ಶುಕ್ರವಾರ, ಜುಲೈ 1, 2022
21 °C
ವಿಎಸ್‌ಎಸ್‌ ಕಾರ್ಯಾಲಯ ಉದ್ಘಾಟನೆ; ಆರ್‌ಎಸ್‌ಎಸ್‌ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಕರೆ

'ಹೋರಾಟದಲ್ಲಿ ಕಾಂಪ್ರಮೈಸ್‌ ಮಾಡಿಕೊಳ್ಳಬೇಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಹೋರಾಟ ನಿರತ ವಿದ್ಯಾರ್ಥಿಗಳು ಯಾವತ್ತೂ ‘ಕಾಂಪ್ರಮೈಸ್‌’ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಅನ್ಯಾಯದ ಎದುರು ನಡೆಯುವ ಹೋರಾಟd ಅಂತ್ಯ ನ್ಯಾಯ ದೊರಕಿಸಿಕೊಂಡೇ ಆಗಬೇಕು’ ಎಂದು ‌ಆರ್‌ಎಸ್‌ಎಸ್‌ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಕರೆ ನೀಡಿದರು.‌

ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್‌ನಿಂದ ಗುರುವಾರ ಆಯೋಜಿಸಿದ್ದ ನಗರದ ಕೋಟನೂರ ಬಡಾವಣೆಯಲ್ಲಿ ನಿರ್ಮಿಸಿದ ನೂತನ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಯುವ ಹೋರಾಟಗಾರರ ಮನೋಭಾವ ಸಡಿಲಗೊಂಡಂತೆ ಕಾಣುತ್ತಿದೆ. ಎಬಿವಿಪಿ ಹುಟ್ಟಿಕೊಂಡಿದ್ದೇ ವಿದ್ಯಾರ್ಥಿಗಳಲ್ಲಿ, ಯುವ ಹೃದಯಗಳಲ್ಲಿ ಹೋರಾಟದ ಪ್ರವೃತ್ತಿ ಬೆಳೆಸಲು. ಹೋರಾಟದ ಮೂಲಕವೇ ಪರಿಷತ್‌ ಇಂದು ಇಷ್ಟು ಸಾಫಲ್ಯ ಕಂಡಿದೆ. ಎಡಪಂಥೀಯ ಸಂಘಟನೆಗಳನ್ನು ಹಿಂದಿಕ್ಕಿ ರಾಷ್ಟ್ರಪ್ರೇಮ ಜಾಗೃತಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಈಗ ಆಯಾ ಜಿಲ್ಲೆ ಹಾಗೂ ಪ್ರಾದೇಶಿಕ ವ್ಯಾಪ್ತಿಯಲ್ಲಿ ಪರಿಷತ್‌ನ ಕಚೇರಿಗಳು ಆರಂಭವಾಗುತ್ತಿರುವುದು ಸಂಘಟನಾ ಶಕ್ತಿಯ ಪ್ರತೀಕ’ ಎಂದರು.

‘ದೇಶದಲ್ಲಿ ದೊಡ್ಡ ಪರಿವರ್ತನೆ ತರುವುದು ಆರ್‌ಎಸ್‌ಎಸ್‌ನ ಹೋರಾಟಗಳಿಂದ ಸಾಧ್ಯ. ದೇಶವನ್ನು ಪರಮವೈಭವಕ್ಕೆ ಕೊಂಡೊಯ್ಯುವ ಗುರಿ ನಮ್ಮ ಮುಂದಿದೆ’ ಎಂದು ಅವರು ಹೇಳಿದರು.

ಕಟ್ಟಡ ಲೋಕಾರ್ಪಣೆ ಮಾಡಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ವಿದ್ಯಾರ್ಥಿ ಮನಸ್ಸು ಯಾವಾಗಲೂ ಜೋಷ್‌ನಲ್ಲಿರಬೇಕು. ಹಾಗೆಂದು ತಾಳ್ಮೆ ಕಳೆದುಕೊಳ್ಳಬೇಡಿ, ಧ್ಯೇಯದಿಂದ ದೂರ ಸರಿಯಬೇಡಿ. ವಿಪರೀತ ಪರಿಸ್ಥಿತಿಯಲ್ಲೂ ಪರಿಣಾಮಕಾರಿ ಸಂಘಟನೆ ಮಾಡುವುದೇ ನಮ್ಮ ಕಾರ್ಯ– ಕೌಶಲ ಒರೆಗೆ ಹಚ್ಚುತ್ತದೆ’ ಎಂದರು.

‘ಎನಗಿಂತ ಕಿರಿಯರಿಲ್ಲ ಎಂಬ ಬಸವಣ್ಣನ ಮಾತು ಯಾವಾಗಲೂ ನೆನಪಿಟ್ಟುಕೊಳ್ಳಿ. ಕ್ಷಣಿಕ ಸುಖಗಳಿಗೆ ಮಾರುಹೋಗಬೇಡಿ’ ಎಂದು ಕಿವಿಮಾತು ಹೇಳಿದರು.

ಗದಗನ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಷ್ಣುಪಂತ್‌ ಚಟ್ಪಲ್ಲಿ, ವಿದ್ಯಾಭಾರತಿ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ, ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ವೀರೇಶ ಬಾಳೇಕಾಯಿ, ರಾಜ್ಯ ಘಟಕದ ಕಾರ್ಯದರ್ಶಿ ಪ್ರತೀಕ್‌ ಮಾಳಿ, ಕಲಬುರ್ಗಿ ಪ್ರಾಂತ ಉಪಾಧ್ಯಕ್ಷ ಡಾ.ಅಲ್ಲಮಪ್ರಭು, ಆರ್‌ಎಸ್‌ಎಸ್‌ ಸಹ ಸಂಚಾಲಕ ಬಾಲಕೃಷ್ಣ, ಕೆಆರ್‌ಎಂಎಸ್‌ಎಸ್‌ ಅಧ್ಯಕ್ಷ ಡಾ.ರಘು ಅಕ್ಮಂಚಿ, ಜಿಲ್ಲಾ ಸಂಚಾಲಕ ಭಾಗ್ಯಶ್ರೀ ವೇದಿಕೆ ಮೇಲಿದ್ದರು.

ಪಶುಸಂಗೋಪನಾ ಸಚಿವ ಪ್ರಭು ಚೌಹಾಣ, ಸಂಸದರಾದ ಡಾ.ಉಮೇಶ ಜಾಧವ, ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ ಶಶೀಲ್‌ ನಮೋಶಿ ಹಾಗೂ ವಿಎಸ್‌ಎಸ್‌ ಟ್ರಸ್ಟ್‌ ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು