ಭಾನುವಾರ, ಜನವರಿ 17, 2021
18 °C
ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು

ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳಿಲ್ಲ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜಿಲ್ಲೆಯಲ್ಲಿ ಈವರೆಗೆ ಯಾವುದೇ ಹಕ್ಕಿ ಜ್ಚರ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ರೋಗ ತಡೆಗಟ್ಟುವ ಕ್ರಮಗಳ ಕುರಿತು ಪಶುಪಾಲನೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಕೋಳಿ ಶೀತ ಜ್ವರ ನಿಯಂತ್ರಣ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವಾರದ ಕೇರಳ ರಾಜ್ಯದ ಕೊಟ್ಟಾಯಂ ಹಾಗೂ ಅಲಪ್ಪುಳ ಜಿಲ್ಲೆಗಳಲ್ಲಿ ಹಾಗೂ ದೇಶದ 10 ರಾಜ್ಯಗಳಲ್ಲಿ ಕಾಡುಕೋಳಿಗಳು/ ಕೋಳಿಗಳು ಅಸಹಜ ಸಾವನ್ನಪ್ಪಿದ್ದವು, ಅವುಗಳ ಮಾದರಿಯನ್ನು ರೋಗ ತನಿಖಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ರೋಗ ಇರುವಿಕೆಯು ಬಗ್ಗೆ ಧೃಡಪಟ್ಟಿರುವದರಿಂದ ಹಾವೇರಿ ಜಿಲ್ಲೆಯಲ್ಲಿಯೂ ಸಹ ಎಲ್ಲಾ ಮುಂಜಾಗೃತ ಕ್ರಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಹಾವೇರಿ ಜಿಲ್ಲೆಯಲ್ಲಿ ಅಂದಾಜು 3 ಮೊಟ್ಟೆ ಕೋಳಿಗಳ ಫಾರಂಗಳಲ್ಲಿ ಅಂದಾಜು 95 ಸಾವಿರ ಮೊಟ್ಟೆ ಕೋಳಿಗಳು, 217 ಮಾಂಸದ ಕೋಳಿ ಫಾರಂಗಳಲ್ಲಿ ಅಂದಾಜು 8 ಲಕ್ಷ ಕೋಳಿಗಳು ಹಾಗೂ 2 ಲಕ್ಷ ಹಿತ್ತಲಕೋಳಿಗಳೀವೆ. ಕೋಳಿ ಶೀತ ಜ್ವರದ ಅರಿವು ಮತ್ತು ರೋಗದ ನಿಯಂತ್ರಣಕ್ಕೆ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆಯನ್ನು ತುರ್ತಾಗಿ ಮತ್ತು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ರೋಗ ನಿಯಂತ್ರಣಕ್ಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕೋಳಿಫಾರಂ ಮಾಲೀಕರ ಸಹಕಾರದ ಅವಶ್ಯ ಇದೆ. ಯಾವುದೇ ಕೋಳಿ ಫಾರಂಗಳಲ್ಲಿ ಅಸಹಜ ಕೋಳಿಗಳ ಸಾವು ಸಂಭವಿಸಿದಲ್ಲಿ, ಕೂಡಲೇ ಹತ್ತಿರದ ಪಶುವೈದ್ಯರಿಗೆ ತಿಳಿಸಲು ಮತ್ತು ಇಲಾಖೆಗೆ ರೋಗ ತನಿಖೆಗಾಗಿ ಮಾದರಿಗಳನ್ನು ಸಂಗ್ರಹಿಸಲು ಸಹಕರಿಸುವಂತೆ ಸೂಚಿಸಿದರು.

ಕೋಳಿ ಶೀತ ಜ್ವರದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲಾ ಅಗತ್ಯ ಇಲಾಖೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗಿದೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಯಾವುದೇ ರೀತಿಯ ಹಕ್ಕಿ ಜ್ವರ ರೋಗ ಹರಡುವುದಿಲ್ಲ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ಸಭೆಯಲ್ಲಿ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಕ್ರಾಂತಿ, ಡಿ.ಎಚ್.ಒ. ರಾಜೇಂದ್ರ ದೊಡ್ಮನಿ, ಡಾ.ನಾಗರಾಜ, ಜಿಲ್ಲೆಯ ಪಶು ಇಲಾಖೆ ಸಹಾಯಕ ನಿರ್ದೇಶಕರು, ಪಶು ವೈದ್ಯಾಧಿಕಾರಿಗಳು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು