ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯದೇವ ಆಸ್ಪತ್ರೆಗೆ ಹೆಚ್ಚುವರಿ ಅನುದಾನ: ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್

ಆಸ್ಪತ್ರೆ ನಿರ್ವಹಣೆಗೆ ಸಮಿತಿ ರಚನೆಯ ಚಿಂತನ; ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್
Published : 28 ಆಗಸ್ಟ್ 2024, 16:01 IST
Last Updated : 28 ಆಗಸ್ಟ್ 2024, 16:01 IST
ಫಾಲೋ ಮಾಡಿ
Comments

ಕಲಬುರಗಿ: ‘ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಕಟ್ಟಡದ ಅಂತಿಮ ಕಾಮಗಾರಿ ಹಾಗೂ ವೈದ್ಯಕೀಯ ಉಪಕರಣಕ್ಕಾಗಿ ಹೆಚ್ಚುವರಿ ಅನುದಾನ ಒದಗಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಮನವಿ ಮಾಡಿದ್ದು, ಬೇಡಿಕೆಯ ಮೊತ್ತವನ್ನು ಆಧರಿಸಿ ಅನುದಾನ ನೀಡಲಾಗುವುದು’ ಎಂದು ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದರು.

ಜಯದೇವ ಆಸ್ಪತ್ರೆಯ ಕಟ್ಟಡವನ್ನು ಬುಧವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಯದೇವ ಆಸ್ಪತ್ರೆ ಕೇವಲ ಕಲಬುರಗಿಗೆ ಸೀಮಿತವಾಗಿಲ್ಲ. ಈ ಭಾಗದ ಸುತ್ತಲಿನ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ. ಈಗಾಗಲೇ ₹222.65 ಕೋಟಿ ಅನುದಾನ ಕೊಟ್ಟಿದ್ದು, ಹೆಚ್ಚುವರಿ ಬೇಡಿಕೆಯು ₹40 ಕೋಟಿ ಅಥವಾ ಅದಕ್ಕೂ ಹೆಚ್ಚಾಗಬಹುದು. ಮ್ಯಾಕ್ರೊ ಅನುದಾನದಲ್ಲಿ ಕೊಡುತ್ತೇವೆ’ ಎಂದರು.

‘ಈ ಆಸ್ಪತ್ರೆ ನಿರ್ಮಾಣದ ಬಳಿಕ ಈ ಭಾಗದ ಜನರು ಹೃದ್ರೋಗ, ಹೃದಯ ಸಂಬಂಧಿತ ಸರ್ಜರಿಯಂತಹ ಚಿಕಿತ್ಸೆಗಾಗಿ ದೂರದ ಬೆಂಗಳೂರು, ಹೈದರಾಬಾದ್‌ಗೆ ಹೋಗುವುದು ತಪ್ಪಲಿದೆ. ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ಸಿಗಲಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಉದ್ಘಾಟನೆಯ ಚಿಂತನೆ ಇದ್ದು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು’ ಎಂದು ಹೇಳಿದರು.

‘ರಾಜ್ಯದಲ್ಲಿ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಸ್ಪತ್ರೆ ಉದ್ಘಾಟನೆ ಮಾಡುತ್ತಾರೆ. ಸಿಎಂ ರಾಜೀನಾಮೆ ಕೊಡಬೇಕು ಎನ್ನುವ ವಿರೋಧ ಪಕ್ಷದವರ ಮಾತಿನಲ್ಲಿ ಹುರುಳಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ ನಡೆಯನ್ನು ಖಂಡಿಸಿ ಆಗಸ್ಟ್ 31ರಂದು ರಾಜಭವನ ಚಲೋ ಹಮ್ಮಿಕೊಂಡಿದ್ದು, ಎಲ್ಲ ಶಾಸಕರು, ಸಚಿವರು ಪಾಲ್ಗೊಳ್ಳುವರು’ ಎಂದರು.

ಆಸ್ಪತ್ರೆಯ ನಿರ್ವಹಣೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಆಸ್ಪತ್ರೆಯ ಕಟ್ಟಡ ನಿರ್ಮಾಣ ಮತ್ತು ಉಪಕರಣಗಳಿಗೆ ಮಂಡಳಿಯೇ ಅನುದಾನ ನೀಡಿದೆ. ಹೀಗಾಗಿ, ಆಸ್ಪತ್ರೆಯ ನಿರ್ವಹಣೆಯೂ ನಮಗೆ ಮುಖ್ಯವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ, ನಿರ್ವಹಣೆಯ ಸಂಬಂಧ ಸಮಿತಿಯೊಂದನ್ನು ರಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ’ ಎಂದರು.

‘ಕೆಕೆಆರ್‌ಡಿಬಿ ಹಾರ್ಟ್‌ ಲೈನ್‌ ಆಂಬುಲೆನ್ಸ್‌ ಸೇವೆ ಆರಂಭಿಸಿ, 7 ಬೇಸಿಕ್ ಲೈಫ್‌ ಸಪೋರ್ಟ್‌ (ಬಿಎಲ್‌ಎಸ್‌) ಹಾಗೂ 43 ಅಡ್ವಾನ್ಸ್ಡ್‌ ಲೈಫ್‌ ಸಪೋರ್ಟ್‌ (ಎಎಲ್‌ಎಸ್‌) ಸೇರಿ ಒಟ್ಟು 50 ಆಂಬುಲೆನ್ಸ್‌ಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಮುಖಂಡ ನೀಲಕಂಠರಾವ ಮೂಲಗೆ ಉಪಸ್ಥಿತರಿದ್ದರು.

ಆಸ್ಪತ್ರೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ವೈದ್ಯರು ಹಾಗೂ ಸಿಬ್ಬಂದಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಭರ್ತಿ ಮಾಡಿಕೊಳ್ಳಲಿದೆ. ಅಗತ್ಯಬಿದ್ದರೆ ಮಂಡಳಿಯೂ ಸಹಕಾರ ನೀಡಲಿದೆ
ಡಾ. ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT