ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಚುನಾವಣೆಯಲ್ಲಿ ಕಮಲ ಅರಳಿಸಿ

ಆಮಿಷಕ್ಕೆ ಒಳಗಾಗದೆ ಗ್ರಾಮಾಭಿವೃದ್ಧಿಗೆ ಶ್ರಮಿಸಿ: ಸಂಸದೆ ಶೋಭ ಕರಂದ್ಲಾಜೆ ಸಲಹೆ
Last Updated 11 ಜನವರಿ 2021, 16:20 IST
ಅಕ್ಷರ ಗಾತ್ರ

ಹಾವೇರಿ: ‘ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಮಲ ಅರಳಿಸಲು ಸಂಕಲ್ಪ ತೊಡಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ಮತ್ತು ಕಾರ್ಯಕರ್ತರು ಭ್ರಷ್ಟಾಚಾರ, ಆಮಿಷಕ್ಕೆ ಒಳಗಾಗದೆ ಪಾರದರ್ಶಕ ಆಡಳಿತ ನೀಡಬೇಕು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ‘ಜನಸೇವಕ ಸಮಾವೇಶ’ದಲ್ಲಿ ಅವರು ಮಾತನಾಡಿದರು. ‘ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಗೆದ್ದಿದ್ದಾರೆ.ಸದಸ್ಯೆಯರ ಗಂಡಂದಿರು ತಮ್ಮ ಪತ್ನಿಯರಿಗೆ ಅಧಿಕಾರ ನಡೆಸಲು ಅನುವು ಮಾಡಿಕೊಡಬೇಕು ಎಂದು ತಿಳಿ ಹೇಳಿದರು.

ಗ್ರಾ.ಪಂ. ಚುನಾವಣೆ ಪ್ರಚಾರದಲ್ಲಿ ನೇರವಾಗಿ ಭಾಗವಹಿಸಲು ಅವಕಾಶವಿಲ್ಲದ ಕಾರಣ ಪಕ್ಷದ ಶಾಸಕರು ಮತ್ತು ನಾಯಕರು ಪ್ರಚಾರಕಾರ್ಯಕ್ಕೆ ಬರಲಿಲ್ಲ. ಆದರೆ, ಪಕ್ಷದ ಬೆಂಬಲಿತರ ಗೆಲುವಿಗೆ ಟೊಂಕಕಟ್ಟಿ ನಿಂತು ಕೆಲಸ ಮಾಡಿದ್ದಾರೆ. ಹೀಗಾಗಿ ಹಾವೇರಿ ಜಿಲ್ಲೆಯಲ್ಲಿ 2967 ಸ್ಥಾನಗಳಲ್ಲಿ 1930 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯ ಗಳಿಸಿದ್ದಾರೆ ಎಂದರು.

₹31 ಸಾವಿರ ಕೋಟಿ:15ನೇ ಹಣಕಾಸು ಆಯೋಗದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಂಖ್ಯೆ ಆಧಾರದ ಮೇಲೆ ಪ್ರತಿ ಗ್ರಾಮ ಪಂಚಾಯಿತಿಗೆ ವರ್ಷಕ್ಕೆ ಕನಿಷ್ಠ ₹1 ಕೋಟಿ ನೀಡಲಿದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯಕ್ಕೆ ₹ 31 ಸಾವಿರ ಕೋಟಿ ಬಿಡುಗಡೆಯಾಗಲಿದೆ. ಚೆಕ್‌ ಮೇಲೆ ಸಹಿ ಮಾಡುವ ಅಧಿಕಾರ ಗಳಿಸಿರುವ ನೀವು ಅದನ್ನು ಎಚ್ಚರಿಕೆಯಿಂದ ಬಳಸಿ ಎಂದು ಸಲಹೆ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಮುಂದಿನ 5 ವರ್ಷ ನಿಜವಾದ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ. ಸೂರಿಲ್ಲದ ಬಡವರಿಗೆ ಮನೆ ಕಟ್ಟಿಕೊಡಿ. ಪಂಚಾಯತ್‌ ರಾಜ್‌ ಕಾಯ್ದೆ ಬಗ್ಗೆ ಜ್ಞಾನ ಬೆಳೆಸಿಕೊಳ್ಳಿ’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ‘ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಶೋಕ ಬಸ್ತಿ ಅವರು ರಾಜ್ಯಸಭಾ ಸದಸ್ಯರಾದರು. ಸಾಮಾನ್ಯ ಕಾರ್ಯಕರ್ತನ ಪಕ್ಷ ನಿಷ್ಠೆ ಮತ್ತು ಕಾರ್ಯಶೈಲಿ ಗಮನಿಸಿ, ಅಂಥವರಿಗೆ ದೊಡ್ಡ ಹುದ್ದೆ ಕಲ್ಪಿಸುವ ಸಂಪ್ರದಾಯ ಬಿಜೆಪಿಯಲ್ಲಿ ಮಾತ್ರ ಇದೆ’ ಎಂದರು.

ಮೂಲಸೌಕರ್ಯ ಕಲ್ಪಿಸಿ:ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆ, ಕುಡಿಯುವ ನೀರು, ಚರಂಡಿ ಹಾಗೂ ಬಡವರಿಗೆ ಸೂರು ಕಲ್ಪಿಸುವ ಸವಾಲುಗಳನ್ನು ಸ್ವೀಕರಿಸಿ, ಈ ನಿಟ್ಟಿನಲ್ಲಿ ಕೆಲಸ ಮಾಡಿ. ಗ್ರಾಮಗಳಲ್ಲಿ ಶಾಂತಿ, ಸಾಮರಸ್ಯೆ ನೆಲೆಸುವಂತೆ ಮಾಡಿ’ ಎಂದು ಸಲಹೆ ನೀಡಿದರು.

ಸಮಾವೇಶದಲ್ಲಿ ಸಚಿವ ಬಿ.ಶ್ರೀರಾಮುಲು, ಸಂಸದ ಶಿವಕುಮಾರ ಉದಾಸಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ್‌ ಪೂಜಾರ, ವಿಧಾನ ಪರಿಷತ್‌ ಸದಸ್ಯರಾದ ಆರ್.ಶಂಕರ್‌, ಪ್ರದೀಪ ಶೆಟ್ಟರ್‌, ಉಗ್ರಾಣ ನಿಗಮ ಮಂಡಳಿ ಅಧ್ಯಕ್ಷ ಯು.ಬಿ.ಬಣಕಾರ, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT