ಶನಿವಾರ, ಏಪ್ರಿಲ್ 1, 2023
28 °C

ಕಲಬುರಗಿ: ವೀರಗಾಸೆ, ಸೂವಾ, ಪೆರಿನಿ ನೃತ್ಯಗಳ ಸಮಾಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ದಕ್ಷಿಣ–ಪೂರ್ವ ವಲಯ ಅಂತರ್ ವಿಶ್ವವಿದ್ಯಾಲಯ ಯುವಜನೋತ್ಸವದ ಆತಿಥ್ಯ ವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಕಳೆದ ಐದು ದಿನಗಳ ಕಾಲ ಕರ್ನಾಟಕದ ‘ವೀರಗಾಸೆ’, ಛತ್ತೀಸಗಡದ ‘ಸೂವಾ’ ಹಾಗೂ ತೆಲಂಗಾಣದ ‘ಪೆರಿನಿ’(ಪೆರಿನಿ ಶಿವತಂದವಂ) ಸೇರಿ ಹಲವು ನೃತ್ಯಗಳ ಅಪ್ಪಟ್ಟ ದೇಶಿ ಸಂಸ್ಕೃತಿಯ ಸಮಾಗಮ ಅನಾವರಣಗೊಂಡಿತು.

ಬಹಳ ವರ್ಷಗಳ ಬಳಿಕ ಗುಲಬರ್ಗಾ ವಿ.ವಿ ದಕ್ಷಿಣ ಭಾರತ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿ ಗೆಲುವಿನ ನಗೆ ಬೀರಿತು. ಕ್ಯಾಂಪಸ್‌ನಲ್ಲಿನ ಲಭ್ಯ, ಸುತ್ತಲಿನ ಕಾಲೇಜುಗಳ, ಸಂಸ್ಥೆಗಳ ಸಹಕಾರ, ಸ್ಥಳೀಯ ಆಡಳಿತ ನೆರವಿನೊಂದಿಗೆ ನಡೆದ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರ ಸಂಪನ್ನಗೊಂಡಿತು.

ಜ.27ರಿಂದ ಆರಂಭವಾದ ಗುಲ್‌ಫೆಸ್ಟ್ ಹೆಸರಿನ ಯುವಜನೋತ್ಸವದಲ್ಲಿ ಮೂರು ರಾಜ್ಯಗಳ 1,029 ವಿದ್ಯಾರ್ಥಿಗಳು ತಮ್ಮ ಕಲೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದನ, ವಾಕಪಟು, ಪ್ರಹಸನ, ಮೈಮ್, ಸ್ಪಾಟ್ ಚಿತ್ರಕಲೆ, ಕೊಲಾಜ್, ಪೋಸ್ಟರ್ ರಚನೆ, ಚರ್ಚಾ ಸ್ಪರ್ಧೆ, ನಾಟಕ, ಮಿಮಿಕ್ರಿಗೆ ನೋಡುಗರು ಮೆಚ್ಚುಗೆಯ ಚಪ್ಪಾಳೆ ತಟ್ಟಿದರು.

ಮೂರು ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ತವರು ನೆಲದ ಸಂಸ್ಕೃತಿ, ಆಚಾರ–ವಿಚಾರಗಳು, ಕಲೆಗಳ ಮಾಹಿತಿಯನ್ನು ಪರಸ್ಪರ ಹಂಚಿಕೊಂಡರು. ವಿದ್ಯಾರ್ಥಿಗಳು, ಅತ್ಯುತ್ತಮ ಪ್ರದರ್ಶನ ನೀಡಿದಾಗ ತಮ್ಮ ಪ್ರತಿಸ್ಪರ್ಧಿಗಳನ್ನು ಅಭಿನಂದಿಸಿ, ಶುಭಹಾರೈಸಿ ಸ್ಪರ್ಧಾ ಮನೋಭಾವ ಪ್ರದರ್ಶಿಸಿದರು.

ಕ್ಯಾಂಪಸ್‌ನ ಬಯಲು ರಂಗಮಂದಿರದಲ್ಲಿ ಪ್ರತಿ ದಿನ ಸಂಜೆ ಜರುಗಿದ ನೃತ್ಯ ಕಾರ್ಯಕ್ರಮಕ್ಕೆ ಕಲಬುರಗಿಯ ಜನರು ಅಭೂತಪೂರ್ವ ಬೆಂಬಲ ನೀಡಿದರು. ವಿದ್ಯಾರ್ಥಿಗಳು ಸ್ಥಳೀಯರ ಆತಿಥ್ಯ, ಆಯೋಜಕರ ಅಚ್ಚುಕಟ್ಟಾದ ವ್ಯವಸ್ಥೆ, ಇಲ್ಲಿನ ಊಟಕ್ಕೆ ಮನಸೋತು ಮನಸಾರೆ ನೆನೆದರು. ಸಮಾರೋಪ ಸಮಾರಂಭದಲ್ಲಿ ಪ್ರತಿಸ್ಪರ್ಧಿಗಳು ಹಂಚಿಕೊಂಡ ಅಭಿಪ್ರಾಯದಲ್ಲಿ ಸ್ನೇಹ, ಪ್ರೀತಿ, ಸಹಕಾರ ಭಾವನೆಗಳು ವ್ಯಕ್ತವಾದವು.

ಅತಿಥಿ ಭಾಷಣ ಮಾಡಿದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ವಿ.ಬೆಟ್ಟಕೋಟೆ, ‘ಕಲ್ಯಾಣ ಕರ್ನಾಟಕ ಪ್ರದೇಶವು ನೆಲಮೂಲ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಪ್ರದರ್ಶಕ ಕಲೆಗಳಿಂದ ತುಂಬಿದ ಸಿರಿವಂತಿಕೆಯ ತಾಣ’ ಎಂದು ಪ್ರಶಂಸಿಸಿದರು.

‘ಸಾಕಷ್ಟು ಅನುದಾನ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಕಲಬುರಗಿಯಲ್ಲಿ ಪ್ರದರ್ಶನ ಕಲೆಗಳಿಗಾಗಿ ಪ್ರತ್ಯೇಕ ಶಿಕ್ಷಣ ಕೇಂದ್ರ ಸ್ಥಾಪಿಸಲು ಮುಂದೆ ಬರಬೇಕು. ಕಲೆಗಳ ಪೋಷಣೆ ಹಾಗೂ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುವ ದೃಷ್ಟಿಯಿಂದ ಪ್ರತ್ಯೇಕ ಕೇಂದ್ರ ಸ್ಥಾಪನೆಯ ಅಗತ್ಯವಿದೆ. ಇದಕ್ಕೆ ಬೇಕಾದ ಸಹಕಾರವನ್ನು ನಮ್ಮ ವಿಶ್ವವಿದ್ಯಾಲಯ ಕೊಡಲಿದೆ’ ಎಂದು ಆಶ್ವಾಸನೆ ನೀಡಿದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಪ್ರದರ್ಶನ ಕಲೆಗಳು ವೈದ್ಯಕೀಯ, ಎಂಜಿನಿಯರಿಂಗ್‌ ಕೋರ್ಸ್‌ಗಳಲ್ಲಿ ಪಠ್ಯದ ಸ್ಥಾನ

ಪಡೆದಿವೆ. ಮುಂದಿನ 10 ವರ್ಷಗಳಲ್ಲಿ ಪ್ರದರ್ಶನ ಕಲೆಗಳ ಎಲ್ಲ ತರಬೇತುದಾರರಿಗೆ ಉದ್ಯೋಗ ಸಿಗಲಿದೆ’ ಎಂದರು.

ಯುವಜನೋತ್ಸವದ ವಿಜೇತರಿಗೆ ಬಹುಮಾನ, ತಂಡದ ವ್ಯವಸ್ಥಾಪಕರಿಗೆ ಸ್ಮರಣಿಕೆ ನೀಡಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಕೆ.ಲಿಂಗಪ್ಪ ಯುವಜನೋತ್ಸವದ ವರದಿ ವಾಚಿಸಿದರು.

ಕುಲಪತಿ ಪ್ರೊ.ದಯಾನಂದ ಅಗಸರ, ಭಾರತೀಯ ವಿಶ್ವವಿದ್ಯಾಲಯ ಸಂಘದ ವೀಕ್ಷಕ ಬಾಲ ಲಖೇಂದ್ರ, ಕುಲಸಚಿವ ಡಾ. ಬಿ.ಶರಣಪ್ಪ, ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ, ವಿದ್ಯಾವಿಷಯಕ ಪರಿಷತ್ ಸದಸ್ಯ ರಮೇಶ ಬಿ. ಧುತ್ತರಗಿ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿಧಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ. ಲಕ್ಷ್ಮಣ ರಾಜನಾಳಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು