ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಡಿಎಪಿ ರಸಗೊಬ್ಬರ ಕೊರತೆಯಿಲ್ಲ

ಕಾಳಸಂತೆಯಲ್ಲಿ ಲಾಭ ಮಾಡಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ.ಪಾಟೀಲ
Last Updated 3 ಜೂನ್ 2021, 17:13 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದಲ್ಲಿ ಮುಂಗಾರು ಬಿತ್ತನೆಗೆ ಅಗತ್ಯವಾದ ಡಿಎಪಿ ಗೊಬ್ಬರ ಸಾಕಷ್ಟು ದಾಸ್ತಾನು ಇದ್ದು, ಈ ಬಾರಿ ಯಾವುದೇ ಕೊರತೆಯಾಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

2021–22ರ ಸಾಲಿನಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 4.44 ಲಕ್ಷ ಮೆಟ್ರಿಕ್‌ ಟನ್‌ ಡಿಎಪಿಗೆ ಬೇಡಿಕೆಯಿದೆ. ಈಗಾಗಲೇ 93 ಸಾವಿರ ಮೆಟ್ರಿಕ್‌ ಟನ್‌ ಸರಬರಾಜಾಗಿದ್ದು, ಹಳೆಯ ದಾಸ್ತಾನು ಸೇರಿದಂತೆ 1.26 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ನಮ್ಮ ಬಳಿಯಿದೆ. ಬೇಡಿಕೆಗನುಗುಣವಾಗಿ ಡಿಎಪಿ ಪೂರೈಕೆಯಾಗಲಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

2 ಲಕ್ಷ ಮೆಟ್ರಿಕ್‌ ಟನ್‌ ಎಂ.ಒ.ಪಿ ರಸಗೊಬ್ಬರಕ್ಕೆ ಬೇಡಿಕೆಯಿದ್ದು, 1.16 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇದೆ. 10 ಲಕ್ಷ ಮೆಟ್ರಿಕ್‌ ಟನ್‌ ಕಾಂಪ್ಲೆಕ್ಸ್‌ಗೆ ಬೇಡಿಕೆಯಿದ್ದು, 5.54 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇದೆ. 10 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾಗೆ ಬೇಡಿಕೆಯಿದ್ದು, 4.58 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇದೆ. ಒಟ್ಟಾರೆ 2.64 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಡಿಕೆಗೆ ಪ್ರಸ್ತುತ 1.25 ಲಕ್ಷ ಮೆಟ್ರಿಕ್‌ ಟನ್‌ ಸಂಗ್ರಹ ನಮ್ಮ ಬಳಿಯಿದೆ ಎಂದು ಮಾಹಿತಿ ನೀಡಿದರು.

ಅಕ್ರಮ ದಾಸ್ತಾನು: ನಿರ್ದಾಕ್ಷಿಣ್ಯ ಕ್ರಮ
ನಕಲಿ ರಸಗೊಬ್ಬರ, ಬಿತ್ತನೆ ಬೀಜವನ್ನು ಅಕ್ರಮವಾಗಿದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಲಾಭ ಮಾಡಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ₹79 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಬಿತ್ತನೆ ಬೀಜ ಹಾಗೂ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗೊಬ್ಬರವನ್ನು ಹಾವೇರಿ, ಕೊಪ್ಪಳ, ಬೀದರ್‌, ಬಸವಕಲ್ಯಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದರು.

333 ಕೀಟನಾಶಕ ಮಳಿಗೆಗಳಿಗೆ ಷೋಕಾಸ್‌ ನೋಟಿಸ್‌ ನೀಡಿದ್ದು, 2 ಮಳಿಗೆಗಳನ್ನು ಜಪ್ತಿ ಮಾಡಲಾಗಿದೆ. 779 ರಸಗೊಬ್ಬರ ಮಳಿಗೆಗಳಿಗೆ ಷೋಕಾಸ್‌ ನೋಟಿಸ್‌ ನೀಡಿದ್ದು, 3 ಮಳಿಗೆಗಳನ್ನು ಜಪ್ತಿ ಮಾಡಲಾಗಿದೆ. 269 ಬಿತ್ತನೆ ಬೀಜ ಮಳಿಗೆಗಳಿಗೆ ಷೋಕಾಸ್‌ ನೋಟಿಸ್‌ ನೀಡಿದ್ದು, 4 ಮಳಿಗೆಗಳನ್ನು ಜಪ್ತಿ ಮಾಡಲಾಗಿದೆ.

ಕಳೆದ ವರ್ಷ 204 ಮಳಿಗೆಗಳ ಪರವಾನಗಿ ರದ್ದುಪಡಿಸಲಾಗಿದ್ದು, 263 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟಾರೆ ₹17.31 ಕೋಟಿ ಮೌಲ್ಯದ ಕೃಷಿ ಪರಿಕರಗಳನ್ನು ಜಪ್ತಿ ಮಾಡಿ, 69 ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದು ತಿಳಿಸಿದರು.

ಕಳೆದ ಬಾರಿಯಂತೆ ಈ ಬಾರಿಯೂ ಚೀನಾದಿಂದ ಮನೆ ಬಾಗಿಲಿಗೆ ಉಚಿತವಾಗಿ ಬಿತ್ತನೆ ಬೀಜಗಳು ಬರುತ್ತಿವೆ ಎಂಬ ವದಂತಿ ಹರಡಿದೆ. ಇಂಥ ಬಿತ್ತನೆ ಬೀಜಗಳನ್ನು ರೈತರು ಬಿತ್ತನೆ ಮಾಡಬಾರದು. ಚೀನಾದ ಬೀಜಗಳು ರಾಜ್ಯಕ್ಕೆ ಇದುವರೆಗೆ ಬಂದಿರುವ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು.

‘ಲೋಪವೆಸಗಿದರೆ ಕ್ರಮ’
ಅನಧಿಕೃತ ಬೀಜ ಮಾರಾಟ, ದಾಸ್ತಾನು ಚಟುವಟಿಕೆಗಳ ಸ್ಥಳೀಯ ಅಧಿಕಾರಿಗಳು ನಿಗಾವಹಿಸಬೇಕು. ಒಂದೊಮ್ಮೆ ಸ್ಥಳೀಯ ಕೃಷಿ ಅಧಿಕಾರಿಗಳು ಪತ್ತೆ ಮಾಡದೇ ಕೃಷಿ ವಿಚಕ್ಷಣಾ ದಳ ಅಕ್ರಮಗಳನ್ನು ಪತ್ತೆ ಮಾಡಿದರೆ ಸ್ಥಳೀಯ ಕೃಷಿ ಅಧಿಕಾರಿಗಳ ಲೋಪವೆಂದು ಭಾವಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಎಚ್ಚರಿಸಿದರು.

ಬಿಡಿ ಬೀಜಗಳ ಮಾರಾಟ, ಅನಧಿಕೃತ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಪತ್ತೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನೆರವು ಅಗತ್ಯವಾಗಿದೆ. ಈ ಕುರಿತಂತೆ ಕೃಷಿ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನೆರವು ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT