ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊನ್ನ ಬ್ಯಾರೇಜಿಗೆ 1 ಟಿಎಂಸಿ ಅಡಿ ನೀರು ಬಿಡುಗಡೆ

ನೀರು ಪೋಲಾಗದಂತೆ ನಿರಂತರ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ
Published 27 ಮಾರ್ಚ್ 2024, 16:19 IST
Last Updated 27 ಮಾರ್ಚ್ 2024, 16:19 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ನಾರಾಯಣಪುರ ಜಲಾಶಯದಿಂದ ಅಫಜಲಪೂರ ತಾಲ್ಲೂಕಿನ ಸೊನ್ನ ಬ್ಯಾರೇಜಿಗೆ ಬುಧವಾರ 1 ಟಿ.ಎಂ.ಸಿ ಅಡಿ ನೀರು ಬಿಡುಗಡೆ ಮಾಡಲಾಗಿದೆ. ನೀರು ಸೊನ್ನ ಬ್ಯಾರೇಜ್ ತಲುಪುವವರೆಗೆ ಕಾಲುವೆಗಳ ಮಧ್ಯದಲ್ಲಿ ಪೋಲಾಗದಂತೆ ತಾಲ್ಲೂಕು ಆಡಳಿತ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸೂಚನೆ ನೀಡಿದರು.

ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಇಒ, ನಗರ ಸ್ಥಳೀಯ ಸಂಸ್ಥೆಗಳ ಮಖ್ಯಸ್ಥರು ಹಾಗೂ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ವಿಡಿಯೊ ಸಂವಾದದಲ್ಲಿ ಸೂಚನೆ ನೀಡಿದರು.

‘ನಾರಾಯಣಪುರ ಜಲಾಶಯದಿಂದ ಬಿಡುಗಡೆಯಾದ ನೀರು ಸೊನ್ನ ಬ್ಯಾರೇಜು ತಲುಪಲು ಅಂದಾಜು 10ರಿಂದ 12 ದಿನಗಳು ಬೇಕಾಗುತ್ತದೆ. ಸೊನ್ನ ಬ್ಯಾರೇಜಿಗೆ ನೀರು ತಲುಪುವವರೆಗೆ ಸಂಬಂಧಪಟ್ಟ ತಹಶೀಲ್ದಾರರು ನಿರಂತರ ನಿಗಾ ಇಡಬೇಕು’ ಎಂದರು.

‘ಎಲ್ಲಿಯೂ ನೀರು ಪೋಲಾಗದಂತೆ ಮತ್ತು ಅಕ್ರಮವಾಗಿ ಪಂಪ್‌ಸೆಟ್, ಇತರೆ ಮಾರ್ಗದ ಮೂಲಕ ನೀರು ಪಡೆಯದಂತೆ ಎಚ್ಚರ ವಹಿಸಬೇಕು. ಕಟ್ಟುನಿಟ್ಟಿನ ವಿಜಿಲೆನ್ಸ್ ಇಲ್ಲಿ ಅಗತ್ಯವಾಗಿದೆ’ ಎಂದ ಅವರು, ಬರಗಾಲದ ಪರಿಣಾಮ ಎನ್‌ಡಿಆರ್‌ಎಫ್ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆದು ಮುಂದುವರೆಯಬಹುದು. ಅಧಿಕಾರಿಗಳು ಇದನ್ನರಿತು ಕೆಲಸ ಮಾಡಬೇಕು. ಇದಲ್ಲದೇ ಜೆಜೆಎಂ ಸೇರಿದಂತೆ ಇತರೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿದಲ್ಲಿ ಅದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲಾಗುವುದು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ತೀವ್ರ ಬರ ಎದುರಾಗಿದೆ. ಕುಡಿಯುವ ನೀರು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅನುದಾನದ ಕೊರತೆಯಿಲ್ಲ. ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕುಡಿಯುವ ನೀರಿನ ಬಿಲ್‌ ಅನ್ನು ಪಿಡಿಒ, ಆರ್‌ಐ, ವಿಎ ಅವರ ಸಹಿ ಮತ್ತು ತಾಲ್ಲೂಕು ಪಂಚಾಯಿತಿ ಇಒ ಅವರ ಒಪ್ಪಿಗೆ ಪಡೆದು ಮಂಜೂರು ಮಾಡಬೇಕು ಎಂದರು.

ಯಾದಗಿರಿ-ವಿಜಯಪುರ ಡಿ.ಸಿ. ಜೊತೆ ಚರ್ಚೆ: ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮತ್ತು ಯಾದಗಿರಿ ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹಾಗೂ ಎಸ್‌ಪಿ ಅವರೊಂದಿಗೆ ವಿಡಿಯೊ ಸಂವಾದ ನಡೆಸಿದ ತರನ್ನುಮ್‌ ಅವರು, ಯಾದಗಿರಿಯ ನಾರಾಯಣಪುರ ಜಲಾಶಯದಿಂದ ಬಿಡುಗಡೆಯಾಗುವ ನೀರು ಕೆಂಭಾವಿ-ಯಡ್ರಾಮಿ-ಹೊನ್ನಳ್ಳಿ-ಬಳಗಾನೂರ ಕೆರೆ ಮಾರ್ಗವಾಗಿ ಭೀಮಾ ನದಿಗೆ ಸೇರಿ ಅಲ್ಲಿಂದ ಅಫಜಲಪೂರ ತಾಲ್ಲೂಕಿನ ಸೊನ್ನ ಬ್ಯಾರೇಜಿಗೆ ತಲುಪಲಿದೆ. ಈ ಮಾರ್ಗದಲ್ಲಿ ವಿವಿಧ ತಂಡ ನಿಯೋಜಿಸಿ ನೀರು ಕೃಷಿಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ತಮ್ಮ ಸಹಕಾರ ಅಗತ್ಯವಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಭಂವರ್‌ ಸಿಂಗ್‌ ಮೀನಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಜೆಸ್ಕಾಂ ಎಂಡಿ ರವೀಂದ್ರ, ಉಪ ವಿಭಾಗಾಧಿಕಾರಿ ರೂಪಿಂದರ್ ಸಿಂಗ್ ಕೌರ್, ಡಿಯುಡಿಸಿ ಯೋಜನಾ ನಿರ್ದೇಶಕ ಮುನಾವರ ದೌಲಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ, ತಾಲ್ಲೂಕು ಪಂಚಾಯಿತಿ ಇಒ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT