ಶುಕ್ರವಾರ, ಆಗಸ್ಟ್ 19, 2022
22 °C
ಹಾವೇರಿ ಜಿಲ್ಲೆಗಾಗಿ ಜೈಲುವಾಸ ಅನುಭವಿಸಿದ್ದ ಹೋರಾಟಗಾರರು: 1972ರಲ್ಲಿ ಮೊಳಗಿದ ಪ್ರತ್ಯೇಕತೆಯ ಕೂಗು

ಹಾವೇರಿ: ಸಾಕಾರಗೊಳ್ಳದ ಮಾದರಿ ಜಿಲ್ಲೆ ಸಂಕಲ್ಪ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಹಿರಿಯರ ಆಶೀರ್ವಾದದೊಂದಿಗೆ ನಾವೆಲ್ಲರೂ ಸೃಜನಶೀಲ, ಶಾಂತಿಯ, ನೈತಿಕ ನೆಲೆಗಟ್ಟಿನ ಮೇಲೆ ನಿಂತು ಹಾವೇರಿ ಜಿಲ್ಲೆಯನ್ನು ರಾಜ್ಯದಲ್ಲಿಯೇ ‘ಮಾದರಿ ಜಿಲ್ಲೆ’ ಮಾಡೋಣ’ ಎಂದು 1997ರಲ್ಲಿ ‘ಹಾವೇರಿ ಜಿಲ್ಲಾ ನಿರ್ಮಾಣ ಕೇಂದ್ರ ಸಮಿತಿ’ಯು ಸಂಕಲ್ಪ ತೊಟ್ಟಿತ್ತು. ಆದರೆ, ಹಾವೇರಿ ಜಿಲ್ಲೆಯಾಗಿ 25 ವರ್ಷ ಕಳೆದರೂ, ಮಾದರಿ ಜಿಲ್ಲೆಯ ಕನಸು ನನಸಾಗಿಲ್ಲ. 

ನಿರಂತರ ಹೋರಾಟ ಮತ್ತು ಅಪಾರ ನಿರೀಕ್ಷೆಗಳೊಂದಿಗೆ 1997ರ ಆಗಸ್ಟ್‌ 24ರಂದು ಉದಯವಾದ ಹಾವೇರಿ ಜಿಲ್ಲೆ ಅಭಿವೃದ್ಧಿಯ ಹಾದಿಯಲ್ಲಿ ಕುಂಟುತ್ತಾ ಸಾಗುತ್ತಿದೆ. ಎಂಟು ತಾಲ್ಲೂಕುಗಳು ಹತ್ತು ಹಲವಾರು ಸಮಸ್ಯೆಗಳಿಂದ ನಲುಗುತ್ತಿವೆ. ಸಾಮಾನ್ಯ ಜನರ ಪಾಲಿಗೆ ‘ಅಭಿವೃದ್ಧಿ’ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ. 

ಜಿಲ್ಲಾ ಕೇಂದ್ರ ಹಾವೇರಿ ನಗರವನ್ನು ನೋಡಿದರೆ ಹಳ್ಳಿಯಂತೆ ಭಾಸವಾಗುತ್ತದೆ ಎಂದು ಜನರೇ ಮಾತನಾಡುತ್ತಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಹರಿದುಬಂದರೂ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎಂಬುದು ನಾಗರಿಕರ ದೂರು. 

ಹಾವೇರಿ ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ವ್ಯವಸ್ಥೆಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚಾಗಿದ್ದರೂ, ಯೋಜನೆಗಳೂ ಇಂದಿಗೂ ಸಾಕಾರಗೊಂಡಿಲ್ಲ. ಹಾವೇರಿ ಜಿಲ್ಲಾಸ್ಪತ್ರೆ ಇದ್ದರೂ, ಇಂದಿಗೂ ಉತ್ತಮ ಚಿಕಿತ್ಸೆ ಬೇಕೆಂದರೆ ಜನರು ಹುಬ್ಬಳ್ಳಿ ಮತ್ತು ದಾವಣಗೆರೆ ಕಡೆಗೆ ಹೋಗುವುದು ತಪ್ಪಿಲ್ಲ. ಹೀಗೆ ಬೆಟ್ಟದಷ್ಟು ಸಮಸ್ಯೆ, ಸವಾಲುಗಳಿವೆ.

25 ವರ್ಷಗಳ ಹೋರಾಟ: ‘ಧಾರವಾಡ ಜಿಲ್ಲೆಯಿಂದ ಹಾವೇರಿಯನ್ನು ಪ್ರತ್ಯೇಕಿಸಿ, ಜಿಲ್ಲೆಯ ಮಾನ್ಯತೆ ನೀಡಬೇಕು ಎಂದು 1972ರಲ್ಲಿ ಪ್ರತ್ಯೇಕತೆಯ ಕೂಗು ಮೊಳಗಿತು. ಅಲ್ಲಿಂದ 1997ರವರೆಗೆ 25 ವರ್ಷಗಳ ಕಾಲ ನಿರಂತರ ಹೋರಾಟ ನಡೆಯಿತು. ಹಾವೇರಿಯ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಎಫ್‌.ಎಸ್‌.ತಾವರೆ ಮತ್ತು 1972ರಿಂದ ಹಾವೇರಿ ಜಿಲ್ಲಾ ನಿರ್ಮಾಣ ಸಮಿತಿಯ ಗೌರವ ಕಾರ್ಯದರ್ಶಿಯಾಗಿದ್ದ ಸಿದ್ದಪ್ಪ ಚೌಶೆಟ್ಟಿ ಮುಂತಾದವರು ಹಾವೇರಿ ಜಿಲ್ಲಾ ರಚನೆಗಾಗಿ ದೊಡ್ಡ ಹೋರಾಟ ನಡೆಸಿದರು. ಹುಕ್ಕೇರಿಮಠದ ಶಿವಲಿಂಗ ಸ್ವಾಮಿಗಳ ಬೆಂಬಲವೂ ಇತ್ತು’ ಎಂದು ವರ್ತಕ ಎಸ್‌.ಬಿ.ಹಿರೇಮಠ ತಿಳಿಸಿದರು. 

ಜೈಲುವಾಸ: ‘ಹಾವೇರಿ ನಗರದಲ್ಲಿ ಸಭೆ ನಡೆಸಿ, ಪ್ರತ್ಯೇಕ ಜಿಲ್ಲೆಗಾಗಿ ಶಾಂತಿಯುತ ಹೋರಾಟ ನಡೆಸಬೇಕು ಎಂದು ತೀರ್ಮಾನ ಕೈಗೊಂಡಿದ್ದೆವು. ವಿಷಯ ತಿಳಿದ ಪೊಲೀಸರು ನಾನು (ಎಂ.ಎಸ್‌.ಕೋರಿಶೆಟ್ಟರ್‌), ಎಸ್‌.ಬಿ.ಹಿರೇಮಠ, ಸಿದ್ದಪ್ಪ ಚೌಶೆಟ್ಟಿ, ಷಣ್ಮುಖಪ್ಪ ಹತ್ತಿ, ಡಾ.ಜಿ.ಆರ್‌.ಗುಡಿ, ಎಫ್‌.ಎಸ್‌.ಎನ್‌, ಗಾಜಿಗೌಡ್ರು ಸೇರಿದಂತೆ 14 ಜನರನ್ನು ಧಾರವಾಡದ ಜೈಲಿಗೆ ಕಳುಹಿಸಿದರು. 3 ದಿನ ಜೈಲು ವಾಸವನ್ನೂ ಅನುಭವಿಸಿದೆವು’ ಎಂದು ಹೋರಾಟದ ದಿನಗಳನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಕೋರಿಶೆಟ್ಟರ್‌ ನೆನಪು ಮಾಡಿಕೊಂಡರು. 

ಜೆ.ಎಚ್.ಪಟೇಲರಿಗೆ ತಾಮ್ರಪಟದ ಸನ್ಮಾನ 
ಹಾವೇರಿ ಜಿಲ್ಲೆ ಉದ್ಘಾಟನೆ ಮಾಡಿ ಅಧಿಕಾರ ವಿಕೇಂದ್ರೀಕರಣದ ಫಲ ಸಾಮಾನ್ಯನಿಗೂ ತಲುಪಿಸುವಲ್ಲಿ ದಿಟ್ಟ ನಿರ್ಣಯನ್ನು ಕೈಗೊಂಡ ಅಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲರಿಗೆ ಹಾವೇರಿ ಜಿಲ್ಲಾ ನಿರ್ಮಾಣ ಕೇಂದ್ರ ಸಮಿತಿಯಿಂದ 1997ರ ಆಗಸ್ಟ್‌ನಲ್ಲಿ ತಾಮ್ರಪಟದ ಸನ್ಮಾನ ಪತ್ರವನ್ನು ಅರ್ಪಿಸಿ, ಹೃತ್ಪೂರ್ವಕವಾಗಿ ಅಭಿನಂದಿಸಲಾಗಿತ್ತು. 

10 ಲಕ್ಷ ಜನಸಂಖ್ಯೆಯ ಮಾನದಂಡ
ಜಿಲ್ಲೆಯಾಗಬೇಕೆಂದರೆ ಕನಿಷ್ಠ 10 ಲಕ್ಷ ಜನಸಂಖ್ಯೆ ಇರಬೇಕು ಎಂಬುದು ಸರ್ಕಾರದ ಮಾನದಂಡವಾಗಿತ್ತು. 1997ರಲ್ಲಿ ಜಿಲ್ಲೆಯ ಜನಸಂಖ್ಯೆ ಸುಮಾರು 11 ಲಕ್ಷದಷ್ಟಿತ್ತು. ಆದರೆ, ರಾಣೆಬೆನ್ನೂರು, ಹಿರೇಕೆರೂರು ತಾಲ್ಲೂಕುಗಳನ್ನು ದಾವಣಗೆರೆ ಜಿಲ್ಲೆಗೆ ಸೇರಿಸುವ ಹುನ್ನಾರಗಳು ನಡೆದಿತ್ತು. ಶಿಗ್ಗಾವಿ ತಾಲ್ಲೂಕು ಧಾರವಾಡ ಜಿಲ್ಲೆಯಲ್ಲೇ ಉಳಿಯಲಿ ಎಂಬುದು ಕೆಲವರ ವಾದವಾಗಿತ್ತು.

ಈ ಮೂರು ತಾಲ್ಲೂಕುಗಳು ಕೈತಪ್ಪಿ ಹೋಗಿದ್ದರೆ ‘ಹಾವೇರಿ ಜಿಲ್ಲೆ’ ರೂಪುಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಂದಿನ ಜನಪ್ರತಿನಿಧಿಗಳು, ರೈತ ಸಂಘ, ಮಹಿಳಾ ಸಂಘ, ವಿದ್ಯಾರ್ಥಿ ಸಂಘ, ವಕೀಲರ ಸಂಘ ಹಾಗೂ ವರ್ತಕರ ಸಂಘದ ದಿಟ್ಟ ಹೋರಾಟದಿಂದ ಏಳು ತಾಲ್ಲೂಕುಗಳನ್ನು ಒಳಗೊಂಡ ‘ಹಾವೇರಿ ಜಿಲ್ಲೆ’ ಉದಯವಾಯಿತು ಎಂದು ವರ್ತಕ ಎಸ್‌.ಬಿ.ಹಿರೇಮಠ ತಿಳಿಸಿದರು. 

***

ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಚಿಸಿದ್ದ ಟಿ.ಎಂ. ಹುಂಡೇಕಾರ ಸಮಿತಿ ಸಲ್ಲಿಸಿದ್ದ ವರದಿಯು ಹಾವೇರಿ ಪ್ರತ್ಯೇಕ ಜಿಲ್ಲೆಯಾಗಲು ಸಹಕಾರಿಯಾಯಿತು
– ಎಂ.ಎಸ್‌.ಕೋರಿಶೆಟ್ಟರ್‌, ಜಿಲ್ಲಾ ಘಟಕದ ಅಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು