ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ-–ಮುಸ್ಲಿಂ ಭಾವೈಕ್ಯದ ತಾಣ ವರ್ದಿ

Published 9 ಜೂನ್ 2024, 5:23 IST
Last Updated 9 ಜೂನ್ 2024, 5:23 IST
ಅಕ್ಷರ ಗಾತ್ರ

ಅಕ್ಕಿಆಲೂರು: ಹಾವೇರಿ ಜಿಲ್ಲೆಯ ಜೀವನದಿ ವರದಾ ನದಿ ದಡದ ಮೇಲಿರುವ ಹಾನಗಲ್ ತಾಲ್ಲೂಕಿನ ಪುಟ್ಟ ಗ್ರಾಮ ವರ್ದಿ ಹಿಂದೂ-ಮುಸ್ಲಿಂ ಭಾವೈಕ್ಯದ ತಾಣವಾಗಿ ಗಮನ ಸೆಳೆದಿದ್ದು, ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ.

ವರದಾ ನದಿ ದಡದ ಮೇಲಿರುವುದರಿಂದ ಈ ಗ್ರಾಮದಲ್ಲಿ ವರ್ದಿ ಎನ್ನುವ ಹೆಸರು ಬಂದಿದೆ. ನೂರಾರು ವರ್ಷಗಳ ಹಿಂದೆ ದೂರದ ವಿಜಯಪುರ ಜಿಲ್ಲೆಯಿಂದ ವಲಸೆ ಬಂದ ಜನ ಈ ಗ್ರಾಮದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಗ್ರಾಮದ ಪಕ್ಕದಲ್ಲಿ ವರದೆ ಹರಿದಿರುವುದರಿಂದ ಗಿಡಮರಗಳಿಂದ ಇಲ್ಲಿನ ಪರಿಸರವೂ ಸ್ವಚ್ಛಂದವಾಗಿದೆ. ಮಲೆನಾಡು, ಬಯಲುಸೀಮೆಯ ಸಂಗಮದಂತಿದೆ. ಇಲ್ಲಿನ ಮಣ್ಣು ಫಲವತ್ತಾಗಿದ್ದು, ಭೂಮಿ ನಂಬಿ ಬದುಕು ಸಾಗಿಸುವ ಕೃಷಿಕರ ಸಂಖ್ಯೆ ಇಲ್ಲಿ ಹೆಚ್ಚಿದೆ.

ಗ್ರಾಮದಲ್ಲಿ ಮುಸ್ಲಿಂ ಧರ್ಮೀಯರ ಆರಾಧ್ಯ ಗುರುಗಳಾದ ಹಜರತ್ ಅಲ್ಲಾಮ ಮೌಲಾನಾ ಸೈದಶಾ ಮಹ್ಮದ್ ಇಬ್ರಾಹಿಂ ಖಾದ್ರಿ ಅಲ್ ಜಬ್ಬಾರಿ, ಬಡೆ ಹಜರತ್ ಗುರುಗಳ ದರ್ಗಾ ನಿರ್ಮಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಮನಃಶಾಂತಿ ಪಡೆಯುತ್ತಾರೆ. ಪ್ರತಿವರ್ಷ ಇಲ್ಲಿ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯ ಭಕ್ತರ ದಂಡೇ ನೆರೆದಿರುತ್ತದೆ.

ಗ್ರಾಮದಲ್ಲಿರುವ ಹೊನ್ನಮ್ಮ ದೇವಿ ದೇವಸ್ಥಾನವೂ ರಾಜ್ಯದ ಮೂಲೆಮೂಲೆಗಳಿಂದ ಅಪಾರ ಪ್ರಮಾಣದ ಭಕ್ತ ಸಮುದಾಯವನ್ನು ಹೊಂದಿದೆ. ಗುಬ್ಬಿ ನಂಜುಂಡೇಶ್ವರ ಸ್ವಾಮೀಜಿಯೂ ಇಲ್ಲಿ ಜಪ, ತಪ ಗೈಯ್ದಿದ್ದು ಇದೊಂದು ಪವಿತ್ರ ಸ್ಥಳವಾಗಿದೆ.

ಗ್ರಾಮದ ಜನಸಂಖ್ಯೆ 3,400ರಷ್ಟಿದ್ದು, ಕೃಷಿ ಚಟುವಟಿಕೆಗಳನ್ನು ಅವಲಂಬಿಸಿರುವ ಕೂಲಿಕಾರ್ಮಿಕರು ಹೆಚ್ಚಿದ್ದಾರೆ. ಗ್ರಾಮದ ಪ್ರವೇಶ ಸ್ಥಳದಲ್ಲಿ ರಾಷ್ಟ್ರಧ್ವಜ ಸ್ತಂಭ, ವೀರವನಿತೆ ಕಿತ್ತೂರು ರಾಣಿ ಚನ್ನಮ್ಮನ ಪುತ್ಥಳಿ ನಿರ್ಮಾಣ ಮಾಡಿರುವ ಗ್ರಾಮಸ್ಥರು ದೇಶಪ್ರೇಮ ಮೆರೆದಿದ್ದಾರೆ. ಕಲ್ಮೇಶ್ವರ ದೇವಸ್ಥಾನ, ದರ್ಗಾ ಅಕ್ಕಪಕ್ಕದಲ್ಲಿದ್ದು, ಹಿಂದೂ-ಮುಸ್ಲಿಂ ಧರ್ಮೀಯರು ಅವರವರ ಸಂಪ್ರದಾಯ, ಪದ್ಧತಿಗಳನ್ನು ಆಚರಿಸುತ್ತಾ ಪರಸ್ಪರ ಸೌಹಾರ್ದದ ಬದುಕು ಸಾಗಿಸುತ್ತಿದ್ದಾರೆ.

ವರ್ದಿ ಹಾನಗಲ್ ತಾಲ್ಲೂಕಿನ ಪುಟ್ಟ ಗ್ರಾಮವಾಗಿದ್ದು, ಸದ್ವಿಚಾರ ಸಂಪನ್ನರ ಬೀಡಾಗಿದೆ. ಇಲ್ಲಿ ಪ್ರತಿವರ್ಷ ನಡೆಯುವ ಜಾತ್ರೆ, ಹಬ್ಬ, ಹರಿದಿನಗಳಿಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಎಲ್ಲರೂ ಒಂದಾಗಿ ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಬದುಕು ಕಟ್ಟಿಕೊಂಡಿರುವ ಕಾರಣ ಹೊನ್ನಮ್ಮ ದೇವಿಯ ವಾಸಸ್ಥಳ ವರ್ದಿ ಹೊನ್ನಿನ ನಾಡಾಗಿದೆ ಎನ್ನುತ್ತಾರೆ ಹೊನ್ನಪ್ಪ ಬಾರ್ಕಿ.

ಸ್ವಾಮೀಜಿ ತಪಗೈದ ಸ್ಥಳದಲ್ಲಿ ಮಠ ನಿರ್ಮಾಣ

‘ಕಾರಣಿಕ ಯುಗಪುರುಷ, ಹಾನಗಲ್ ಲಿಂ.ಕುಮಾರ ಸ್ವಾಮೀಜಿ ಗ್ರಾಮಕ್ಕೆ ಆಗಮಿಸಿ ಅರಳಿ ಮರದ ಕೆಳಗೆ ಕುಳಿತು ತಪಸ್ಸು ಮಾಡುತ್ತಿದ್ದನ್ನು ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆ ಕಾರಣಕ್ಕಾಗಿಯೇ ಸ್ವಾಮೀಜಿ ತಪಗೈಯ್ದ ಸ್ಥಳದಲ್ಲಿ ಸಿಂದಗಿಯ ಶಾಂತವೀರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಠ ನಿರ್ಮಿಸಲಾಗಿದೆ. ಅಂದಿನಿಂದ ಇಂದಿನವರೆಗೂ ನಿತ್ಯ ಪೂಜೆ, ಪುನಸ್ಕಾರ ಕೈಗೊಳ್ಳಲಾಗುತ್ತಿದ್ದು, ಅದೊಂದು ಪವಿತ್ರ ಸ್ಥಳವಾಗಿದೆ’ ಎನ್ನುತ್ತಾರೆ ಗ್ರಾಮದ ಉಳವಯ್ಯ ಹಿರೇಮಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT