ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟಕ್ಕಾಗಿ ನಿತ್ಯ 2 ಕಿ.ಮೀ ಓಡಾಟ ನಡೆಸುತ್ತಿರುವ ಲಾಡ್ಲಾಪುರದ 150 ಮಕ್ಕಳು!

ಹಾವು, ಚೇಳುಗಳ ಭಯದಲ್ಲಿ ದಿನಾಲೂ ಸಂಚರಿಸುವ 150 ಪುಟಾಣಿ ವಿದ್ಯಾರ್ಥಿಗಳು
ಸಿದ್ದರಾಜ ಎಸ್. ಮಲಕಂಡಿ
Published 30 ನವೆಂಬರ್ 2023, 5:48 IST
Last Updated 30 ನವೆಂಬರ್ 2023, 5:48 IST
ಅಕ್ಷರ ಗಾತ್ರ

ವಾಡಿ (ಕಲಬುರಗಿ ಜಿಲ್ಲೆ): ‘ಕಡ್ಡಾಯವಾಗಿ ಶಾಲಾ ಕಾರಿಡಾರ್‌ ಅಥವಾ ತರಗತಿ ಕೋಣೆಯಲ್ಲಿ ಮಕ್ಕಳನ್ನು ಕೂರಿಸಿ ಊಟ ಉಣಬಡಿಸಬೇಕು’ –ಇದು ಅಕ್ಷರ ದಾಸೋಹದ ನಿಯಮಗಳಲ್ಲೊಂದು. ಆದರೆ, ಇಲ್ಲೊಂದು ಶಾಲೆಯ ಮಕ್ಕಳು ಬಿಸಿಯೂಟಕ್ಕಾಗಿ ನಿತ್ಯವೂ ನೆತ್ತಿ ಸುಡುವ ಬಿಸಿಲಿನಲ್ಲಿ 2 ಕಿ.ಮೀ. ನಡೆಯುತ್ತಾರೆ!

ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ರಿಂದ 3ನೇ ತರಗತಿಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪುಟಾಣಿಗಳು ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕಾಗಿ ಎರಡು ತಿಂಗಳಿಂದ ದಿನಾಲೂ 2 ಕಿ.ಮೀ ನಡೆಯುತ್ತಿದ್ದಾರೆ. ಬಿಸಿಯೂಟ ತಯಾರಿಸುವ ತಾಣಕ್ಕೆ ಹೋಗಲು ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿ ದಾಟಿ, ಹಾವು– ಚೇಳುಗಳ ಆವಾಸ ಎನಿಸಿರುವ ದೊಡ್ಡ ಕೆರೆ ಏರಿಯನ್ನೂ ಹತ್ತಿಳಿಯಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಪಡುತ್ತಿದ್ದಾರೆ. 

600 ಮಕ್ಕಳ ಅಡುಗೆಗೆ ಇರೋದು ನಾಲ್ವರು!:

ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳು ಬೇರೆ–ಬೇರೆ ಕಡೆ ಇವೆ. ಆದರೆ, ಅಡುಗೆ ಕೊಠಡಿ ಇರುವುದು ಮಾತ್ರ ಒಂದೇ. ಇದೇ ಸಮಸ್ಯೆಗೆ ಮೂಲಕಾರಣ. ಈ ಮೊದಲು ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಗೆ ಊಟಕ್ಕೆಂದು ಬರುತ್ತಿದ್ದರು. ಜೂನ್ ತಿಂಗಳಿನಿಂದ ಅಡುಗೆ ಕೋಣೆಯನ್ನು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ 150ಕ್ಕೂ ಅಧಿಕ ಮಕ್ಕಳು ನಿತ್ಯ ಬಿಸಿಯೂಟಕ್ಕೆ ಕಿಲೊ ಮೀಟರ್‌ಗಟ್ಟಲೇ ದೂರ ಹೋಗಿ ಬರುತ್ತಿದ್ದಾರೆ.

‘1ರಿಂದ 10ನೇ ತರಗತಿವರೆಗೆ ಒಟ್ಟು 600ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. 10 ವರ್ಷಗಳಿಂದ ಕೇವಲ ನಾಲ್ವರು ಸಿಬ್ಬಂದಿ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಡುಗೆ ಸಿಬ್ಬಂದಿ ನೇಮಕ ಆಗಿಲ್ಲ. ಮೊದಲಿಗೆ ಅಡುಗೆ ಸಿಬ್ಬಂದಿ ಪ್ರೌಢಶಾಲೆಯಲ್ಲಿ ಬಿಸಿಯೂಟ ತಯಾರಿಸಿ, ಬಿಸಿ ಬಿಸಿ ಅಡುಗೆಯನ್ನು 1 ಕಿ.ಮೀ ದೂರದ ಪ್ರಾಥಮಿಕ ಶಾಲೆಗೆ ನಿತ್ಯ ಹೊತ್ತೊಯ್ದು ಬಡಿಸುತ್ತಿದ್ದರು. ಆದರೆ, ಸಿಬ್ಬಂದಿಯ ಕೊರತೆಯಿಂದ ಕಳೆದೆರಡು ತಿಂಗಳಿನಿಂದ ಮಕ್ಕಳನ್ನೇ ಊಟಕ್ಕಾಗಿ ಕರೆಸಿಕೊಳ್ಳಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಕೆರೆಯ ದಾರಿಯುದ್ದಕ್ಕೂ ಜಾಲಿಗಿಡಗಳು ಬೆಳೆದಿದ್ದು, ಹಾವು– ಚೇಳುಗಳು ಓಡಾಡುತ್ತವೆ. ಕೆರೆಯ ರಸ್ತೆಯುದ್ದಕ್ಕೂ ಶೌಚ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಮಲ–ಮೂತ್ರವನ್ನು ತುಳಿದುಕೊಂಡೇ ಹೋಗುವಂತಾಗಿದೆ. ಜೊತೆಗೆ ರೋಗದ ಭೀತಿಯೂ ಕಾಡುತ್ತಿದೆ. ರಾಜ್ಯ ಹೆದ್ದಾರಿ ದಾಟಿಕೊಂಡು ಹೋಗುವಾಗ ವೇಗವಾಗಿ ಸಂಚರಿಸುವ ವಾಹನಗಳಿಂದ ಮಕ್ಕಳಿಗೆ ಅಪಘಾತವಾದರೆ ಹೊಣೆ ಯಾರು’ ಎಂಬುದು ಸಾರ್ವಜನಿಕರ ಪ್ರಶ್ನೆ.

‘ಬಿಸಿಯೂಟ ತಯಾರಿಕೆಗೆ ಇಬ್ಬರು ಸಿಬ್ಬಂದಿಯನ್ನು ತಕ್ಷಣ ನೇಮಿಸುವಂತೆ ಅಲ್ಲಿನ ಪಿಡಿಒಗೆ ಹೇಳಿದ್ದೇನೆ. ಆದರೂ ವಿಳಂಬ ಮಾಡಿದ್ದಾರೆ. ಪ್ರತ್ಯೇಕ ಬಿಸಿಯೂಟ ಕೇಂದ್ರ ತೆರೆಯುವಂತೆ ಜಿಲ್ಲಾ ಪಂಚಾಯಿತಿಗೆ ಹಾಗೂ ಅಕ್ಷರದಾಸೋಹ ಇಒಗೆ ಪತ್ರ ಬರೆದಿದ್ದೇನೆ’ ಎಂದು ಚಿತ್ತಾಪುರದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಬಿಸಿಯೂಟಕ್ಕಾಗಿ ಕೆರೆ ಏರಿಯಲ್ಲಿ ತುಂಟಾಟ ಆಡುತ್ತ ಹೊರಟಿರುವ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಬಿಸಿಯೂಟಕ್ಕಾಗಿ ಕೆರೆ ಏರಿಯಲ್ಲಿ ತುಂಟಾಟ ಆಡುತ್ತ ಹೊರಟಿರುವ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಬಿಸಿಯೂಟಕ್ಕಾಗಿ ಕೆರೆ ಏರಿ ಮೇಲೆ ಹೊರಟಿರುವ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಬಿಸಿಯೂಟಕ್ಕಾಗಿ ಕೆರೆ ಏರಿ ಮೇಲೆ ಹೊರಟಿರುವ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಬಿಸಿಯೂಟಕ್ಕಾಗಿ ಕೆರೆ ದಾಟಿ ಹೊರಟ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಬಿಸಿಯೂಟಕ್ಕಾಗಿ ಕೆರೆ ದಾಟಿ ಹೊರಟ ಲಾಡ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಮೆಹಬೂಬ್‌ ಮುಲ್ಲಾ
ಮೆಹಬೂಬ್‌ ಮುಲ್ಲಾ
ಬನಪ್ಪ ಎಣ್ಣಿ
ಬನಪ್ಪ ಎಣ್ಣಿ
ನನ್ನ ಇಬ್ಬರು ಮಕ್ಕಳು 1ನೇ ಹಾಗೂ 2ನೇ ತರಗತಿಯಲ್ಲಿ ಓದುತ್ತಿದ್ದಾರೆ. ಊಟ ಸೇವಿಸಲು ಅವರನ್ನು ಮಧ್ಯಾಹ್ನದ ಬಿಸಿಲಿನಲ್ಲಿ 2 ಕಿ.ಮೀ ದೂರದ ಶಾಲೆಗೆ ಕಳುಹಿಸಲಾಗುತ್ತಿದೆ. ದಾರಿಯಲ್ಲಿ ಹಾವುಗಳು ಕಣ್ಣಿಗೆ ಬೀಳುತ್ತಿದ್ದು ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ
ಮೆಹಬೂಬ್ ಮುಲ್ಲಾ ಪೋಷಕ
ನನ್ನ ಮಗಳು 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬಿಸಿಯೂಟಕ್ಕಾಗಿ ನಿತ್ಯ ಅಷ್ಟು ದೂರ ಹೋಗಿ–ಬರುವಾಗ ರಸ್ತೆ ಮಧ್ಯೆ ಏನಾದರೂ ಅನಾಹುತವಾದರೆ ಯಾರು ಹೊಣೆ? ಕೂಡಲೇ ಪ್ರತ್ಯೇಕ ಅಡುಗೆ ಕೇಂದ್ರ ಸ್ಥಾಪಿಸಬೇಕು
ಬನ್ನಪ್ಪ ಎಣ್ಣಿ ಪೋಷಕ
ನಾನು ಮುಖ್ಯ ಶಿಕ್ಷಕಿಯ ಜವಾಬ್ದಾರಿಯನ್ನು ಇತ್ತೀಚೆಗೆ ತೆಗೆದುಕೊಂಡಿರುವೆ. ಅಡುಗೆ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ
. ಅಕ್ಕಮಹಾದೇವಿ ಹೀರೆಬಾನೂರು ಮುಖ್ಯಶಿಕ್ಷಕಿ ಲಾಡ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT