ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿ; ರೈತರು, ಕೃಷಿಗೆ ಮಾರಕ: ಶಾಸಕ ಪ್ರಿಯಾಂಕ್ ಖರ್ಗೆ ಆರೋಪ

Last Updated 8 ಅಕ್ಟೋಬರ್ 2020, 3:25 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರ ಸರ್ಕಾರವು ಕೃಷಿಕರ ಹಿತಕ್ಕೆ ಒತ್ತು ನೀಡುವುದಕ್ಕಿಂತ ಬಂಡವಾಳಶಾಹಿಗಳಿಗೆ ಹೆಚ್ಚು ಮಣೆ ಹಾಕುತ್ತಿದೆ. ಎಪಿಎಂಸಿಯ ಅಸ್ತಿತ್ವವನ್ನೇ ನಾಶಪಡಿಸಿ ಇಡೀ ಕೃಷಿ ಕ್ಷೇತ್ರವನ್ನೇ ಖಾಸಗಿಯವರ ಪಾಲು ಮಾಡಲು ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

‘ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿ ವ್ಯವಸ್ಥೆಗೆ ಧಕ್ಕೆ ಆಗುವುದರ ಜತೆಗೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಸೂಕ್ತ ದರಕ್ಕೆ ಮಾರಲು ಸಾಧ್ಯವಾಗುವುದಿಲ್ಲ. ಎಪಿಎಂಸಿಯಲ್ಲಿ ದುಡಿಯುವ ಸಾವಿರಾರು ಏಜೆಂಟರು, ಹಮಾಲಿಗಳು ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರು ಬೀದಿಪಾಲಾಗುವರು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆತಂಕ
ವ್ಯಕ್ತಪಡಿಸಿದರು.

‘ಎಪಿಎಂಸಿ ಇರುವ ಕಾರಣದಿಂದ ರೈತರಿಗೆ ವೈಜ್ಞಾನಿಕ ಅಥವಾ ಕನಿಷ್ಠ ಬೆಂಬಲ ಬೆಲೆಗೆ ಬೆಳೆ ಮಾರಲು ಸಾಧ್ಯವಾಗುತ್ತದೆ. ಅಂಥ ವ್ಯವಸ್ಥೆಯೇ ಇರದಿದ್ದರೆ, ಬೆಳೆಗೆ ಸೂಕ್ತ ಬೆಲೆ ಯಾರು ನಿಗದಿಪಡಿಸುವರು? ಖಾಸಗಿಯವರು ಮನಸೋಇಚ್ಛೆ ದರ ಹೇಳಿದರೆ, ಶ್ರಮಕ್ಕೆ ತಕ್ಕಂತೆ ರೈತರಿಗೆ ಆದಾಯ ಬರುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಸಂವಿಧಾನದ ರಾಜ್ಯ ಪಟ್ಟಿಯಲ್ಲಿ ಕೃಷಿ ಕ್ಷೇತ್ರವು ಅಡಕವಾಗಿದ್ದು, ಇದರ ಬಗ್ಗೆ ಕೇಂದ್ರ ಸರ್ಕಾರವು ನೇರವಾಗಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ, ಕೇಂದ್ರ ಸರ್ಕಾರವು ಸಚಿವರು ಮತ್ತು ಅಧಿಕಾರಿಗಳ ಮೂಲಕ ಕೃಷಿ ಕುರಿತ ಕಾಯ್ದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ’ ಎಂದು ಅವರು ಟೀಕಿಸಿದರು.

‘ಮುಕ್ತ ಮಾರುಕಟ್ಟೆ ವ್ಯವಸ್ಥೆಯು ಬಂಡವಾಳಶಾಹಿ ಗಳನ್ನು ಬಲಿಷ್ಠಗೊಳಿಸಿ, ರೈತರನ್ನು ದುರ್ಬಲರನ್ನಾಗಿ ಮಾಡುತ್ತದೆ. ವೆಚ್ಚ ಮಾಡಿದಷ್ಟೂ ಆದಾಯ ಪಡೆಯಲಾಗದೇ ಮತ್ತು ಸರ್ಕಾರದ ನೆರವೂ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತ ಪರ ಎನ್ನುವ ಸರ್ಕಾರವೇ ಅವರನ್ನು ಇಂತಹ ದುಸ್ಥಿತಿಗೆ ತಳ್ಳುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಬಹುರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿ ಗುತ್ತಿಗೆ ಕೃಷಿ ಪದ್ಧತಿ ಜಾರಿಗೊಳಿಸಲು ಹೊರಟಿರುವ ಸರ್ಕಾರವು ರೈತರನ್ನು ಇನ್ನಷ್ಟು ಅತಂತ್ರ ಸ್ಥಿತಿಗೆ ತಳ್ಳಲಿದೆ. ಕೃಷಿಕರು ಇನ್ನೊಬ್ಬರ ಕೈಗೊಂಬೆಗಳಾಗಿ ದುಡಿಯಬೇಕಾಗುತ್ತದೆ ಹೊರತು ತಮ್ಮ ಇಚ್ಛೆಯನುಸಾರ ಬೆಳೆ ಬೆಳೆಯಲು ಮತ್ತು ಆದಾಯ ಗಳಿಸಲು ಸಾಧ್ಯವಾಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಅಜಯ್ ಸಿಂಗ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ತೋರಿಕೆಗೆ ಮಾತ್ರ ರೈತಪರ ಕಾಳಜಿ ವ್ಯಕ್ತಪಡಿಸುತ್ತವೆ ಹೊರತು ವಾಸ್ತವದಲ್ಲಿ ಅಂಬಾನಿ, ಅದಾನಿಯವರಂತಹ ಓಲೈಕೆ ಮಾಡುತ್ತಿವೆ. ಸರ್ವಾಧಿಕಾರ ಧೋರಣೆಯಡಿ ಸರ್ಕಾರ ನಡೆಸಲಾಗುತ್ತಿದೆ ಹೊರತು ಜನಪರ ಕಾರ್ಯಗಳು ನಡೆಯುತ್ತಿಲ್ಲ’ ಎಂದು ಅವರು ಹೇಳಿದರು.

ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ‘ರೈತರಿಗೆ ಅನುಕೂಲಕರ ಆಗುವ ರೀತಿಯಲ್ಲಿ ಕೃಷಿ ಮತ್ತು ಎಪಿಎಂಸಿ ಕ್ಷೇತ್ರದಲ್ಲಿ ಸರ್ಕಾರಗಳು ಸುಧಾರಣೆ ತರಬೇಕೆ ಹೊರತು ರೈತ ವಿರೋಧಿ ನೀತಿ ಅನುಸರಿಸಬಾರದು’ ಎಂದರು.

ಶಾಸಕರಾದ ಖನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಪಕ್ಷದ ವಿಧಾನ ಪರಿಷತ್‌ ಅಭ್ಯರ್ಥಿ ಶರಣಪ್ಪ ಮಟ್ಟೂರು, ಮುಖಂಡರಾದಕೆ.ಬಿ.ಶಾಣಪ್ಪ, ತಿಪ್ಪಣ್ಣಪ್ಪ‌ ಕಮಕನೂರು, ಶರಣಪ್ಪ ಮಾನೇಗಾರ, ಸುಭಾಷ ರಾಠೋಡ್, ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT