ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಗುಂದಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ನವೀನ್ ಪೋಷಕರಿಗೆ ರಾಜ್ಯಪಾಲರ ಸಾಂತ್ವನ

ನವೀನ್ ಪೋಷಕರಿಗೆ ರಾಜ್ಯಪಾಲರಿಂದ ಸಾಂತ್ವನ
Last Updated 24 ಮಾರ್ಚ್ 2022, 12:19 IST
ಅಕ್ಷರ ಗಾತ್ರ

ಚಳಗೇರಿ (ಕುಮಾರಪಟ್ಟಣ): ರಷ್ಯಾ ದಾಳಿಯಂದ ಉಕ್ರೇನ್‌ನಲ್ಲಿ ಮೃತಪಟ್ಟ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ ಗ್ಯಾನಗೌಡರ್ ನಿವಾಸಕ್ಕೆ ಗುರುವಾರ ರಾಜ್ಯಪಾಲ ಥಾವರಚಂದ್ ಗೆಹಲೋತ್ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಮೃತ ನವೀನ ಗ್ಯಾನಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಕುಟುಂಬದ ಬಗ್ಗೆ ಮಾಹಿತಿ ಪಡೆದರು. ‘ನಿಮ್ಮ ಮಗ ಪ್ರತಿಭಾವಂತನಾಗಿದ್ದ. ಅವನನ್ನು ಕಳೆದುಕೊಂಡಿರುವುದಕ್ಕೆ ನನಗೂ ದುಃಖವಾಗುತ್ತಿದೆ. ನಿಮಗೆ ಯಾವುದೇ ನೆರವು ಬೇಕು ಎಂದರೆ ನನ್ನನ್ನು ನೇರವಾಗಿ ಸಂಪರ್ಕಿಸಿ, ನಿಮಗೆ ಸಹಾಯ ಮಾಡುತ್ತೇನೆ. ಸದಾ ನಿಮ್ಮೊಂದಿಗೆ ನಾವಿರುತ್ತೇವೆ’ ಎಂದುನವೀನ್‌ ತಂದೆ ಶೇಖರಪ್ಪ ಗ್ಯಾನಗೌಡರ್‌ ಮತ್ತು ತಾಯಿ ವಿಜಯಲಕ್ಷ್ಮಿ ಅವರಿಗೆ ಸಾಂತ್ವನದ ನುಡಿಗಳನ್ನಾಡಿ, ಧೈರ್ಯ ತುಂಬಿದರು.

ನಂತರ ಶೇಖರಪ್ಪ ಗ್ಯಾನಗೌಡರ್‌ ಮಾಧ್ಯಮದವರೊಂದಿಗೆ ಮಾತನಾಡಿ,‘ಮಗನ ಪಾರ್ಥಿವ ಶರೀರ ಚಳಗೇರಿಗೆ ಬಂದ ದಿನ ರಾಜ್ಯಪಾಲರು ಮಧ್ಯಪ್ರದೇಶದ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಚಳಗೇರಿಗೆ ಬರಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ’ ಎಂದರು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಹಿರಿಯ ಮಗ ಹರ್ಷ ಗ್ಯಾನಗೌಡರ್‌ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರೇ ಚಿನ್ನದ ಪದಕ ವಿತರಿಸಿದ್ದರು ಎಂದು ಶೇಖರಪ್ಪ ಭಾವುಕರಾದರು.

ಚಳಗೇರಿ ಕಟಗಿಹಳ್ಳಿ ಮಠದ ಡಾ.ಮಹಾಂತೇಶ್ವರ ಸ್ವಾಮೀಜಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT