ಸೋಮವಾರ, ಸೆಪ್ಟೆಂಬರ್ 16, 2019
27 °C
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ

ಜಲಮೂಲಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ

Published:
Updated:
Prajavani

ಕಲಬುರ್ಗಿ: ‘ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ಪುರಾತನ ಕಾಲದ ಬಾವಿ, ಕಲ್ಯಾಣಿ, ಗೋಕಟ್ಟೆ, ಪುಷ್ಕರಣಿಗಳನ್ನು ಸಂರಕ್ಷಿಸುವ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸುವ ಕುರಿತು ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಶುಕ್ರವಾರ ಜಿಲ್ಲೆಯ ಬಾವಿ, ಕಲ್ಯಾಣಿಗಳ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಸ್ತಾವವನ್ನು ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿ ಅಭಿವೃದ್ಧಿಗೆ ಅನುದಾನ ಪಡೆಯಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನವನ್ನು ಐತಿಹಾಸಿಕ ಪರಂಪರೆ ತಾಣಗಳ ಅಭಿವೃದ್ಧಿಗಾಗಿಯೇ ಪ್ರಾಯೋಜನೆ ಮಾಡಿಕೊಂಡಿರುವ ಹೈ.ಕ. ಮಂಡಳಿ ಅನುದಾನದಲ್ಲಿ ಒದಗಿಸಲಾಗುವುದು’ ಎಂದರು.

‘ಬಾವಿ, ಕಲ್ಯಾಣಿಗಳನ್ನು ನರೇಗಾ ಯೋಜನೆಯಡಿ ಹೂಳೆತ್ತಿಸಿ ಅವುಗಳ ಒಳ ಝರಿಗಳ ಮೂಲಗಳನ್ನು ಬತ್ತದಂತೆ ಸ್ವಚ್ಛಗೊಳಿಸಬೇಕು. ಇದರಿಂದ ಬೇಸಿಗೆ ಸಂದರ್ಭದಲ್ಲಿ ಈ ಜಲಮೂಲಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದು. ಅಲ್ಲದೇ, ಐತಿಹಾಸಿಕ ತಾಣಗಳನ್ನು ನಮ್ಮ ಮುಂದಿನ ಪೀಳಿಗಗೆ ಪರಿಯಿಸಿದಂತಾಗುತ್ತದೆ’ ಎಂದೂ ಅವರು ತಿಳಿಸಿದರು.

ವಸ್ತುಸಂಗ್ರಹಾಲಯಕ್ಕೆ ಹೆಚ್ಚುವರಿ ನಿವೇಶನ ನೀಡಲು ಸೂಚನೆ: 

ಬುದ್ಧ ವಿಹಾರ ಬಳಿ ಹೈ.ಕ ಭಾಗದ ಕಲೆ, ಸಾಹಿತ್ಯ, ವಾಸ್ತುಶಿಲ್ಪವನ್ನು ಪರಿಚಯಿಸುವ ಮತ್ತು ಶಿಲಾ ಶಾಸನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೈ.ಕ.ಮಂಡಳಿಯ ₹ 6 ಕೋಟಿ ಮೊತ್ತದ ನೆರವಿನೊಂದಿಗೆ ಒಟ್ಟಾರೆ ₹ 18 ಕೋಟಿ ವೆಚ್ಚದಲ್ಲಿ ಹೆರಿಟೇಜ್ ಮ್ಯೂಸಿಯಂ ನಿರ್ಮಿಸಲು ಉದ್ದೇಶಿಸಿದೆ. ಇದಕ್ಕಾಗಿ ಈಗಾಗಲೆ ಐದು ಎಕರೆ ಪ್ರದೇಶವನ್ನು ಸಹ ಪ್ರವಾಸೋದ್ಯಮ ಇಲಾಖೆಗೆ ಮಂಜೂರು ಮಾಡಿ ಹಸ್ತಾಂತರಿಸಲಾಗಿದೆ. ಇನ್ನು ಇದಕ್ಕೆ ಅಗತ್ಯವಿರುವ ಇನ್ನುಳಿದ 30 ಗುಂಟೆ ಪ್ರದೇಶವನ್ನು ನಗರಾಭಿವೃದ್ಧಿ ಪ್ರಾಧಿಕಾರದದಿಂದ ಸಿ.ಎ.ಸೈಟ್ ಮಂಜೂರು ಮಾಡಲು ಕ್ರಮ ಕೈಗೊಳ್ಳಿ’ ಎಂದು ಅವರು ‘ಕುಡಾ’ ಆಯುಕ್ತ ರಾಚಪ್ಪ ಅವರಿಗೆ ನಿರ್ದೇಶನ ನೀಡಿದರು.

ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ ಮಿತುನ್ ರೆಡ್ಡಿ ಮಾತನಾಡಿ, ‘ಕಲಬುರ್ಗಿಯ ಹಂಪಿ’ ಎಂದೇ ಕರೆಯಲ್ಪಡುವ ಕಾಳಗಿಯಲ್ಲಿ 2 ಜೈನ್, 5 ಹಿಂದೂ ದೇವಸ್ಥಾನಗಳಿವೆ. ಅವು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ. ಐಹೊಳೆ ಮಾದರಿಯಂತೆ ಚಿತ್ತಾಪುರ ತಾಲ್ಲೂಕಿನ ದಿಗ್ಗಾವಿಯಲ್ಲಿ ಕಲ್ಯಾಣಿ ಚಾಲುಕ್ಯರು ಸ್ಥಾಪಿಸಿರುವ 60 ಲಿಂಗದ ಗುಡಿಗಳು ನಶಿಸುವ ಹಂತದಲ್ಲಿವೆ. ಇದರೊಂದಿಗೆ ಯಡ್ರಾಮಿಯ ರಾಮಲಿಂಗೇಶ್ವರ ತೀರ್ಥ, ಚಿಂಚನಸೂರು, ರುಮ್ಮನಗುಡ, ಮೋಘಾದಲ್ಲಿರುವ ದೇವಸ್ಥಾನ ಹಾಗೂ ಕಲ್ಯಾಣಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದಲ್ಲಿ ಇವು ಪ್ರವಾಸಿ ತಾಣಗಳಾಗಿ ರೂಪಗೊಳ್ಳುತ್ತವೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಬಾವಿ, ಕಲ್ಯಾಣಿ, ಪುಷ್ಕರಣಿ, ಗೋಕಟ್ಟೆ ಒಟ್ಟು 134 ಗಳಿದ್ದು, ಇವುಗಳ ಜೀರ್ಣೋದ್ಧಾರಕ್ಕಾಗಿ ಬೇಕಾದ ವೆಚ್ಚವನ್ನು ಅಂದಾಜಿಸಲಾಗಿದೆ’ ಎಂದು ಕೆ.ಎಸ್.ಸಿ.ಎಸ್.ಟಿ ಅಧಿಕಾರಿ ಭೀಮಸೇನ್ ಮಾಹಿತಿ ನೀಡಿದರು.

ಕಲಬುರ್ಗಿ ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ ಸಂದೀಪ್ ಠಾಕೂರ ಮಾತನಾಡಿದರು. ಜಿಲ್ಲಾಧಿಕಾರಿ ಬಿ. ಶರತ್, ಮಹಾನಗರ ಪಾಲಿಕೆಯ ಪ್ರಭಾರಿ ಆಯುಕ್ತ ರಾಹುಲ ಪಾಂಡ್ವೆ, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಡಾ.ಗೋಪಾಲಕೃಷ್ಣ ರಾಘವೇಂದ್ರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಫೀಕ್ ಲಾಡಜಿ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Post Comments (+)