ಸೋಮವಾರ, ಮಾರ್ಚ್ 8, 2021
31 °C

ಕಲಬುರ್ಗಿ ಬಳಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ತಾಲ್ಲೂಕಿನ ನದಿ ಸಿಣ್ಣೂರ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಒಬ್ಬನ ಕೈ ತುಂಡಾಗಿ ರಸ್ತೆ ಮೇಲೆ ಬಿದ್ದಿದೆ.

ಜೇವರ್ಗಿ ತಾಲ್ಲೂಕಿನ ಗೋನಾಳ ಗ್ರಾಮದ ಕಲ್ಲಪ್ಪ ಅಪ್ಪಾಜಿ (21) ಹಾಗೂ ಸಿದ್ದಪ್ಪ ಕುರುಬರ (21) ಸಾವಿಗೀಡಾದವರು. ಬೈಕ್‌ನಲ್ಲಿದ್ದ ಶಂಕರಲಿಂಗ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರೂ ಒಂದೇ ಬೈಕ್‌ನಲ್ಲಿ ಗೋನಾಳದಿಂದ ಕಲಬುರ್ಗಿಯತ್ತ ಬರುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಟಿಪ್ಪರ್‌ ಬೈಕ್‌ಗೆ ಡಿಕ್ಕಿ ಹೊಡೆಯಿತು. ಇದರಿಂದಾಗಿ ಟಿಪ್ಪರ್‌ನ ಚಕ್ರದಡಿ ಸಿಲುಕಿಕೊಂಡ ಕಲ್ಲಪ್ಪ ಹಾಗೂ ಸಿದ್ದಪ್ಪ ಅವರ ದೇಹಗಳು ನಜ್ಜುಗುಜ್ಜಾದವು. ಇದೇ ಸಂದರ್ಭದಲ್ಲಿ ಕೈ ಕತ್ತರಿಸಿ ರಸ್ತೆ ಮಧ್ಯದಲ್ಲಿ ಬಿತ್ತು.

ಸ್ಥಳಕ್ಕೆ ಕಲಬುರ್ಗಿ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡ ಘಟನೆ ನೆನಪಿಸಿದ ಅ‍ಪಘಾತ: 2015ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಸಾರಿಗೆ ಸಂಸ್ಥೆ ಬಸ್‌ ಹಾಗೂ ಕಾರಿನ ಮಧ್ಯೆ ನಡೆದ ರಸ್ತೆ ಅಪಘಾತವನ್ನೇ ಈ ಘಟನೆ ಹೋಲುತ್ತದೆ. ಎದುರಿನಿಂದ ಬಸ್‌ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಕಾರು ಎರಡು ಭಾಗಗಳಾಗಿ ತುಂಡಾಗಿ, ಅದರಲ್ಲಿದ್ದ ಐವರು ವಿದ್ಯಾರ್ಥಿಗಳ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ದೀಪಕ್ ಚಿಂಚೋರೆ ಪುತ್ರ ಅನೀಶ್‌ ಹಾಗೂ ಬಳ್ಳಾರಿ ಹೆಚ್ಚುವರಿ ಎಸ್ಪಿಯಾಗಿದ್ದ ವಿಜಯ ಡಂಬಳ ಅವರ ಪುತ್ರ ಶಿವದೀಪ್ ಡಂಬಳ ಸೇರಿ ಐವರ ದೇಹದ ಬಿಡಿಭಾಗಗಳು 50 ಮೀಟರ್‌ ವಿಸ್ತೀರ್ಣದಲ್ಲಿ ಬಿದ್ದಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.