗೊಳಿಸಿದ್ದು, ಜನರಿಗೆ ನೀಡಿದ ಭರವಸೆಯಂತೆ ಶೇ 85ರಷ್ಟು ಕಾರ್ಯಗಳನ್ನು ಈಡೇರಿಸಿದ್ದೇನೆ’ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಎರಡು ವರ್ಷಗಳ ಸಾಧನೆಯನ್ನೊಳಗೊಂಡ ‘ಅಭಿವೃದ್ಧಿಯ ಹೆಜ್ಜೆಗಳು’ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮೆಡಿಕಲ್‌ ಕಾಲೇಜು:‘ಸರ್ಕಾರಿ ಮೆಡಿಕಲ್‌ ಕಾಲೇಜು’ ಆರಂಭಕ್ಕೆ ಅನುಮತಿ ದೊರೆತಿದ್ದು, ಅನುದಾನವೂ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಲಿದೆ. ‘ಸರ್ಕಾರಿ ಕಾನೂನು ಕಾಲೇಜು’ ಆರಂಭಕ್ಕೆ ನೆಲೋಗಲ್ಲ ಗುಡ್ಡದಲ್ಲಿ ಜಾಗ ಗುರುತಿಸಲಾಗಿದ್ದು, ಸರ್ಕಾರದಿಂದ ₹5 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಶುರುವಾಗಲಿದೆ ಎಂದರು.

ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿರುವ 200 ಹಾಸಿಗೆ ಸಾಮರ್ಥ್ಯದ ‘ಆಯುಷ್‌ ಆಸ್ಪತ್ರೆ’ಯನ್ನು ನೆಲೋಗಲ್ಲ ಗುಡ್ಡದಲ್ಲಿ ಆರಂಭಿಸಲಾಗುತ್ತಿದೆ. ಅಕ್ಕೂರು ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪದವಿ ಕಾಲೇಜು ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹಾವೇರಿ ನಗರದಲ್ಲಿ ಅಕ್ಕಮಹಾದೇವಿ ವೃತ್ತದವರೆಗೆ ಹಾಗೂ ತೋಟದಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿವರೆಗೆ ದ್ವಿಪಥ ರಸ್ತೆ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಸೈನಿಕ ಶಾಲೆಗೆ ಜಾಗ:ನೆಲೋಗಲ್ಲ ಗುಡ್ಡದಲ್ಲಿ ಟ್ರಾಮಾ ಸೆಂಟರ್‌ ಆರಂಭಿಸಲಾಗುವುದು, ಕಳ್ಳಿಹಾಳದಲ್ಲಿ ಎಸ್‌ಟಿ ವಸತಿಯುತ ಪದವಿ ಕಾಲೇಜು ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬಸಾಪುರದಲ್ಲಿ ‘ಸೈನಿಕ ಶಾಲೆ’ ಮತ್ತು ‘ಪೊಲೀಸ್‌ ತರಬೇತಿ ಶಾಲೆ’ ಆರಂಭಿಸಲು ಜಾಗ ಗುರುತಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತವಿದಳನಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೈಗಾರಿಕೆಗೆ ಒತ್ತು:ಕೈಗಾರಿಕೆಗಳ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಸಲು ಸುಮಾರು ಸಾವಿರ ಎಕರೆಯನ್ನು ಗುರುತಿಸಿ ಕೈಗಾರಿಕಾ ವಲಯವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಹಾವೇರಿಯಲ್ಲಿ ರಾಜ್ಯಮಟ್ಟದ ‘ಜಾನಪದ ಜಾತ್ರೆ’ಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಹಾವೇರಿ ನಗರಕ್ಕೆ 24 ಗಂಟೆ ಕುಡಿಯುವ ನೀರಿನ ಯೋಜನೆಯು ಗುತ್ತಿಗೆದಾರನ ಸಮಸ್ಯೆಯಿಂದ ನನೆಗುದಿಗೆ ಬಿದ್ದಿದೆ. ಆಗಸ್ಟ್‌ 15ರೊಳಗೆ ಕೆಲಸ ಮುಗಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಹೊಸ ಪೈಪ್‌ಲೈನ್‌ಗೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ ಎಂದರು.

ಕೃಷಿ ಅಭಿವೃದ್ಧಿ:ಕೃಷಿ ಇಲಾಖೆ ವತಿಯಿಂದ ₹ 1868 ಲಕ್ಷ ಖರ್ಚು ಮಾಡಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ಕೃಷಿ ಯಂತ್ರೋಪಕಣಗಳು, ಲಘು ಪೋಷಕಾಂಶಗಳ ವಿತರಣೆ, ಕೃಷಿ ಹೊಂಡ ನಿರ್ಮಾಣ, ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹಧನ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರಧನ ನೀಡಲಾಗಿದೆ ಎಂದು ಸಾಧನೆಯ ವಿವರವನ್ನು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ. ಸದಸ್ಯ ಸಿದ್ದರಾಜ ಕಲಕೋಟಿ, ನಗರಸಭೆ ಸದಸ್ಯ ಗಿರೀಶ ತುಪ್ಪದ, ಲಲಿತಾ ಗುಂಡೆನಹಳ್ಳಿ, ನಜೀರ್ ನದಾಫ್, ಬಾಬುಸಾಬ್ ಮೂಮಿನಗಾರ್, ಜಗದೀಶ ಮಲ್ಲನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT