ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜಿಲ್ಲೆಯಲ್ಲಿ ಮತ್ತಿಬ್ಬರ ಸಾವು; 51 ಮಂದಿಗೆ ಕೋವಿಡ್–19

Last Updated 8 ಜುಲೈ 2020, 5:32 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ ಸೋಂಕಿನಿಂದ ಜಿಲ್ಲೆಯ ಮತ್ತಿಬ್ಬರು ಮೃತಪಟ್ಟಿದ್ದು, ಮಂಗಳವಾರ ದೃಢಪಟ್ಟಿದೆ. ಇದರೊಂದಿಗೆ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 29ಕ್ಕೆ ಏರಿದೆ. ಮಂಗಳವಾರ ಮತ್ತೆ 51 ಮಂದಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.

ನಗರದ ಸ್ಪೇಷನ್ ಬಜಾರ್ ಪ್ರದೇಶದ 71 ವರ್ಷದ ವೃದ್ಧ ಕೊರೊನಾದಿಂದ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಕೆಮ್ಮು– ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜುಲೈ 5ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಕೊನೆಯುಸಿರೆಳೆದರು. ಅವರ ಗಂಟಲು ಮಾದರಿ ವರದಿ ಮಂಗಳವಾರ ಹೊರಬಿದ್ದಿದೆ.

ಇನ್ನೊಂದೆಡೆ, ಯಾದಗಿರಿ ಜಿಲ್ಲೆಯ ಗುರುಮಠಕಲ್‌ ನಿವಾಸಿ, 40 ವರ್ಷದ ಪುರುಷ ಕೂಡ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಅವರು ಕಿಡ್ನಿ ಸಮಸ್ಯೆಯಿಂದ ನರಳುತ್ತಿದ್ದರು. ಇದರ ತಪಾಸಣೆಗಾಗಿ ಜುಲೈ 3ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 5ರಂದು ಮೃತಪಟ್ಟರು. ಇಬ್ಬರ ವರದಿಯೂ ಮಂಗಳವಾರ ಬಂದಿದೆ.‌

ಹಸುಳೆಗೂ ಕೋವಿಡ್‌:

ಮಂಗಳವಾರ ಒಂದು ವರ್ಷದ ಎಂಟು ತಿಂಗಳ ಹಸುಳೆ ಸೇರಿ ಒಟ್ಟು 51 ಮಂದಿಗೆ ಪಾಸಿಟಿವ್‌ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,750ಕ್ಕೆ ಏರಿಕೆಯಾಗಿದೆ. ಮಂಗಳವಾರದ ವರದಿಯಲ್ಲಿ ನಗರದಲ್ಲೇ 39 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಫಜಲಪುರ ತಾಲ್ಲೂಕಿನ ಹವನೂರು ತಾಂಡಾದ ಮಗು ಉಸಿರಾಟ ಮತ್ತು ಜ್ವರ ಸಮಸ್ಯೆಯಿಂದ ಬಳಲುತ್ತಿದೆ. ಸೋಂಕಿತರ ಪೈಕಿ 29 ಮಹಿಳೆಯರು ಸಹ ಸೇರಿದ್ದಾರೆ.

ಅಫಜಲಪುರ, ಆಳಂದ, ಚಿತ್ತಾಪುರ, ಶಹಾಬಾದ್ ತಾಲ್ಲೂಕಿನಲ್ಲಿ ತಲಾ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ವಿಜಯಪುರ ಜಿಲ್ಲೆಯ ಆಲಮೇಲದ ಒಬ್ಬ ವೃದ್ಧನಿಗೂ ಕೋವಿಡ್ ದೃಢಪಟ್ಟಿದೆ. ಉಸಿರಾಟ ಮತ್ತು ಜ್ವರ ಹಿನ್ನೆಲೆಯ 29 ಜನರು, ಸೋಂಕಿತರ ನೇರ ಸಂಪರ್ಕಕ್ಕೆ ಬಂದ 19, ಕಂಟೇನ್ಮೆಂಟ್ ಝೋನ್ ಸಂಪರ್ಕದಿಂದ ಇಬ್ಬರು, ಬೆಂಗಳೂರು ಮತ್ತು ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT