ಕಲಬುರಗಿ: ಜಿಲ್ಲೆಯಲ್ಲಿ ಮಾರ್ಚ್ 31ರಿಂದ 168 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಒಟ್ಟು 46,029 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಕೋವಿಡ್ ಕಾರಣ ಕಳೆದ ಎರಡು ವರ್ಷಗಳಿಂದ 8 ಮತ್ತು 9ನೇ ತರಗತಿಯಲ್ಲಿ ತೇರ್ಗಡೆಯಾದವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷ ತಡವಾಗಿ ತರಗತಿಗಳು ಪುನರಾರಂಭ ಆಗಿದ್ದರಿಂದ ಶೇ 75ರಷ್ಟು ಮಾತ್ರ ಪಠ್ಯ ಬೋಧಿಸಿ, ಪರೀಕ್ಷೆ ನಡೆಸಲಾಯಿತು. ಈ ವರ್ಷ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆದಿದ್ದು, ಈ ಹಿಂದಿನಂತೆ ಪರೀಕ್ಷೆ ನಡೆಯಲಿದೆ.
ಒಟ್ಟು 46,029 ವಿದ್ಯಾರ್ಥಿಗಳಲ್ಲಿ 24,022 ಬಾಲಕರು ಮತ್ತು 22,007 ಬಾಲಕಿಯರು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಖಾಸಗಿ ಅಭ್ಯರ್ಥಿಗಳು, ಮರು ಪರೀಕ್ಷೆ ಬರೆಯುವರು ಸಹ ಸೇರಿದ್ದಾರೆ. 97 ಕ್ಲಸ್ಟರ್ ಕೇಂದ್ರಗಳಿದ್ದು, 4 ರಿಂದ 5 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲಿನ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಒಟ್ಟು 168 ಕೇಂದ್ರಗಳ ಪೈಕಿ 9 ಕೇಂದ್ರಗಳನ್ನು ಖಾಸಗಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
‘ಜಿಲ್ಲೆಯ ಫಲಿತಾಂಶ ಸುಧಾರಣೆಗೆ 15 ಅಂಶಗಳ ಕಾರ್ಯಕ್ರಮಗಳನ್ನು ಹಾಕಿಕೊಂಡು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಶಿಕ್ಷಕರಿಗೆ ತರಬೇತಿ ನೀಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸಲಾಯಿತು. 3 ಅಣಕು ಪರೀಕ್ಷೆಗಳನ್ನು ನಡೆಸಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ಸರಣಿ ಸಭೆ ನಡೆಸಿ, ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮುಖ್ಯ ಶಿಕ್ಷಕರ ಕೋಣೆ ಹಾಗೂ ಪರೀಕ್ಷಾ ಕೇಂದ್ರದ ಕಾರಿಡಾರ್ ಕೇಂದ್ರೀಕರಿಸಿ ಪ್ರತಿ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕುಡಿಯುವ ನೀರು, ಶೌಚಾಲಯದಂತಹ ಅಗತ್ಯ ಸೌಕರ್ಯವೂ ಕಲ್ಪಿಸಲಾಗಿದೆ. ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಬರೆಯಬಹುದು’ ಎಂದು ಅವರು ತಿಳಿಸಿದರು.
‘ಪ್ರತಿ ವರ್ಷದ ಫಲಿತಾಂಶದಲ್ಲಿ ಬಾಲಕಿಯರದ್ದು ಮೇಲುಗೈ ಇರುತ್ತದೆ. ಹೀಗಾಗಿ, ಬಾಲಕರ ಫಲಿತಾಂಶದಲ್ಲಿ ಸುಧಾರಣೆ ತರಲು ಬಾಗಿಲು ಮುಚ್ಚದ ಶಾಲೆ ಅಭಿಯಾನ ನಡೆಸಲಾಯಿತು. ಶಿಕ್ಷಕರು ತರಗತಿ ಅವಧಿ ಮುಗಿದ ನಂತರವೂ ಶಾಲೆಯಲ್ಲಿ ಉಳಿದುಕೊಂಡು ಕಲಿಕೆಯಲ್ಲಿ ಹಿಂದಿರುವ ಬಾಲಕರ ಬಗ್ಗೆ ಕಾಳಜಿ ವಹಿಸಿ ಬೋಧಿಸಿದ್ದಾರೆ. ಸುಮಾರು 20 ಶಾಲೆಗಳಲ್ಲಿ ಈ ಅಭಿಯಾನ ನಡೆಸಲಾಗಿದೆ’ ಎಂದರು.
‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಅಣುಕ ಪರೀಕ್ಷೆ ನಡೆಸಲು ₹15 ಲಕ್ಷ ಹಾಗೂ ಪರೀಕ್ಷೆ ಸಂಬಂಧಿತ ಕೈಪಿಡಿಗೆ ₹77 ಲಕ್ಷ ನೀಡಿದ್ದು ಸಾಕಷ್ಟು ಅನುಕೂಲವಾಗಿದೆ. ಮಂಡಳಿಯ ಕಾರ್ಯದರ್ಶಿಗಳು ಶಿಕ್ಷಣಕ್ಕೆ ಒತ್ತುಕೊಟ್ಟು ಅನುದಾನ ನೀಡಿದ್ದಾರೆ’ ಎಂದು ಹೇಳಿದರು.
8 ವಿಚಕ್ಷಣ ಜಾಗೃತ ದಳ
ಸುಗಮ ಪರೀಕ್ಷೆಗಾಗಿ ಪ್ರತಿ ತಾಲ್ಲೂಕಿಗೆ ಇಬ್ಬರಂತೆ 16 ಅಧಿಕಾರಿಗಳು 8 ವಿಚಕ್ಷಣ ಜಾಗೃತ ದಳ, ಉಪನಿರ್ದೇಶಕರ ಕಚೇರಿಯಿಂದ 2 ತಂಡಗಳು, 8 ಸಂಚಾರ ಜಾಗೃತ ದಳ, 168 ಸ್ಥಾನಿಕ ಜಾಗೃತ ದಳ, 168 ಮೊಬೈಲ್ ಸ್ವಾಧೀನ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರಕ್ಕೆ ತಲುಪಿಸಲು ಹಾಗೂ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಡಿಡಿಪಿಐ ಕಚೇರಿಗೆ ತಲುಪಿಸಲು 66 ಮಾರ್ಗ ಅಧಿಕಾರಿಗಳ ತಂಡ ನೇಮಿಸಲಾಗಿದೆ.
‘ನಕಲು ತಡೆಗೆ ಮುಂಜಾಗ್ರತಾ ಕ್ರಮ’
‘ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಕಲು ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ‘ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಆಸನದ ವ್ಯವಸ್ಥೆ ಮಾಡಬೇಕು. ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿದೆ. ಮಕ್ಕಳಿಗೆ ಪರೀಕ್ಷೆ ಬರೆಯಲು ಅಡೆತಡೆಯಾಗದಂತೆ ಮುನ್ನಚ್ಚರಿಕೆಯಾಗಿ ಫ್ಯಾನ್ ಮತ್ತು ಆಸನ ವ್ಯವಸ್ಥೆ ಮಾಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
‘ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ತರುವಂತಿಲ್ಲ. ಸುತ್ತಲಿನ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಶಿಷ್ಟಾಚಾರ ತಹಸೀಲ್ದಾರ್ ಸೈಯದ್ ನಿಸಾರ ಅಹ್ಮದ್, ಕಮಲಾಪುರ ಡಯಟ್ ಪ್ರಾಚಾರ್ಯ ಬಸವರಾಜ ಮಾಯಾಚಾರ ಸೇರಿ ಕೇಂದ್ರದ ಮುಖ್ಯ ಅಧೀಕ್ಷಕರು, ಕ್ಷೇತ್ರ ಶಿಕ್ಷಾಣಾಧಿಕಾರಿಗಳು ಇದ್ದರು.
ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ, ಪರೀಕ್ಷಾ ಕೇಂದ್ರಗಳ ಅಂಕಿ–ಅಂಶ
ತಾಲ್ಲೂಕು; ಕೇಂದ್ರಗಳು; ಬಾಲಕರು; ಬಾಲಕಿಯರು; ಒಟ್ಟು
ಅಫಜಲಪುರ; 17; 2,269; 2,018; 4,287
ಆಳಂದ; 20; 3,002; 2,785; 5,787
ಚಿಂಚೋಳಿ; 13; 1,816; 1,793; 3,609
ಚಿತ್ತಾಪುರ; 22; 3,230; 3,114; 6,344
ಕಲಬುರಗಿ ಉತ್ತರ ವಲಯ; 37; 5,301; 4,963; 10,264
ಕಲಬುರಗಿ ದಕ್ಷಿಣ ವಲಯ; 32; 3,851; 3,314; 7,165
ಜೇವರ್ಗಿ; 15; 2,735; 2,405; 5,140
ಸೇಡಂ; 12; 1,818; 1,615; 3,433
ಒಟ್ಟು; 168; 24,022; 22,007; 46,029
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.