ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕ್ರೀಡಾ ಕ್ಷೇತ್ರಕ್ಕೆ ಬೇಕಿದೆ ಅಭಿವೃದ್ಧಿಯ ಮದ್ದು

ಅಥ್ಲೀಟ್‌ಗಳಿಗೆ ಮರೀಚಿಕೆಯಾದ ‘ಸಿಂಥೆಟಿಕ್‌ ಟ್ರ್ಯಾಕ್‌’: ಕಾಯಂ ನೌಕರರ ಕೊರತೆಯಿಂದ ಬಳಲುತ್ತಿರುವ ಕ್ರೀಡಾ ಇಲಾಖೆ
Last Updated 7 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹಾವೇರಿ: ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯ. ಆದರೆ, ಕ್ರೀಡಾ ಇಲಾಖೆಯೇ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಹಾವೇರಿ ಜಿಲ್ಲೆ 25ನೇ ವರ್ಷದ ‘ರಜತ ಸಂಭ್ರಮ’ ಆಚರಿಸಿಕೊಳ್ಳುತ್ತಿರುವ ಹೊತ್ತಿನಲ್ಲೂ, ಕ್ರೀಡಾ ಕ್ಷೇತ್ರದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.

ಜಿಲ್ಲಾ ಮತ್ತು ತಾಲ್ಲೂಕು ಕ್ರೀಡಾಂಗಣಗಳಿಗೆ ಕಾಲಿಟ್ಟರೆ ಹೆಜ್ಜೆ–ಹೆಜ್ಜೆಗೂ ಸಮಸ್ಯೆಗಳು ಗೋಚರಿಸುತ್ತವೆ. ಅನುದಾನದ ಕೊರತೆ, ಕಾಯಂ ಸಿಬ್ಬಂದಿ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಕಳಪೆ ಕಾಮಗಾರಿಯಿಂದ ಕ್ರೀಡಾ ಇಲಾಖೆ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗದೆ ತೆವಳುತ್ತಿದೆ.

ಸಿಂಥೆಟಿಕ್‌ ಟ್ರ್ಯಾಕ್‌ ಕೊರತೆ:

ವೇಗ ಮತ್ತು ಸುರಕ್ಷತೆಗೆ ಪೂರಕವಾಗಿರುವ ‘ಸಿಂಥೆಟಿಕ್‌ ಟ್ರ್ಯಾಕ್‌’ ಅಥ್ಲೀಟ್‌ಗಳಿಗೆ ಚಿಮ್ಮುಹಲಗೆ ಇದ್ದಂತೆ. ಆದರೆ, ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಪಾಲಿಗೆ ಸಿಂಥೆಟಿಕ್‌ ಟ್ರ್ಯಾಕ್‌ ಎಂಬುದು ಮರೀಚಿಕೆಯಾಗಿದೆ. ಕಲ್ಲು, ಇಟ್ಟಿಗೆ ಮತ್ತು ಮಣ್ಣಿನಿಂದ ಕೂಡಿದ ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಬರಿಗಾಲಿನಲ್ಲಿ ಅಭ್ಯಾಸ ಮಾಡುವ ಕ್ರೀಡಾಪಟುಗಳನ್ನು ನೋಡಿದರೆ, ಕ್ರೀಡಾ ಇಲಾಖೆಯ ದುಸ್ಥಿತಿ ಅರ್ಥವಾಗುತ್ತದೆ.

ಹೆಸರಿಗಷ್ಟೇ ಕ್ರೀಡಾಂಗಣಗಳು:

ತಾಲ್ಲೂಕು ಕ್ರೀಡಾಂಗಣಗಳಲ್ಲಿ ಅಥ್ಲೆಟಿಕ್‌ ಟ್ರ್ಯಾಕ್‌ ಇಲ್ಲ, ಕ್ರೀಡಾ ಅಂಕಣಗಳಿಲ್ಲ, ನೀರು–ವಿದ್ಯುತ್‌ ಸೌಕರ್ಯವಿಲ್ಲ, ಫೆಡ್‌ಲೈಟ್‌ ವ್ಯವಸ್ಥೆಯಿಲ್ಲ. ಕಾಂಪೌಂಡ್‌ಗಳಿಲ್ಲ. ಜಿಮ್‌ ಉಪಕರಣಗಳು ಹಾಳುಬಿದ್ದಿವೆ, ಕುಡಿಯುವ ನೀರು ಮತ್ತು ಶೌಚಾಲಯಗಳಿಲ್ಲ... ಹೀಗೆ ಮೂಲಸೌಕರ್ಯದಿಂದ ವಂಚಿತವಾಗಿ ಹೆಸರಿಗಷ್ಟೇ ಕ್ರೀಡಾಂಗಣ ಎಂಬಂತಿವೆ.

ತಾಲ್ಲೂಕಿನ ಕ್ರೀಡಾಂಗಣಗಳ‌ ಮೈದಾನದ ತುಂಬ ಹುಲ್ಲು ಬೆಳೆದಿದೆ. ಇಲ್ಲಿ ವಾಲಿಬಾಲ್‌, ಫುಟ್‌ಬಾಲ್‌ ಸೇರಿದಂತೆ ಯಾವುದೇ ಕ್ರೀಡಾ ಅಂಕಣಗಳು ಇಲ್ಲ. ಸುತ್ತಲೂ ಗಿಡ-ಗಂಟಿ ಬೆಳೆದಿವೆ. ಕ್ರೀಡಾ ಚಟುವಟಿಕೆಗಿಂತ ಸಭೆ–ಸಮಾರಂಭ, ಜಯಂತಿ ಆಚರಿಸಲು ಕ್ರೀಡಾ ಮೈದಾನಗಳು ಹೆಚ್ಚು ಬಳಕೆಯಾಗುತ್ತಿವೆ ಎಂಬ ದೂರು ಕ್ರೀಡಾಪಟುಗಳದ್ದು.

ಕಾವಲುಗಾರನೇ ದಿಕ್ಕು:

ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್‌, ಶಿಗ್ಗಾವಿ, ಸವಣೂರು, ಹಿರೇಕೆರೂರು ತಾಲ್ಲೂಕುಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಗಳು ಕ್ರೀಡಾ ಇಲಾಖೆಗೆ ಇವೆ. ಆದರೆ, ಅಲ್ಲಿರುವಈಜುಕೊಳ, ಹೊರಾಂಗಣ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಜಿಮ್‌ ಸೆಂಟರ್‌, ಶೌಚಾಲಯ ಎಲ್ಲವನ್ನೂ ನಿರ್ವಹಣೆ ಮಾಡಲು ಯಾವುದೇ ಕಾಯಂ ಸಿಬ್ಬಂದಿ ಇಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಕಾವಲುಗಾರರೇ ಎಲ್ಲವನ್ನೂ ನಿರ್ವಹಣೆ ಮಾಡಬೇಕಿದೆ.

ಫೆಡ್‌ಲೈಟ್‌ ಇಲ್ಲ:

8.5 ಎಕರೆ ವಿಸ್ತೀರ್ಣದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಡ್‌ಲೈಟ್‌ ವ್ಯವಸ್ಥೆಯಿಲ್ಲ. ಈ ಕಟ್ಟಡದ ಮೇಲ್ಭಾಗದಲ್ಲಿ ದೊಡ್ಡ ಡಾರ್ಮೆಟರಿ ನಿರ್ಮಿಸಿದರೆ ವಿವಿಧ ಕ್ರೀಡಾಕೂಟಗಳನ್ನು ನಡೆಸುವ ಸಮಯದಲ್ಲಿ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುತ್ತದೆ. ಜತೆಗೆ ಕ್ರೀಡಾಂಗಣದ ಸುತ್ತಲೂ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುವ ಕಾರ್ಯ ಇದುವರೆಗೂ ಆರಂಭವಾಗಿಲ್ಲ.

ದುರಸ್ತಿಗೆ ಕಾದಿರುವ ಒಳಾಂಗಣ:

‘ಹಾವೇರಿ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ವುಡನ್‌ ಫ್ಲೋರಿಂಗ್‌ ಕೋರ್ಟ್‌ ದುರಸ್ತಿ ಮಾಡಿಸಿ, ಪಾಲಿಶ್‌ ಮಾಡಿಸಬೇಕಿದೆ. ಲೈಟಿಂಗ್‌ ವ್ಯವಸ್ಥೆ ಕೂಡ ಉತ್ತಮವಾಗಿಲ್ಲ. ಮೇಲ್ಭಾಗದ ವೆಂಟಿಲೇಟರ್‌ ಒಳಗೆ ಪಾರಿವಾಳಗಳು ಪ್ರವೇಶ ಮಾಡಿ ಗೂಡುಕಟ್ಟಿ ಶುಚಿತ್ವ ಹಾಳಾಗಿದೆ. ಅದಕ್ಕೆ ಮೆಟಲ್‌ ಶೀಟ್‌ ಅಳವಡಿಸಿ ಮುಚ್ಚಬೇಕಿದೆ. ಮೂಲಸೌಕರ್ಯ ಕಲ್ಪಿಸಿ ಕ್ರೀಡಾ ಸಾಧನೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕ್ರೀಡಾಪಟುಗಳು ಒತ್ತಾಯಿಸಿದರು.

ಕೋಚ್‌ಗಳ ಕೊರತೆ: ಸೊರಗಿದ ಕ್ರೀಡೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾವೇರಿ ಕಚೇರಿಯಲ್ಲಿ ಸಹಾಯಕ ನಿರ್ದೇಶಕ, ಅಧೀಕ್ಷಕ, ದ್ವಿತೀಯ ದರ್ಜೆ ಸಹಾಯಕ, ದಲಾಯತ್‌ ಹುದ್ದೆಗಳು ಮಂಜೂರಾಗಿವೆ. ಆದರೆ, ಸಹಾಯಕ ನಿರ್ದೇಶಕ ಹುದ್ದೆ ಹೊರತುಪಡಿಸಿದರೆ ಉಳಿದ 3 ಹುದ್ದೆಗಳಿಗೆ ಕಾಯಂ ನೌಕರರೇ ಇಲ್ಲ, ಎಲ್ಲರೂ ಹೊರಗುತ್ತಿಗೆ ನೌಕರರು.

‘ಉತ್ಸಾಹಿ ಯುವಕರನ್ನು ಹುರಿದುಂಬಿಸಿ, ಕ್ರೀಡಾ ತರಬೇತಿ ನೀಡಿ, ಉತ್ತಮ ಸಾಧನೆ ಮಾಡುವಂತೆ ಮಾರ್ಗದರ್ಶನ ಮಾಡಬೇಕಾದ ಕ್ರೀಡಾ ತರಬೇತುದಾರರ (ಕೋಚ್‌) ಹುದ್ದೆಗಳೇ ಮಂಜೂರಾಗಿಲ್ಲ. ಹಾಕಿ ಮತ್ತು ವಾಲಿಬಾಲ್‌ ಕ್ರೀಡೆಗಳಿಗೆ 20 ವರ್ಷಗಳಿಂದಹೊರಗುತ್ತಿಗೆ ಆಧಾರಿತ ಕೋಚ್‌ಗಳೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಆಟಗಳಿಗೂ ಇವರೇ ದಿಕ್ಕು ಎಂಬಂತಾಗಿದೆ’ ಎಂದು ಕ್ರೀಡಾಪಟುಗಳು ಸಮಸ್ಯೆ ತೋಡಿಕೊಂಡರು.

***

ಕಬಡ್ಡಿ ಕ್ರೀಡೆಗೆ ಜಿಲ್ಲೆಯಲ್ಲಿ ಪ್ರೋತ್ಸಾಹವಿಲ್ಲ. ಹೀಗಾಗಿ ದಾವಣಗೆರೆಯ ಕ್ರೀಡಾ ಇಲಾಖೆ ವಸತಿ ನಿಲಯದಲ್ಲಿ ಕ್ರೀಡಾ ತರಬೇತಿ ಪಡೆಯುತ್ತಿದ್ದೇನೆ

– ಸೂರಜ್‌ ಐರಣಿ, ಅಂತರರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು, ರಾಣೆಬೆನ್ನೂರು

***

ಕ್ರೀಡಾ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಕ್ರೀಡಾಪಟುಗಳಿಗೆ ಒದಗಿಸಿ, ಕ್ರೀಡಾ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದೇವೆ

– ಲತಾ ಬಿ.ಎಚ್‌., ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT