ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಬಾರದ ಕೆ.ಆರ್‌.ಐ.ಡಿ.ಎಲ್ ಅಧಿಕಾರಿ

ಅಫಜಲಪುರ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷೆ ಬೇಸರ
Last Updated 9 ಜೂನ್ 2020, 6:06 IST
ಅಕ್ಷರ ಗಾತ್ರ

ಅಫಜಲಪುರ: ‘ನಾನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾದ ಮೇಲೆ 16ನೇ ಸಾಮಾನ್ಯ ಸಭೆ ನಡೆಯುತ್ತಿದೆ. ಒಂದು ಸಭೆಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಬರಲಿಲ್ಲ. ಅವರು ಸಭೆಗೆ ಮುಖವನ್ನೇ ತೋರಿಸಿಲ್ಲ’ ಎಂದುತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಜಮಾದಾರ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಕೆ.ಆರ್‌.ಐ.ಡಿ.ಎಲ್ ಇಲಾಖೆ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಏನಾದರೂ ಒಂದು ಸುಳ್ಳು ನೆಪ ಹೇಳಿ ಪ್ರತಿ ಸಭೆಗೆ ಜಾರಿಕೊಂಡು ಕೆಲಸಕ್ಕೆ ಬಾರದವರನ್ನು ಸಭೆಗೆ ಕಳುಹಿಸುತ್ತಾರೆ. ಹೀಗಾಗಿ ಈ ಇಲಾಖೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಯಾವ ಸದಸ್ಯರಿಗೂ ಮಾಹಿತಿ ಇಲ್ಲ. ಕಳಪೆ ಕಾಮಗಾರಿಗಳ ಬಗ್ಗೆ ಸಾಕಷ್ಟು ದೂರು ಬಂದಿದೆ’ ಎಂದು ತಿಳಿಸಿದರು.

‘ಹೆಚ್‌.ಕೆ.ಕೆ.ಆರ್‌.ಡಿ.ಪಿಯಲ್ಲಿ 2015 – 16ನೇ ಸಾಲೀನಲ್ಲಿ ₹ 398.85 ಲಕ್ಷ ಮತ್ತು ಗ್ರಾಮೀಣ ವಿಕಾಸ ಯೋಜನೆ ಅಡಿಯಲ್ಲಿ ತೆಲ್ಲೂರ, ತೆಲ್ಲುಣಗಿ, ನದಿ ಸಿನ್ನೂರ ಗ್ರಾಮಗಳಲ್ಲಿ ₹ 375 ಲಕ್ಷ ಕಾಮಗಾರಿ ನಡೆದಿವೆ. 2019 – 20ರಲ್ಲಿ 17 ವಿವಿಧ ಕಟ್ಟಡಗಳ ದುರಸ್ತಿ ಕೆಲಸಗಳಿಗಾಗಿ ₹ 47.70 ಲಕ್ಷ ಖರ್ಚು ಮಾಡಲಾಗುತ್ತಿದೆ. ಬೋಗನಳ್ಳಿ, ಅವರಳ್ಳಿ, ಸಿಧನೂರ, ಜೇವರ್ಗಿ(ಬಿ), ಶಿರವಾಳ ಗ್ರಾಮದಲ್ಲಿಯೂ 2013 – 14ನೇ ಸಾಲೀನ ₹ 54 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಡೆಯುತ್ತಿವೆ. ಇಷ್ಟೆಲ್ಲಾ ಕೆಲಸ ನಡೆದರೂ ಅವುಗಳ ಬಗ್ಗೆ ಮಾಹಿತಿ ಮಾಹಿತಿ ಇಲ್ಲ. ಇದರಲ್ಲಿ ಕೆಲವೊಂದು ಕಾಮಗಾರಿ ಕಳಪೆಯಾಗಿವೆ’ ಎಂದು ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಎಸ್‌.ಗಂಗನಳ್ಳಿ ಅವರು ಇಲಾಖೆಯ ಮಾಹಿತಿ ನೀಡಲು ಆರಂಭಿಸಿದಾಗ, ‘ನಿಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಇಲ್ಲ. ಯಾವುದೇ ಯೋಜನೆಯನ್ನು ಸಿದ್ಧಪಡಿಸುವಾಗ ಸದಸ್ಯರ ಸಲಹೆ ಪಡೆಯಬೇಕು. ಆದರೆ ನೀವು ಮಂಜೂರಾದ ಮೇಲೆ ಅವುಗಳ ವಿತರಣೆಗೆ ಕರೆಯುತ್ತೀರಿ. ಇದು ಸರಿಯಲ್ಲ. ನಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ನಾವು ಏನಾದರೂ ಸಹಾಯ ಮಾಡಬೇಕಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭೀಮಾಶಂಕರ ಹೊನಕೇರಿ ಖಾರವಾಗಿ ತಿಳಿಸಿದರು.

ಅನುದಾನ ವಾಪಸ್‌: ತಾಲ್ಲೂಕು ಪಂಚಾಯಿತಿಗೆ 2019 – 20ರಲ್ಲಿ ವಿವಿಧ ಅಭಿವೃದ್ಧಿ ಕೈಗೊಳ್ಳಲು ಸರ್ಕಾರ ₹ 1.87 ಕೋಟಿ ಅನುದಾನ ನೀಡಿತ್ತು. ಆದರೆ ತಾಲ್ಲೂಕು ಪಂಚಾಯಿತಿಯವರು ನಿಷ್ಕಾಳಜಿ ಮಾಡಿದ್ದರಿಂದ ಸರ್ಕಾರಕ್ಕೆ ₹ 1.70 ಕೋಟಿ ಅನುದಾನ ಮರಳಿ ಹೋಗಿದೆ. ಇದಕ್ಕೆ ಯಾರು ಹೊಣೆಗಾರರು ಎಂದು ಭೀಮಾಶಂಕರ ಹೊನಕೇರಿ ಪಶ್ನಿಸಿದಾಗ ತಾಲ್ಲೂಕು ಪಂಚಾಯಿತಿ, ಪಂಚಾಯತ್ ರಾಜ್‌ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳಿಂದ ಸಮರ್ಪಕವಾದ ಉತ್ತರ ಬರಲಿಲ್ಲ.

ಮಾತ್ರೆ ವಿತರಣೆ: ಆಯುಷ್‌ ವೈದ್ಯಾಧಿಕಾರಿ ಶ್ರೀಶೈಲ ಪಾಟೀಲ ಹಾಗೂ ವಿ.ಎಸ್.ಸಾಲೀಮಠ ಅವರು ಸಭೆಯಲ್ಲಿ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ರೋಗ ನಿರೋಧಕ ಸಂಶಮನ ವಟಿ ಮಾತ್ರೆಗಳ‌ನ್ನು ವಿತರಿಸಿದರು. ಈಗಾಗಲೇ ಕಂಟೇನ್ಮೆಂಟ್ ಝೋನ್‌ಗಳಾದ ಬಳೂರ್ಗಿ ತಾಂಡಾ ಹಾಗೂ ಪರಿಶಿಷ್ಟ ಕಾಲೊನಿಗಳಲ್ಲಿ ಕೊರೊನಾ ಜಾಗೃತಿ ಮೂಡಿಸಿ ಮಾತ್ರೆ ವಿತರಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸದಸ್ಯರಾದ ಶಿವಶರಣಪ್ಪ ಪಡಶೆಟ್ಟಿ, ವಿಠ್ಠಲ ನಾಟೀಕಾರ, ಪಾರ್ವತಿ ಕಣ್ಣಿ, ಲಕ್ಷ್ಮೀಬಾಯಿ ಅಲ್ಲದ, ಮಾಪಣ್ಣ ಸಾಯಬಣ್ಣ, ಬಲವಂತ ಜಕಬಾ, ಗುರಣ್ಣಾ ಜಮಾದಾರ, ರಾಜಕುಮಾರ ಬಬಲಾದ, ಮಲ್ಲಪ್ಪ ಪ್ಯಾಟಿ ವಸಂತರಾವ್ ಚಿತ್ತಪೂರ, ಸುಜಾತಾ ಬಬಲೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT