ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಳಿ ಬೆಳೆ: ಎಕರೆಗೆ 2 ತಿಂಗಳಲ್ಲಿಯೇ ₹50 ಸಾವಿರ ಆದಾಯ

Published 1 ಮಾರ್ಚ್ 2024, 5:16 IST
Last Updated 1 ಮಾರ್ಚ್ 2024, 5:16 IST
ಅಕ್ಷರ ಗಾತ್ರ

ಚಿಂಚೋಳಿ: ‘ಹೇರಳವಾದ ಔಷಧೀಯ ಗುಣಗಳನ್ನು ಹೊಂದಿರುವ ತರಕಾರಿ ಬೆಳೆಯಾದ ಗೋಳಿ ಪಲ್ಲೆ ಎಂದೇ ಕರೆಯಲಾಗುವ ಗೋಳಿ ಬೇಸಾಯ ಅತ್ಯಂತ ಲಾಭದಾಯಕವಾಗಿದೆ.

ತಾಲ್ಲೂಕಿನಲ್ಲಿ ಐನೋಳ್ಳಿ, ನಾಗಾಈದಲಾಯಿ, ಯಂಪಳ್ಳಿ, ಸಾಲೇಬೀರನಹಳ್ಳಿ, ಕೊಳ್ಳೂರು ಮೊದಲಾದ ಕಡೆಗಳಲ್ಲಿ ಈ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ತೊಗರಿ ಬೆಳೆ ರಾಶಿಯ ನಂತರ ಮತ್ತು ಬೇರೆ ಬೆಳೆಗಳು ಮಳೆ ಮತ್ತಿತರ ಕಾರಣಗಳಿಂದ ಹಾಳಾಗಿದ್ದರೆ ಅಂತಹ ಹೊಲದಲ್ಲಿ ಗೋಳಿ ಬೀಜ ಚೆಲ್ಲಿ ಬೇಸಾಯ ಮಾಡಿ ಅಧಿಕ ಲಾಭ ಪಡೆಯುತ್ತಿದ್ದಾರೆ.

ಗೋಳಿ ಬೇಸಾಯ ನಡೆಸಬೇಕಾದರೆ ನೀರಾವರಿ ಸೌಲಭ್ಯ ಬೇಕು. ಈರುಳ್ಳಿ ಬೀಜ ಹೋಲುವಂತ ಬೀಜ ಹೊಲದಲ್ಲಿ ಚೆಲ್ಲುತ್ತಾರೆ. ಅವು ನಾಟಿಯಾದರೆ ಬೆಳೆ ಕೈಗೆಟುವುದು ಖಾತ್ರಿ.

’ಕೇವಲ 2 ತಿಂಗಳು ಅವಧಿಯ ಈ ಬೆಳೆ ಬೇಸಾಯದಿಂದ ಎಕರೆಗೆ ಕೇವಲ 2 ತಿಂಗಳಲ್ಲಿಯೇ ₹50 ಸಾವಿರಕ್ಕೂ ಅಧಿಕ ಆದಾಯ ಪಡೆಯಬಹುದಾಗಿದೆ’ ಎನ್ನುತ್ತಾರೆ ಗೋಳಿ ಬೆಳೆಗಾರ ನರೇಂದ್ರ ಬಿಎನ್ ಪಾಟೀಲ.

ಈ ಬೆಳೆ ಬೇಸಾಯಕ್ಕೆ ಪ್ರಕೃತಿ ಸಾಥ್ ನೀಡುವುದು ಅತಿ ಮುಖ್ಯ. ಬಿತ್ತಿದ ಬೀಜಗಳು ಮೊಳಕೆಯೊಡೆದರೆ ಅರ್ಧ ಬೆಳೆ ಬಂದಂತೆ. ಮಂಜು ಬಿಡದಿದ್ದರೆ ನೀರು ಮತ್ತು ಗೊಬ್ಬರ ಹಾಕಿದರೆ ಸಾಕು ಬೆಳೆ ಕೈಗೆಟುವುದಲ್ಲಿ ಎರಡು ಮಾತಿಲ್ಲ. ನಾನು ಮೂರು ವರ್ಷದಿಂದ ಬೆಳೆಯುತ್ತಿದ್ದು ಇಲ್ಲಿ ಹಲವಾರು ರೈತರು ಕೆಲ ವರ್ಷದಿಂದಲೂ ಇದರ ಬೇಸಾಯ ನಡೆಸುತ್ತಿದ್ದಾರೆ’ ಎಂದರು.

ತಾಲ್ಲೂಕಿನಲ್ಲಿ ಕನಿಷ್ಠ 100 ಎಕರೆಗೂ ಅಧಿಕ ಹೊಲದಲ್ಲಿ ಗೋಳಿ ಬೇಸಾಯ ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ ಚಂದ್ರಂಪಳ್ಳಿ ಜಲಾಶಯ ಮತ್ತು ತುಮಕುಂಟಾ, ಸಾಲೇಬೀರನಹಳ್ಳಿ ಕೆರೆ ನೀರು ಮತ್ತು ಕೊಳವೆಬಾವಿಗಳ ನೆರವಿನಿಂದ ರೈತರು ಗೋಳಿ ಬೇಸಾಯ ನಡೆಸುತ್ತಿದ್ದಾರೆ.

ಇಲ್ಲಿ ಎಕರೆಗೆ 3 ರಿಂದ 4 ಕ್ವಿಂಟಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ₹15ಸಾವಿರದಿಂದ ₹25 ಸಾವಿರ ದರವಿದೆ. ಸಮೀಪದ ಚಿಟ್ಟಗುಪ್ಪ ಮತ್ತು ಮನ್ನಾಎಖ್ಖೆಳ್ಳಿಯಲ್ಲಿ ಗೋಳಿ ಕಾಳು ಮಾರಾಟ ಮಾಡುತ್ತಾರೆ. ಬಹುತೇಕ ದಲ್ಲಾಳಿಗಳು ರೈತರ ಹೊಲಗಳಿಗೆ ಬಂದು ಹೊಲದಲ್ಲಿಯೇ ಹಣ ನೀಡಿ ತೂಕ ಮಾಡಿಕೊಂಡು ಹೋಗುತ್ತಾರೆ. ಈ ಕಾಳುಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ.

‘ಈ ವರ್ಷ ಬೆಳೆದ ಕಾಳುಗಳಿಗೆ ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ₹1 ಸಾವಿರ ಹೆಚ್ಚು ದರ ನೀಡಿ ಖರೀದಿಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ₹17 ಸಾವಿರಕ್ಕೆ ಕ್ವಿಂಟಲ್ ಮಾರಾಟವಾಗುತ್ತಿದೆ’ ಎಂದು ಬೆಳೆಗಾರ ಥಾವರ್‌ಕುಮಾರ ತಿಳಿಸಿದರು.

ಗೋಳಿ ಬೆಳೆಯ ಕಾಳುಗಳು
ಗೋಳಿ ಬೆಳೆಯ ಕಾಳುಗಳು
ಎಕರೆಗೆ 3 ರಿಂದ 4 ಕ್ವಿಂಟಲ್ ಇಳುವರಿ ಕ್ವಿಂಟಲ್‌ ರೂ17 ಸಾವಿರ ದರಬೆಳೆ ಅವಧಿ ಎರಡು ತಿಂಗಳು
ಗೋಳಿ ಪಲ್ಲೆ ಎಂದೇ ಪ್ರಸಿದ್ಧಿ ಪಡೆದ ಗೋಳಿಯನ್ನು ತರಕಾರಿಯಾಗಿ ಬಳಕೆ ಮಾಡುತ್ತಾರೆ. ಗೋಳಿ ಕಾಳು ಹೇರಳವಾದ ಔಷಧಿಯ ಗುಣಗಳನ್ನು ಹೊಂದಿದ್ದು ಚಿಂಚೋಳಿ ಸಹಿತ ಕೆಲವು ಕಡೆ ಮಾತ್ರ ಬೇಸಾಯ ಕಾಣಬಹುದು
-ಡಾ.ಜಹೀರ ಅಹಮದ್ ಸಸ್ಯ ವಿಜ್ಞಾನಿ ಕೆವಿಕೆ ಚಿಂಚೋಳಿ
ರೈತರು ಅಲ್ಪಾವಧಿಯ ಬೆಳೆಗಳನ್ನು ಬೆಳೆದು ಹೆಚ್ಚು ಲಾಭ ಪಡೆದುಕೊಳ್ಳಬೇಕು. ಒಂದು ಬೆಳೆಯ ಪಡೆದ ನಂತರ ಈ ಬೇಸಾಯ ಮಾಡುವುದರಿಂದ ಬಂದ ಆದಾಯ ರೈತನಿಗೆ ವರದಾನವಾಗುತ್ತದೆ
-ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕರು ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT