ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 18 ಮಕ್ಕಳು ಸೇರಿ 67 ಮಂದಿಗೆ ಕೋವಿಡ್‌

ತಾಂಡಾಗಳಿಂದ ಹೊರಬಂದ ಕೋವಿಡ್‌ ಸೋಂಕಿತರು, ನಗರಕ್ಕೂ ವ್ಯಾಪಿಸಿದ ‘ಮಹಾ’ಕಂಟಕ
Last Updated 14 ಜೂನ್ 2020, 10:41 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 18 ಮಕ್ಕಳೂ ಸೇರಿ ಒಟ್ಟು 67 ಮಂದಿಗೆ ಕೋವಿಡ್‌–19 ತಗುಲಿದೆ. ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆ 883ಕ್ಕೆ ಏರಿದೆ. ಇವರಲ್ಲಿ ಬಹಳಷ್ಟು ಮಂದಿ ಮಹಾರಾಷ್ಟ್ರದಿಂದ ಮರಳಿದವರೇ ಆಗಿದ್ದಾರೆ.

ಸೇಡಂ ತಾಲ್ಲೂಕಿನ ನಾಲ್ಕು ವರ್ಷದ ಮಗುವಿಗೆ ಕೋವಿಡ್ ಅಂಟಿಕೊಂಡಿದೆ. ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಆತಂಕ ಮೂಡಿಸಿದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ನಗರದ ಖಾನ್ ಕಾಲೊನಿಯ 30 ವರ್ಷದ ಪುರುಷನಿಗೂ ಸೋಂಕು ಅಂಟಿಕೊಂಡಿದೆ.

ನಗರಕ್ಕೂ ಅಂಟಿದ ‘ಮಹಾ’ಕಂಟಕ: ಮಹಾರಾಷ್ಟ್ರದಿಂದ ಮರಳಿದ ವಲಸೆ ಕಾರ್ಮಿಕರಂದ ತಾಂಡಾಗಳು ಮಾತ್ರವಲ್ಲದೇ ನಗರದಲ್ಲೂ ಸೋಂಕು ವ್ಯಾಪಿಸುತ್ತಿದೆ. ಇಲ್ಲಿನ ಸ್ವಸ್ತಿಕ್‌ ನರದಲ್ಲಿ 30 ವರ್ಷದ ಮಹಿಳೆ, 71 ವರ್ಷದ ವೃದ್ಧನಿಗೆ ಕೊರೊನಾ ಅಂಟಿಕೊಂಡಿದೆ. ಇನ್ನೊಂದೆಡೆ, ಜಿಲಾನಾಬಾದ್‍ನಲ್ಲಿ ಎರಡು ವರ್ಷ ಮತ್ತು ಎಂಟು ವರ್ಷದ ಹೆಣ್ಣು ಮಕ್ಕಳಿಗೆ, ಬ್ರಹ್ಮಪುರ ಬಡಾವಣೆಯಲ್ಲಿ 27 ವರ್ಷದ ಯುವಕ, ರಾಮ ಮಂದಿರ ಬಳಿಯ 33 ವರ್ಷದ ಮಹಿಳೆಗೆ, ತಾಲ್ಲೂಕಿನ ಕವಲಗಾ ಬಿ. ಗ್ರಾಮದ ಮೂವರಿಗೆ ಸೋಂಕು ದೃಢಪಟ್ಟಿದೆ.

ಉಳಿದಂತೆ, ಚಿತ್ತಾಪುರ ತಾಲ್ಲೂಕಿನಲ್ಲಿ 25 ಜನ, ಆಳಂದ ತಾಲ್ಲೂಕಿನಲ್ಲಿ 23 ಜನರು, ಅಫಜಲಪುರ ತಾಲ್ಲೂಕಿನಲ್ಲಿ ಆರು ಹಾಗೂ ಕಾಳಗಿ, ಯಾಡ್ರಮಿ ಹಾಗೂ ಶಹಾಬಾದ್ ತಾಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಕಾಳಗಿ ಮತ್ತು ಯಡ್ರಾಮಿಯಲ್ಲಿ ಎರಡು ವರ್ಷದ ಗಂಡು ಮಕ್ಕಳು, ಚಿತ್ತಾಪುರ ತಾಲ್ಲೂಕಿನ ದೇವಾಪುರ ತಾಂಡಾದಲ್ಲಿ ಒಂದು ವರ್ಷದ ಹೆಣ್ಣುಮಗು, ಎರಡು ವರ್ಷದ ಇಬ್ಬರು ಗಂಡು ಮಕ್ಕಳು, ಹತ್ತು ವರ್ಷದ ಬಾಲಕಿ, ಅಫಜಲಪುರ ತಾಲ್ಲೂಕಿನ ಗಬ್ಬೂರ ಬಿ. ಗ್ರಾಮದಲ್ಲಿ ಮೂರು ವರ್ಷದ ಗಂಡು ಮಗುವಿಗೆ ಕೊರೊನಾ ಪತ್ತೆಯಾಗಿದೆ.

ದೇವಾಪೂರ: 20 ಜನರಿಗೆ ಕೋವಿಡ್‌

ವಾಡಿ: ಹಲಕರ್ಟಿ ಸಮೀಪದ ದೇವಾಪೂರ ಗ್ರಾಮದಲ್ಲಿ ಮತ್ತೆ 20 ಜನರಿಗೆ ಶನಿವಾರ ಕೋವಿಡ್ ದೃಢಪಟ್ಟಿದೆ. 2 ವರ್ಷ ಬಾಲಕ ಸೇರಿದಂತೆ 4 ಮಕ್ಕಳು ಸಹಿತ 20 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಇದಕ್ಕೂ ಮೊದಲು 21 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಒಂದೇ ಗ್ರಾಮದಲ್ಲಿ ಒಟ್ಟು41 ಜನರಿಗೆ ಸೋಂಕು ಕಾಣಿಸಿಕೊಂಡಂತಾಗಿದೆ. ಕ್ವಾರಂಟೈನ್ ಮುಗಿಸಿ ಮನೆಗೆ ಕಳುಹಿಸಿದ ನಂತರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿದೆ.

ಸೋಂಕಿತರು 20 ದಿನಗಳ ಹಿಂದೆ ಗ್ರಾಮಕ್ಕೆ ಮರಳಿದ್ದು, ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಎಲ್ಲೆಡೆ ತಿರುಗಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಂಕು ಹರಡದಂತೆ ದೇವಪೂರ ಗ್ರಾಮ ಸೀಲ್ ಡೌನ್ ಮಾಡಿದ್ದರೂ ಜನರ ಓಡಾಟಕ್ಕೆ ಕಡಿವಾಣ ಬಿದ್ದಿರಲಿಲ್ಲ. ಕಿರಾಣಿ, ತರಕಾರಿ ಖರೀದಿ ಹಾಗೂ ಕ್ಷೌರಿಕ ಅಂಗಡಿಗಳಿಗೆ ತೆರಳಿದ್ದು ಈಗ ಚರ್ಚೆಗೆ ಬರುತ್ತಿದೆ. ಸೋಂಕು ದೃಢಪಡುತ್ತಲೇ ಸಮೀಪದ ಹಲಕರ್ಟಿ, ಕಮರವಾಡಿ, ಸೂಲಹಳ್ಳಿ, ಆಲೂರು, ಹಣ್ಣಿಕೇರಾ, ಲಾಡ್ಲಾಪುರ ಗ್ರಾಮಗಳಲ್ಲಿ ಭಾರೀ ಆತಂಕ ಉಂಟಾಗಿದೆ.

ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಕ್ಕೆ ತೆರಳಿದ ಆರೋಗ್ಯ ಸಿಬ್ಬಂದಿಗೆ ಸ್ಥಳೀಯರ ಸಹಕಾರ ಸಿಗದ ಕಾರಣ ಪರದಾಡಬೇಕಾಯಿತು. ಅಂಬುಲೆನ್ಸ್ ವಾಹನ ಸಮೇತ ನಿಂತಿದ್ದ ಆರೋಗ್ಯ ಸಿಬ್ಬಂದಿಗೆ ಸುಮಾರು 6 ಗಂಟೆ ಸತಾಯಿಸಿದರು. ಕೊನೆಗೆ ಪೊಲೀಸರ ನೆರವಿನೊಂದಿಗೆ ಸೋಂಕಿತರನ್ನು ಸಾಗಿಸಲಾಯಿತು.

ರಾಮನಾಯಕ ತಾಂಡಾ: ಕರದಳ್ಳಿ ಗ್ರಾ.ಪಂ ವ್ಯಾಪ್ತಿಯ ರಾಮನಾಯಕ ತಾಂಡಾದಲ್ಲಿ ಇಬ್ಬರಿಗೆ ಕೋವೀಡ್ ದೃಢಪಟ್ಟಿದೆ. 8 ವರ್ಷದ ಬಾಲಕಿ ಹಾಗೂ 51 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ತಾಂಡಾಕ್ಕೆ ಮರಳಿದ 20 ದಿನಗಳ ಬಳಿಕ ಬಂದ ವರದಿಯಲ್ಲಿ ಕೋವಿಡ್ ದೃಢಪಟ್ಟಿದೆ.

ಐವರಿಗೆ ಸೋಂಕು

ಅಫಜಲಪುರ: ತಾಲ್ಲೂಕಿನಲ್ಲಿ ಮತ್ತೆ ಶನಿವಾರ 5 ಜನರಿಗೆ ಕೋವಿಡ್ 19 ಧೃಡಪಟ್ಟಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ರತ್ನಾಕರ ತೋರಣ ತಿಳಿಸಿದರು.

ಗೊಬ್ಬುರ(ಬಿ)ಯಲ್ಲಿ 2 ವರ್ಷದ ಮಗುವಿಗೆ, ಪುರುಷನಿಗೆ ಮತ್ತು ಬೋಗನಳ್ಳಿ ಹಾಗೂ ಮಶಾಳದಲ್ಲಿ ತಲಾ ಒಬ್ಬರಿಗೆ ಹಾಗೂ ಹೊಸೂರನಲ್ಲಿ ಮಹಿಳೆಗೆ ಕೋವಿಡ್ ಧೃಡಪಟ್ಟಿದೆ. ಇದರೊಂದಿಗೆ ತಾಲ್ಲೂಕಿನಲ್ಲಿ 20 ಜನರಿಗೆ ಕೋವಿಡ್ 19 ಧೃಡಪಟ್ಟಂತಾಗಿದೆ.

ಶನಿವಾರ ಕೋವಿಡ್‌ ದೃಢಪಟ್ಟವರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಕ್ವಾರಂಟೈನ್‌ ಅವಧಿ ಮುಗಿದ ನಂತರ ಅವರಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ ಎಂದು ತಿಳಿಸಿದರು.

23 ಜನ ಗುಣಮುಖ

ಕೋವಿಡ್‌ ಸೋಂಕಿಗೆ ಒಳಗಾಗಿದ್ದ 23 ಜನರು ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತೆಲಂಗಾಣದಿಂದ ಬಂದ ಕಮಲಾಪುರ ತಾಲ್ಲೂಕಿನ 30 ವರ್ಷ ವ್ಯಕ್ತಿ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ್ದ ಚಿತ್ತಾಪುರ ತಾಲ್ಲೂಕಿನ 22 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 883 ಜನ ಸೋಂಕಿತರಲ್ಲಿ ಇದುವರೆಗೆ 377 ಜನರು ಡಿಸ್ಚಾರ್ಜ್ ಆಗಿದ್ದಾರೆ. ಹತ್ತು ಸೋಂಕಿತರು ಮೃತಪಟ್ಟಿದ್ದು, ಉಳಿದಂತೆ 496 ಸೋಂಕಿತರಿಗೆ ಐಸೋಲೇಷನ್ ವಾರ್ಡ್‌ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT