ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್: ಗ್ರಾಮೀಣ–ಆಧುನಿಕ ಭಾರತದ ಸಂಪರ್ಕ ಸೇತು

7
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ರಾಮನಗರ ಶಾಖೆ ಉದ್ಘಾಟನೆ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್: ಗ್ರಾಮೀಣ–ಆಧುನಿಕ ಭಾರತದ ಸಂಪರ್ಕ ಸೇತು

Published:
Updated:
Deccan Herald

ರಾಮನಗರ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಯೋಜನೆಯು ಗ್ರಾಮೀಣ ಭಾರತದ ಜೊತೆ ಆಧುನಿಕ ಇಂಡಿಯಾಗೆ ಸಂಪರ್ಕ ಕಲ್ಪಿಸುವ ಕ್ರಾಂತಿಕಾರಕ ಸೇತುವೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್ ಬಣ್ಣಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಅಂಚೆ ಅಧೀಕ್ಷಕರ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ರಾಮನಗರ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ, ಗ್ರಾಮೀಣ ಭಾರತ ಒಂದು ಕಡೆ, ಎಲ್ಲಾ ರೀತಿಯ ಸೌಲಭ್ಯ ಪಡೆದಿರುವ ನಾಗರೀಕರಣದ ಭಾರತ ಮತ್ತೊಂದು ಕಡೆಯಾಗಿತ್ತು. ಈ ಎರಡರ ಮಧ್ಯೆ ಸಾಕಷ್ಟು ಅಂತರವಿತ್ತು, ಈ ಅಂತರವನ್ನು ಸಂಪರ್ಕಿಸಿ ಅವೆರಡನ್ನು ಒಗ್ಗೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನೆ ನಡೆದಿತ್ತು. ಅದು ಇಂದು ಸಾಕಾರಗೊಂಡಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಸಣ್ಣ ಸಣ್ಣ ಉಳಿತಾಯಗಳು ಕೂಡ ಸಂಸ್ಥೆಯೊಂದರ ಮೂಲಕ ಆಗಬೇಕೆನ್ನುವ ಚಿಂತನೆ ಇದಾಗಿದೆ. ಆ ಮೂಲಕ ಗ್ರಾಮೀಣ ಭಾರತವು ನಗರ ಭಾರತದೊಂದಿಗೆ ಐಕ್ಯತೆ ಸಾಧಿಸುವ ಮಾರ್ಗವಾಗಿದೆ. ಆಧುನೀಕರಣದ ಹಿನ್ನೆಲೆಯಲ್ಲಿ ಅಂಚೆ ಇಲಾಖೆಗೆ ಈ ಹಿಂದೆ ಇದ್ದ ಏಕಸ್ವಾಮ್ಯ ಇಂದು ಇಲ್ಲವಾಗಿದೆ. ಇಂದು ಸಾಕಷ್ಟು ಸ್ಪರ್ಧೆ ಎದುರಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಅಂಚೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಈ ಯೋಜನೆಯು ನೂತನ ಅವತಾರವಾಗಿದೆ. ಈ ಯೋಜನೆಯನ್ನು ಪ್ರತಿ ಮನೆ ಮನೆಗೂ ಕೊಂಡೊಯ್ದು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸೇವಾದಾತರು ನೀವಾಗಬೇಕಿದೆ, ಆ ಮೂಲಕ ಆರ್ಥಿಕವಾಗಿಯೂ ಸಹ ಅಂಚೆ ಇಲಾಖೆಯು ಬಲಿಷ್ಠಗೊಳಿಸಬೇಕಾಗಿದೆ ಎಂದು ಅಂಚೆ ಸಿಬ್ಬಂದಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಮಾತನಾಡಿ, ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಅಂಚೆ ಹಾಗೂ ಬ್ಯಾಂಕಿಂಗ್ ಸೌಲಭ್ಯಗಳು ಸಾಕಷ್ಟಿರಲಿಲ್ಲ, ಇದೀಗ ಉತ್ತಮ ಸೌಲಭ್ಯ ಲಭ್ಯವಿದೆ. ಇಂದು ಮನೆಯ ಬಾಗಿಲಿಗೆ ಬ್ಯಾಂಕುಗಳು ಎಂಬ ಪರಿಕಲ್ಪನೆ ಉಗಮವಾಗಿದೆ. ಇಂದಿಗೂ ಶೇ 70ರಷ್ಟು ಜನರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಬಡವರು, ಅವಿದ್ಯಾವಂತರು ಸೇರಿದಂತೆ ಎಲ್ಲ ವರ್ಗದವರಿಗೂ ಈ ಬ್ಯಾಂಕಿಂಗ್ ವ್ಯವಸ್ಥೆ ಸುವರ್ಣಾವಕಾಶವನ್ನು ತಂದೊಡ್ಡಿದೆ, ಪ್ರತಿಯೊಬ್ಬ ಭಾರತೀಯರಿಗೂ ಈ ಯೋಜನೆ ಸೇರಬೇಕಿದೆ ಎಂದರು.

ತಹಶೀಲ್ದಾರ್ ಮಾರುತಿ ಪ್ರಸನ್ನ, ಚನ್ನಪಟ್ಟಣದ ಅಂಚೆ ಅಧೀಕ್ಷಕ ಸುರೇಶ್ ಮೂರ್ತಿ ಮಾತನಾಡಿದರು. ಅಂಚೆ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಜಿಲ್ಲಾಡಳಿತ ನಿರ್ಲಕ್ಷ್ಯ: ಬಿಜೆಪಿ ಆರೋಪ
ಐಪಿಪಿಬಿ ಶಾಖೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಸದರು ಹಾಗೂ ಜಿಲ್ಲಾಧಿಕಾರಿ ಸಹಿತ ಪ್ರಮುಖರು ಗೈರಾಗಿದ್ದಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಯಾವ ಜನಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಉದ್ಘಾಟಿಸಿ ಭಾಷಣ ಮಾಡಿದ ಕೆಲವೇ ಸಮಯದಲ್ಲೇ ಜಿ.ಪಂ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಅಲ್ಲಿಂದ ನಿರ್ಗಮಿಸಿದರು. ಅಂಚೆ ಇಲಾಖೆ ನೌಕರರು ಮಾತ್ರ ಉಳಿದರು.

‘ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ, ಅನುಷ್ಟಾನಕ್ಕೆ ಆಸಕ್ತಿ ತೋರುತ್ತಿಲ್ಲ’ ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಈ ಸಂಬಂಧ ಜಿ.ಪಂ ಸಿಇಒ ಜೊತೆ ಮಾತಿನ ಚಕಮಕಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !