ಗುರುವಾರ , ಮಾರ್ಚ್ 30, 2023
24 °C
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಣೆ

ಕಣ್ಣೀರು ಒರೆಸುವುದೇ ಮಾನವೀಯತೆ: ನಳೀನ್‌ಕುಮಾರ್‌ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರೇಕೆರೂರು (ಹಾವೇರಿ): ‘ನೊಂದವರ ಕಣ್ಣೀರು ಒರೆಸುವುದೇ ನಿಜವಾದ ಮಾನವೀಯ ಕಾರ್ಯ. ದುಃಖದಲ್ಲಿದ್ದವರಿಗೆ ಸಾಂತ್ವನ, ಸ್ಪಂದನೆ, ಆತ್ಮಸ್ಥೈರ್ಯ ತುಂಬಿದರೆ ಅದೇ ಭಗವಂತನ ಪೂಜೆ. ಇಂಥ ಮಾನವೀಯ ಕೆಲಸವನ್ನು ಸಚಿವ ಬಿ.ಸಿ. ಪಾಟೀಲ ಅವರು ಮಾಡುತ್ತಿರುವುದು ಶ್ಲಾಘನೀಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ ಮೆಚ್ಚುಗೆ ವ್ಯಕ್ತಪಡಿಸಿದರು. 

ಪಟ್ಟಣದ ಗುರುಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಂದ ವೈಯಕ್ತಿಕ ಪರಿಹಾರ ವಿತರಣೆ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ವಿಧವಾ ವೇತನ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

35 ಕೋಟಿ ಮಂದಿಗೆ ಲಸಿಕೆ:

ಜಗತ್ತಿನಲ್ಲಿ ಅತಿ ಹೆಚ್ಚು ಲಸಿಕೆ ಹಾಕಿದ ದೇಶವೆಂದರೆ ಅದು ಭಾರತ. ಈಗಾಗಲೇ 35 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ದೇಶದ 130 ಕೋಟಿ ಜನರಿಗೂ ಲಸಿಕೆ ಹಾಕುವ ಗುರಿಯನ್ನು ಪ್ರಧಾನಿ ಮೋದಿ ಅವರು ಹಾಕಿಕೊಂಡಿದ್ದಾರೆ ಎಂದರು. 

ಕೇಂದ್ರ ಸರ್ಕಾರ ‘ಆತ್ಮನಿರ್ಭರದ’ಡಿ ₹20 ಲಕ್ಷ ಕೋಟಿ ಪರಿಹಾರ ಬಿಡುಗಡೆ ಮಾಡಿತು. ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದ ಮಧ್ಯೆಯೂ ಕೋವಿಡ್‌ನಿಂದ ಮೃತಪಟ್ಟವರ ಬಿಪಿಎಲ್‌ ಕುಟುಂಬಸ್ಥರಿಗೆ ₹1 ಲಕ್ಷ ಪರಿಹಾರ ನೀಡುತ್ತಿದೆ. ಮತದಾರರ ಋಣ ತೀರಿಸುವ ಕೆಲಸವನ್ನು ಬಿಜೆಪಿ ಸರ್ಕಾರಗಳು ಮಾಡುತ್ತಿವೆ ಎಂದು ಸರ್ಕಾರದ ನಡೆಯನ್ನು ಶ್ಲಾಘಿಸಿದರು.

ಸ್ವಾಭಿಮಾನಿ ಕಾಯಿಲೆ:

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಬಿ.ಸಿ.ಪಾಟೀಲ ಅವರು ನೊಂದವರಿಗೆ ಪರಿಹಾರ ಕೊಡುವಾಗ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೊಟ್ಟಿರುವುದು ಮೆಚ್ಚತಕ್ಕ ನಡೆ. ‘ಸ್ವಾಭಿಮಾನಿ ಕಾಯಿಲೆ’ಯಾಗಿರುವ ಕೊರೊನಾವನ್ನು ನೀವಾಗಿ ಬರಮಾಡಿಕೊಳ್ಳದ ಹೊರತು ಅದು ನಿಮ್ಮ ಮನೆಗೆ ಬರುವುದಿಲ್ಲ. ಹೀಗಾಗಿ ಕೊರೊನಾದ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆ ಬೇಕು ಎಂದು ಹೇಳಿದರು. 

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ತಾಲ್ಲೂಕಿನಲ್ಲಿ ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಬಿ.ಸಿ.ಪಾಟೀಲರು ವೈಯಕ್ತಿಕವಾಗಿ ಧನಸಹಾಯ ಮಾಡಿ, ಆತ್ಮಸ್ಥೈರ್ಯ ತುಂಬುವ ಕಾರ್ಯದ ಜತೆಗೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷಿಕ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಜಿ.ಶಿವನಗೌಡ, ಪ.ಪಂ. ಉಪಾಧ್ಯಕ್ಷೆ ಸುಧಾ ಚಿಂದಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ, ಸುಮಿತ್ರಾ ಪಾಟೀಲ, ಡಿ.ಸಿ.ಪಾಟೀಲ, ಪಾಲಾಕ್ಷಗೌಡ ಪಾಟೀಲ, ಎನ್.ಎಂ.ಈಟೇರ, ಜಿ.ಪಿ.ಪ್ರಕಾಶ, ಆರ್.ಎನ್.ಗಂಗೋಳ, ತಹಶೀಲ್ದಾರ್ ಕೆ.ಎ.ಉಮಾ, ರಟ್ಟೀಹಳ್ಳಿ ತಹಶೀಲ್ದಾರ್ ಅರುಣಕುಮಾರ ಕಾರಗಿ ಇದ್ದರು.

104 ಕುಟುಂಬಗಳಿಗೆ ಪರಿಹಾರ

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಕೋವಿಡ್‌ನಿಂದ ಮೃತಪಟ್ಟವರ 53 ಕುಟುಂಬಸ್ಥರ ಮನೆ ಬಾಗಿಲಿಗೆ ಹೋಗಿ ವೈಯಕ್ತಿಕ ತಲಾ ₹50 ಸಾವಿರ ಪರಿಹಾರ ನೀಡಿದ್ದೇನೆ. ಈ ಕಾರ್ಯಕ್ರಮದಲ್ಲಿ 51 ಕುಟುಂಬಸ್ಥರಿಗೆ ಪರಿಹಾರ ನೀಡುತ್ತಿದ್ದೇನೆ. 4 ಬಾರಿ ಶಾಸಕನನ್ನಾಗಿ ಮಾಡಿದ ಮತದಾರರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು. 

108 ಕುಟುಂಬಗಳಿಗೆ ಶವಸಂಸ್ಕಾರದ ಹಣ ಮಂಜೂರು, ಪತಿ ಕಳೆದುಕೊಂಡ ತಾಯಂದಿರಿಗೆ ವಿಧವಾ ಮಾಸಾಶನ ಸೇರಿದಂತೆ ಸರ್ಕಾರದ ಎಲ್ಲ ಸೌಲಭ್ಯಗಳು ದೊರಕಿಸಿಕೊಡಲು ಕ್ರಮ ಕೈಗೊಂಡಿದ್ದೇನೆ ಎಂದರು. 

ತುಂಗಭದ್ರಾ, ವರದಾ, ಕುಮದ್ವತಿ ನದಿಗಳಿಂದ ಒಂದು ವರ್ಷದಲ್ಲಿ ತಾಲ್ಲೂಕಿನ ಶೇ 98ರಷ್ಟು ಕೆರೆ ತುಂಬಿಸುವ ಕೆಲಸ ಮಾಡುತ್ತೇನೆ. ರೈತರ ಸಮಗ್ರ ಅಭಿವೃದ್ಧಿಗೆ ಸದಾ ಸಿದ್ಧ ಎಂದು ಹೇಳಿದರು. 

ಸೋಷಿಯಲ್‌ ಡಿಸ್ಟೆನ್ಸ್‌, ಮಾಸ್ಕ್‌, ಸ್ಯಾನಿಟೈಸರ್‌ ಎಂಬ ‘ಎಸ್‌ಎಂಎಸ್‌’ ಎಂಬ ಮಂತ್ರದಿಂದ ಕೊರೊನಾವನ್ನು ದೂರವಿಡಿ, ಮುನ್ನೆಚ್ಚರಿಕೆ ವಹಿಸಿ
– ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಮಠ, ರಾಜನಹಳ್ಳಿ

ಭಾರತೀಯ ಆಚಾರ–ವಿಚಾರಗಳನ್ನು ಮರೆತಿರುವುದೇ ಕೊರೊನಾ ಹೆಚ್ಚಲು ಕಾರಣ. ಸಂಪ್ರದಾಯ–ಸಂಸ್ಕಾರಗಳನ್ನು ಎಂದಿಗೂ ಮರೆಯಬಾರದು
– ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠ

ಮತದಾರರು ಕುರಿಗಳಾಗಬಾರದು, ಪುರುಷ ಸಿಂಹಗಳಾಗಬೇಕು. ಹಣಕ್ಕಾಗಿ ಮತ ಮಾರಿಕೊಂಡು ಸ್ವಾಭಿಮಾನ ಕಳೆದುಕೊಳ್ಳಬೇಡಿ
– ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು