ಶುಕ್ರವಾರ, ಫೆಬ್ರವರಿ 26, 2021
32 °C
ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಉದಾಸಿ ಎಚ್ಚರಿಕೆ

ಕಳಪೆ ಕಾಮಗಾರಿ ನೌಕರಿಗೆ ಕುತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್‌ನಲ್ಲಿ ಮಂಗಳವಾರ ಶಾಸಕ ಸಿ.ಎಂ.ಉದಾಸಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ಹಾನಗಲ್: ‘ರಸಗೊಬ್ಬರ ಪೂರೈಕೆಯಲ್ಲಿ ರೈತರನ್ನು ಸತಾಯಿಸಿದರೆ ಅಥವಾ ಗೊಬ್ಬರದ ಕೃತಕ ಅಭಾವ ಸೃಷ್ಟಿಯಾದರೆ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಾಗುವುದು’ ಎಂದು ಶಾಸಕ ಸಿ.ಎಂ.ಉದಾಸಿ ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಂಗಳವಾರ ಇಲ್ಲಿನ ಸಾಮರ್ಥ್ಯಸೌಧದಲ್ಲಿ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿದ್ದ ಅವರು, ‘ಗೋವಿನಜೋಳಕ್ಕೆ ಲದ್ದಿ ಹುಳು ಬಾಧೆ ವ್ಯಾಪಿಸುತ್ತಿದೆ, ಈ ರೋಗದ ಹತೋಟಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಕೃಷಿ ಅಧಿಕಾರಿ ಸಂತೋಷ ಬಡ್ಡಿಯವರ ಅವರಿಗೆ ಸೂಚನೆ ನೀಡಿದರು.

‘ಹಾನಗಲ್‌ ತಾಲ್ಲೂಕು ಆಸ್ಪತ್ರೆಯಲ್ಲಿ ಎಕ್ಸ್‌ರೆ ಯಂತ್ರ ದುರಸ್ತಿಯಲ್ಲಿದೆ. ಹೀಗಾಗಿ, ಜನರಿಗೆ ಸಮಸ್ಯೆಯಾಗುತ್ತಿದೆ, ಹೊಸ ಯಂತ್ರ ಪೂರೈಕೆಯ ಪ್ರಕ್ರಿಯೆಗಳನ್ನು ಸಿದ್ಧಪಡಿಸಿಕೊಳ್ಳಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಾರುತಿ ಚಿಕ್ಕಣ್ಣನವರ ಅವರಿಗೆ ಆದೇಶಿಸಿದರು.

‘ಮಲೇರಿಯಾ ವ್ಯಾಪಿಸಬಹುದಾದ ಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಜನರಿಗೆ ಉಚಿತವಾಗಿ ವಿತರಿಸಲಾಗುತ್ತಿರುವ ಸೊಳ್ಳೆ ಪರದೆಗೆ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ, ಇದನ್ನು ಸಹಿಸುವುದಿಲ್ಲ’ ಎಂದರು.

‘ಯಳ್ಳೂರ ಗ್ರಾಮ ಸೇರಿ ಹಲವು ಗ್ರಾಮೀಣ ರಸ್ತೆಗಳ ನಿರ್ಮಾಣ ಅತ್ಯಂತ ಕಳಪೆಯಾಗಿದೆ, ಈ ಬಗ್ಗೆ ಗಮನ ಹರಿಸದಿದ್ದರೆ ವಿಚಾರಣೆ ನಡೆದು ನೌಕರಿ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಎಇಇ ಎಂ.ಆರ್‌.ಸೊಪ್ಪಿಮಠ ಅವರಿಗೆ ಶಾಸಕ ಉದಾಸಿ ತಾಕೀತು ಮಾಡಿದರು.

‘ಗ್ರಾಮೀಣ ಭಾಗದಲ್ಲಿ ಅಕ್ರಮ ಸರಾಯಿ ಮಾರಾಟಕ್ಕೆ ಕಡಿವಾಣ ಹಾಕಬೇಕು, ಯಾರ ಮುಲಾಜಿಗೂ ಒಳಗಾಗದಂತೆ ಅಕ್ರಮ ಸಾರಾಯಿ ಮಾರಾಟಗಾರರ ಮೇಲೆ ದೂರು ದಾಖಲಿಸಿಕೊಳ್ಳಬೇಕು’ ಎಂದು ಅಬಕಾರಿ ನಿರೀಕ್ಷಕ ಧರ್ಮರಾಜ ಅವರಿಗೆ ಸೂಚಿಸಿದರು.

ಈಚೆಗೆ ಕಳುವು ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಮಾಹಿತಿ ನೀಡಲು ಮುಂದಿನ ಸಭೆಗೆ ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಜರಾಗಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಉಪಾಧ್ಯಕ್ಷೆ ಸರಳಾ ಜಾಧವ, ಸ್ಥಾಯಿ ಸಮಿತಿ ಅಧ್ಯಕ್ಷ ನಜೀರಸಾಬ್ ಲೋಹಾರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಟಾಕನಗೌಡ ಪಾಟೀಲ, ಮಾಲತೇಶ ಸೊಪ್ಪಿನ, ರಾಜೇಶ್ವರಿ ಕಲ್ಲೇರ, ಗೌರಮ್ಮ ಶೇತಸನದಿ, ಇಓ ಶಶಿಧರ.ಎಂ.ಜಿ ಇದ್ದರು.

ಶುದ್ಧ ಕುಡಿವ ನೀರಿನ ಘಟಕ; ಸೂಕ್ತ ನಿರ್ವಹಣೆಗೆ ಸೂಚನೆ

ಪಟ್ಟಣ ಒಳಗೊಂಡು ಗ್ರಾಮೀಣ ಭಾಗದಲ್ಲಿ ಒಟ್ಟು 128 ಶುದ್ಧ ಕುಡಿವ ನೀರಿನ ಘಟಕಗಳಿವೆ. ಈ ಪೈಕಿ ಅರ್ಧದಷ್ಟು ಸ್ಥಗಿತಗೊಂಡಿವೆ. ವರ್ಷಗಟ್ಟಲೇ ಬಂದ್ ಆಗಿರುವ ಘಟಕಗಳು ಈಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿವೆ ಎಂಬ ವಿಯಷವನ್ನು ಜಿಲ್ಲಾ ಪಂಚಾಯ್ತಿ ಎಇಇ ಸಭೆಯ ಗಮನಕ್ಕೆ ತಂದರು.

ದುರಸ್ತಿ ಮತ್ತಿತರ ಕಾರಣಕ್ಕೆ ಸ್ಥಗಿತಗೊಂಡ ಘಟಕಗಳ ಮರು ಚಾಲನೆ, ನಿರ್ವಹಣೆಯ ಜವಾಬ್ದಾರಿ ಬಗ್ಗೆ ಸೊಪ್ಪಿಮಠ ಅವರನ್ನು ಪ್ರಶ್ನಿಸಿದ ಶಾಸಕ ಸಿ.ಎಂ.ಉದಾಸಿ, ‘ಕಳಪೆ ಯಂತ್ರಗಳ ಅಳವಡಿಕೆ ಪರಿಣಾಮ ಘಟಕಗಳು ಕೆಲವೇ ದಿನಗಳಲ್ಲಿ ಕೆಟ್ಟು ನಿಂತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆಗೆ ವಿಶೇಷ ಅನುದಾನ ಇಲ್ಲ. ಗ್ರಾಮ ಪಂಚಾಯ್ತಿಗಳಿಗೆ ಈ ಘಟಕ ನಿರ್ವಹಣೆಗೆ ಹಣಕಾಸಿನ ಅಡಚಣೆ ಇದೆ’ ಎಂದು ಸೊಪ್ಪಿಮಠ ಹೇಳಿದರು.

‘ಜನರಿಗೆ ಅಗತ್ಯವಾದ ಶುದ್ಧ ನೀರು ಪೂರೈಸುವ ನಿಟ್ಟಿನಲ್ಲಿ ಕೆಟ್ಟುನಿಂತ ಘಟಕಗಳ ಮರುಚಾಲನೆಗೆ ಅಧಿಕಾರಿಗಳ ಒಂದು ಸಮಿತಿ ರಚನೆಯಾಗಬೇಕು, ಯಾವುದೇ ಕಾರಣಕ್ಕೂ ಬೇರೆಯವರಿಗೆ ಗುತ್ತಿಗೆ ನೀಡುವುದು ಬೇಡ’ ಎಂದು ಶಾಸಕ ಉದಾಸಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು