ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೇಲೆ ದೌರ್ಜನ್ಯ: ಪ್ರಧಾನಿ ಕ್ಷಮೆಗೆ ಒತ್ತಾಯ

ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ
Last Updated 2 ಡಿಸೆಂಬರ್ 2020, 2:35 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರದ ಮೂರು ಪ್ರಮುಖ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಲಾಠಿ ಪ್ರಹಾರ, ಜಲಫಿರಂಗಿ ಸಿಡಿಸಿದ್ದನ್ನು ಖಂಡಿಸಿರುವ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕಾರ್ಯಕರ್ತರು, ಈ ಪ್ರಮಾದಕ್ಕೆ ಪ್ರಧಾನಿ ನರೇಂದ್ರ ಮೋದಿ ರೈತರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ರೈತರು, ಕೃಷಿ ಕೂಲಿಕಾರರು, ಬಹುಸಂಖ್ಯಾತರಿಗೆ ಸಂಬಂಧಪಟ್ಟ ಕಾಯ್ದೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸದೇ ಅಪ್ರಜಾಸತ್ತಾತ್ಮಕವಾಗಿ ಸಂವಿಧಾನದ ರೀತಿ, ನೀತಿ ಆಶಯಗಳನ್ನು ಗಾಳಿಗೆ ತೂರಿ ಕಾಯ್ದೆ ಜಾರಿಗೆ ಮುಂದಾಗಿದ್ದು ಸರಿಯಲ್ಲ ಎಂದು ಟೀಕಿಸಿದರು.

‘ಆಯಾ ರಾಜ್ಯಗಳಲ್ಲಿ ಕಾಯ್ದೆಗಳ ಜಾರಿ ಖಂಡಿಸಿ ರೈತರು ಪ್ರತಿಭಟನೆ ನಡೆಸಿದರೂ ಬಗ್ಗದ ನಿರ್ಲಜ್ಜ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಅಂತಿಮವಾಗಿ ಪಂಜಾಬ್, ಹರಿಯಾಣ ರೈತರು ದೆಹಲಿ ಚಲೊ ಆರಂಭಿಸಿದರು. ರೈತರು ಹರಿಯಾಣ ಹಾಗೂ ದೆಹಲಿ ಗಡಿಯನ್ನು ಪ್ರವೇಶಿಸದಂತೆ ತಡೆಯಲು ಪ್ಯಾರಾ ಮಿಲಿಟರಿಯನ್ನು ಬಳಸಿ ದೌರ್ಜನ್ಯ ಎಸಗಲಾಗಿದೆ. ಮತ್ತೊಂದು ಕಡೆ ರೈತ ಸಂಘಟನೆಗಳ ಮುಖಂಡರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದ್ದು, ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸುವ ಬದಲು ಷರತ್ತು ಹಾಕಿದ್ದಕ್ಕೆ ಪ್ರಧಾನಿಯೇ ನೇರ ಹೊಣೆ’ ಎಂದು ಆರೋಪಿಸಿದರು.

ಕೃಷಿ ಸಂಬಂಧಿ ಕಾಯ್ದೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡುವ ಕಾನೂನು ಹಾಗೂ ಎಲ್ಲಾ ರೈತರ, ಕೃಷಿ ಕೂಲಿಕಾರರ, ಗ್ರಾಮೀಣ ಬಡವರಿಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ ಸಾಲ ಒದಗಿಸಬೇಕು. ವಿಶೇಷ ಸಂದರ್ಭಗಳಲ್ಲಿ ಸಾಲ ಮನ್ನಾ, ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಜಿಲ್ಲಾ ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಮೌಲಾ ಮುಲ್ಲಾ, ಕೆ. ನೀಲಾ, ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ಮಹೇಶ ಎಸ್‌.ಬಿ., ಜಗದೇವಿ ಆರ್. ಹೆಗಡೆ, ನಾಗೇಂದ್ರಪ್ಪಾ ಥಂಬೆ, ಬಸುಗೌಡ ಬಿರಾದಾರ, ಅರ್ಜುನ ಗೊಬ್ಬುರ, ಎಸ್‌.ಆರ್‌. ಕೊಲ್ಲೂರೆ, ಮಂಜುಳಾ ಭಜಂತ್ರಿ, ಮಲ್ಲಣಗೌಡ ಬಿ. ಪಾಟೀಲ, ಬೀರಲಿಂಗ ಪೂಜಾರಿ, ಅಲ್ತಾಫ್ ಇನಾಮದಾರ, ಮಹಿಮೂದ್ ಮಖದಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT