ಬುಧವಾರ, ಆಗಸ್ಟ್ 4, 2021
20 °C
ಕ್ವಾರಂಟೈನ್‌ ಕೇಂದ್ರದಿಂದ ಮನೆಗೆ ಮರಳಿದವರಲ್ಲಿ ನಿಲ್ಲದ ವೈರಾಣು, 600 ದಾಟಿದ ಸೋಂಕಿತರ ಸಂಖ್ಯೆ

24 ಮಕ್ಕಳೂ ಸೇರಿ 69 ಹೊಸ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: 24 ಮಕ್ಕಳೂ ಸೇರಿದಂತೆ ಒಟ್ಟು 69 ಮಂದಿಗೆ ಶನಿವಾರ ಕೋವಿಡ್‌–19 ದೃಢಪಟ್ಟಿದೆ. ಇವರೆಲ್ಲರೂ ಮಹರಾಷ್ಟ್ರದ ಮುಂಬೈನಿಂದ ಮರಳಿದವರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 621ಕ್ಕೆ ಏರಿದೆ. ರಾಜ್ಯದಲ್ಲಿ ಉಡುಪಿ ನಂತರದ ಎರಡನೇ ಸ್ಥಾನವದಲ್ಲೇ ಜಿಲ್ಲೆ ಮುಂದುವರಿದಿದೆ.

‌ಶನಿವಾರ ಒಂದೇ ದಿನ 16 ಬಾಲಕರು ಹಾಗೂ 8 ಬಾಲಕಿಯರಿಗೆ ವೈರಾಣು ಅಂಟಿಕೊಂಡಿದ್ದು, ಪತ್ತೆಯಾಗಿದೆ. ಇವರೆಲ್ಲೂ 14 ವರ್ಷದೊಳಗಿನವರೇ ಆಗಿದ್ದಾರೆ. 28 ಮಹಿಳೆಯರು, 41 ಪುರುಷರಿದ್ದಾರೆ. ಕೂಲಿ ಅರಸಿ ಮುಂಬೈಗೆ ತೆರಳಿದ್ದ ತಮ್ಮ ಪಾಲಕರೊಂದಿಗೆ ಇವರೂ ಇದ್ದರು. ಕ್ವಾರಂಟೈನ್‌ ಕೇಂದ್ರದಲ್ಲಿ ಒಬ್ಬರಿಗೊಬ್ಬರು ಬೆರೆತು ಆಟವಾಡಿದ ಕಾರಣ, ವೈರಾಣು ವ್ಯಾ‍ಪಕವಾಗಿ ಹರಡಿಕೊಂಡಿದೆ ಎನ್ನುವುದು ಆರೋಗ್ಯ ಇಲಾಖೆಯ ಮೂಲಗಳ ಮಾಹಿತಿ.

ಅದರಲ್ಲೂ ಒಂದು ಮತ್ತು ಎರಡು ವರ್ಷದ ಹಸುಳೆಗಳು ಸೇರಿ ಇಂದಿನ ಪ್ರಕರಣಗಳಲ್ಲಿ ಎಂಟು ವರ್ಷದೊಳಗಿನ ಎಂಟು ಮಕ್ಕಳೂ ಇದ್ದಾರೆ. ಒಂದು ವರ್ಷದ ಹೆಣ್ಣು, ಎರಡು ವರ್ಷದ ಗಂಡು, ಮೂರು ವರ್ಷದ ಗಂಡು, ನಾಲ್ಕು ವರ್ಷದ ಎರಡು ಗಂಡು ಮತ್ತು ಒಂದು ಹೆಣ್ಣು, ಐದು ವರ್ಷದ ಎರಡು ಗಂಡು ಮತ್ತು ಒಂದು ಹೆಣ್ಣು, ಆರು ವರ್ಷದ ಒಂದು ಗಂಡು ಮತ್ತು ಒಂದು ಹೆಣ್ಣು, ಏಳು ವರ್ಷದ ಒಂದು ಗಂಡು ಮತ್ತು ಎರಡು ಹೆಣ್ಣು, ಎಂಟು ವರ್ಷದ ಒಂದು ಗಂಡು ಮಗುವಿಗೆ ಸೋಂಕು ತಗುಲಿದೆ.‌

ಸೋಂಕಿತರಲ್ಲಿ ಚಿತ್ತಾಪುರ ಹಾಗೂ ಕಾಳಗಿ ತಾಲ್ಲೂಕಿನವರೇ ಹೆಚ್ಚಾಗಿದ್ದಾರೆ. ಇವರೆಲ್ಲ ಬೇರೆಬೇರೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದವರು. ಮೇ 24ರಂದು ಮನೆಗೆ ಮರಳಿದ್ದರು. ಎಲ್ಲ ಗಂಟಲು ಮಾದರಿಯ ವರದಿ 20 ದಿನಗಳ ನಂತರ ಬಂದಿದೆ. ಹೀಗಾಗಿ, ಸೋಂಕಿತರನ್ನು ಮತ್ತೆ ಹುಡುಕಿ ಕ್ವಾರಂಟೈನ್‌ ಕೇಂದ್ರಗಳಿಗೆ ಸೇರಿಸುವ ಕೆಲಸ ಮುಂದುವರಿದಿದೆ.

ಚಿಂಚೋಳಿ ತಾಲ್ಲೂಕಿನ 2, ಚಿತ್ತಾಪುರ ತಾಲ್ಲೂಕಿನ 36, ಯಡ್ರಾಮಿ ತಾಲ್ಲೂಕಿನ 1, ಕಾಳಗಿ ತಾಲ್ಲೂಕಿನ 15, ಆಳಂದ ತಾಲ್ಲೂಕಿನ 14 ಹಾಗೂ ಕಲಬುರ್ಗಿ ತಾಲ್ಲೂಕಿನ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ.

ಇದೂವರೆಗಿನ ಒಟ್ಟು 621 ಪ್ರಕರಣಗಳಲ್ಲಿ 448 ಸಕ್ರಿಯ ರೋಗಿಗಳಿದ್ದು, ಕ್ವಾರಂಟೈನ್‌ ಕೇಂದ್ರಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಮನೆ ಸೀಲ್‌ಡೌನ್

ಶಹಾಬಾದ್: ನಗರದ ರಾಮಾ ಮೊಹಲ್ಲಾದ ಶರಣ ನಗರ ಭಾಗದಲ್ಲಿ 65 ವರ್ಷದ ಮಹಿಳೆಗೆ ಸೋಂಕು ತಗುಲಿದ ಶಂಕೆಯ ಮೇರೆಗೆ, ಮುಂಜಾಗ್ರತಾ ಕ್ರಮವಾಗಿ  ತಹಶೀಹಲ್ದಾರ್ ಸುರೇಶ ವರ್ಮಾ ಮನೆಯನ್ನು ಸೀಲ್‍ಡೌನ್ ಮಾಡಿದ್ದಾರೆ.

ಮಹಿಳೆ ಲೀವರ್ ಸೊಂಕಿನಿಂದ ಬಳಲುತ್ತಿದ್ದು, ಕಲಬುರ್ಗಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಅವರಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಮಹಿಳೆ ಮನೆ ಮಾತ್ರ ಸೀಲ್‍ಡೌನ್ ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿ, ಪೊಲೀಸರನ್ನು ನಿಯೋಜಿಸಲಾಗಿದೆ. ವರದಿ ಬಂದ ನಂತರ ಸಂಪೂರ್ಣ ಪ್ರದೇಶವನ್ನು ಸೀಲ್‌ಡೌನ್ ಮಾಡುವ ಕುರಿತು ವಿಚಾರ ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಜೇವರ್ಗಿ: ಹೂ ಹಾರಿಸಿ ಬೀಳ್ಕೊಟ್ಟ ಸಿಬ್ಬಂದಿ

ಜೇವರ್ಗಿ: ಕೋವಿಡ್– 19ನಿಂದ ಗುಣಮುಖರಾದ ತಾಲ್ಲೂಕಿನ ವಿವಿಧ ಗ್ರಾಮಗಳ 13 ಜನರನ್ನು ಶನಿವಾರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.

ತಹಶೀಲ್ದಾರ್ ಸಿದರಾಯ ಭೋಸಗಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ ಮತ್ತು ಇತರ ಅಧಿಕಾರಿಗಳು ಕೋವಿಡ್ ಗೆದ್ದವರಿಗೆ ಶಾಲು ಹೊದಿಸಿ, ಅವರ ಮೇಲೆ ಹೂಗಳನ್ನು ಎರಚುವ ಮೂಲಕ ಬೀಳ್ಕೊಟ್ಟರು.

ಇವರೆಲ್ಲ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಾಗಿದ್ದಾರೆ. ಜೇವರ್ಗಿ ತಾಲ್ಲೂಕಿನ ರೇವನೂರ ಗ್ರಾಮದ 8, ಕೂಟನೂರ ಗ್ರಾಮದ 2, ಗುಡೂರ (ಎಸ್.ಎ) ಗ್ರಾಮದ 2 ಹಾಗೂ ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮದ ಒಬ್ಬ ವ್ಯಕ್ತಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ಸಿಪಿಐ ರಮೇಶ ರೊಟ್ಟಿ, ಜೇವರ್ಗಿ ಠಾಣೆಯ ಸಬ್ ಇನ್ಸಪೆಕ್ಟರ್ ಮಂಜುನಾಥ ಹೋಗಾರ, ಅಪರಾಧ ವಿಭಾಗದ ಸಬ್ ಇನ್ಸಪೆಕ್ಟರ್ ಸಂಗಮೇಶ ಅಂಗಡಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಶಹನಾಜ್, ಡಾ.ರಾಘವೇಂದ್ರ ಕುಲಕರ್ಣಿ, ಡಾ.ಶ್ರೀದೇವಿ, ಡಾ.ಸಂಗೀತಾ, ಡಾ.ವೀರೇಶ, ಡಾ.ಶಿವಲಿಂಗ ಸೇರಿದಂತೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಇಲಾಖೆ ಸಿಬ್ಬಂದಿ ಇದ್ದರು.

ಸೋಂಕಿನಿಂದ 37 ಜನ ಗುಣಮುಖ

ಕಲಬುರ್ಗಿ: ಜಿಲ್ಲೆಯ 37 ಸೋಂಕಿತರು ಶನಿವಾರ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇವರೊಂದಿಗೆ ಗುಣಮುಖರಾದವರ ಸಂಖ್ಯೆ 166ಕ್ಕೆ ಏರಿದೆ.

ಕಲಬುರ್ಗಿ ನಗರದ 2, ಚಿತ್ತಾಪುರ ತಾಲ್ಲೂಕಿನ 4, ಕಾಳಗಿ ತಾಲ್ಲೂಕಿನ 7, ಕಮಲಾಪುರ ತಾಲ್ಲೂಕಿನ 4, ಜೇವರ್ಗಿ ತಾಲ್ಲೂಕಿನ 11, ಯಡ್ರಾಮಿ ತಾಲ್ಲೂಕಿನ 1, ಆಳಂದ ತಾಲ್ಲೂಕಿನ 5 ಹಾಗೂ ಸೇಡಂ ತಾಲ್ಲೂಕಿನ 3 ಜನ ಕೊರೊನಾದಿಂದ ಮುಕ್ತರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು