ಬುಧವಾರ, ಜನವರಿ 22, 2020
16 °C
ಕೃಷಿ ಕೂಲಿಕಾರರ 7ನೇ ರಾಜ್ಯ ಸಮ್ಮೇಳನ

ಸರ್ಕಾರಕ್ಕೆ ಬಡವರ ಪರ ಕಾಳಜಿ ಇಲ್ಲ: ಮಾಜಿ ಸಂಸದೆ ಸುಭಾಷಿಣಿ ಅಲಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಗಳಿಗೆ ಬಡವರ ಪರ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಮಾಜಿ ಸಂಸದೆ ಹಾಗೂ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ (ಎಐಎಡಬ್ಲ್ಯುಯು)ಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸುಭಾಷಿಣಿ ಅಲಿ ಹೇಳಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ 3 ದಿನಗಳ ಕಾಲ ಆಯೋಜಿಸಿರುವ ಕೃಷಿ ಕೂಲಿಕಾರರ 7ನೇ ರಾಜ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ‘ಬಿಜೆಪಿ ದೊಡ್ಡ ದೊಡ್ಡ ಬಂಡವಾಳಶಾಹಿ ಕಂಪನಿಗಳಿಗೆ ಕೋಟಿ ಕೋಟಿ ಹಣ ನೀಡುತ್ತಿದೆ. ಆದರೆ ಬಡವರ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ’ ಎಂದು ಕಿಡಿಕಾರಿದರು.

‌‘ಕೇಂದ್ರ ಸರ್ಕಾರ ಉದ್ಯಮಿಗಳ ಪರ ಆಡಳಿತ ನಡೆಸುತ್ತಿದೆ. ಶ್ರಮಿಕರು ಶ್ರಮಿಕರಾಗಿಯೇ ಉಳಿದಿದ್ದಾರೆ. ಅವರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದರು.

‘ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ. ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ದೊಡ್ಡ ಸವಾಲು ನಮ್ಮ ಎದುರು ಇರುವುದು ತಿಳಿಯುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು. 

ಎ.ಐ.ಎ.ಡಬ್ಲ್ಯು.ಯು. ಅಧ್ಯಕ್ಷ ತಿರುನಾವಕ್ಕರಸು ಮಾತನಾಡಿ, 'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಕೃಷಿ ಕಾರ್ಮಿಕರು ತೀರಾ ಸಂಕಷ್ಟದಲ್ಲಿ ಇದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಹಿಂದುತ್ವ ಒಂದೇ ಗುರಿಯಾಗಿದೆ' ಎಂದು ಕಿಡಿಕಾರಿದರು.

'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ದೊಡ್ಡ ಕಂಪನಿಗಳಿಗೆ ₹ 15 ಲಕ್ಷ ಕೋಟಿ ಕೊಡುಗೆಯಾಗಿ ನೀಡಿದೆ. ಅದಕ್ಕೆ ಪ್ರತಿಫಲವಾಗಿ ₹ 1,780 ಕೋಟಿಯನ್ನು ಬಿಜೆಪಿ ದೇಣಿಗೆಯಾಗಿ ಪಡೆದಿದೆ. 40 ವರ್ಷಗಳ ಹಿಂದೆ ಇದ್ದಷ್ಟೇ ತೀವ್ರ ನಿರುದ್ಯೋಗ ಸಮಸ್ಯೆ ಈಗಲೂ ಇದೆ' ಎಂದು ಹೇಳಿದರು.

'ಜಿಎಸ್‌ಟಿ ನೀತಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾದ ಹಣವನ್ನೇ ನೀಡುತ್ತಿಲ್ಲ. ಪಡಿತರ ವಿತರಣೆಯಲ್ಲೂ ತನ್ನ ಪಾಲಿನ ಅಕ್ಕಿಯನ್ನು ರಾಜ್ಯಗಳಿಗೆ ನೀಡುತ್ತಿಲ್ಲ' ಎಂದು ಹರಿಹಾಯ್ದರು. 

ಎ.ಐ.ಎ.ಡಬ್ಲ್ಯು.ಯು. ರಾಜ್ಯ ಸಮಿತಿ ಅಧ್ಯಕ್ಷ ನಿತ್ಯಾನಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹೋರಾಟಗಾರ್ತಿ ಕೆ.ನೀಲಾ ಸ್ವಾಗತಿಸಿದರು. ಚಂದ್ರಪ್ಪ ಹೊಸ್ಕೇರಾ, ಜಿ.ಎನ್‌.ನಾಗರಾಜ, ಮಾರುತಿ ಗೋಖಲೆ, ಶರಣಬಸಪ್ಪ ಮಮಶೆಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)