ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಲ್ಲೆ ಆರೋಪ: ವಕೀಲರ ವಿರುದ್ಧ ಕಕ್ಷಿದಾರ ದೂರು

Published 22 ಮೇ 2024, 4:53 IST
Last Updated 22 ಮೇ 2024, 4:53 IST
ಅಕ್ಷರ ಗಾತ್ರ

ಕಲಬುರಗಿ: ತಮ್ಮ ಪರವಾಗಿ ಸಮರ್ಪಕವಾಗಿ ವಾದಿಸದ ಕಾರಣ ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕಕ್ಷಿದಾರರೊಬ್ಬರು ವಕೀಲರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಿಲ್ಲಾ ಕೋರ್ಟ್ ಆವರಣದಲ್ಲಿ ಮೇ 18ರಂದು ವಕೀಲ ಜಯರಾಜ್ ಪಿಳ್ಳೆ ಅವರು ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಆಳಂದ ಚೆಕ್‌ಪೋಸ್ಟ್ ನಿವಾಸಿ ಮಹಾನಂದ ಉಳ್ಳೆ ದೂರು ನೀಡಿದ್ದಾರೆ.

ವಾಡಿ ರೈಲ್ವೆ ಠಾಣೆಯ ಕೊಲೆ ಪ್ರಕಣವೊಂದರ ಆರೋಪಿಯಾಗಿರುವ ಮಹಾನಂದ ಅವರ ಪರ ಮೊದಲು ಶ್ರೀಶೈಲ ಜಮಾದಾರ ಎಂಬುವವರು ವಾದ ಮಾಡುತ್ತಿದ್ದರು. ನ್ಯಾಯಾಲಯಕ್ಕೆ ಬರುವಾಗ ವಕೀಲ ಜಯರಾಜ ಪಿಳ್ಳೆ ಅವರ ಪರಿಚಯವಾಗಿದೆ. ಅದಾದ ನಂತರ ಅವರು ಮಹಾನಂದ ಪರವಾಗಿ ವಾದ ಮಾಡುತ್ತೇನೆ, ₹20,000 ಶುಲ್ಕ ಕೊಡುವಂತೆ ಕೇಳಿದ್ದರು. ಆಗಾಗ ಪ್ರಕರಣ ಬಗ್ಗೆ ಮಾತನಾಡಲು ಮನೆಗೆ ಕರೆಸಿಕೊಂಡು ಶುಲ್ಕ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ಸಂಬಂಧ ಮೇ 18ರಂದು ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಆ ದಿನ ಜಯರಾಜ್ ಅವರು ಹಾಜರಾಗಿರಲಿಲ್ಲ. ಸಂಜೆ 6ರ ವೇಳೆಗೆ ಬಂದಾಗ, ಯಾಕೆ ಬಂದಿಲ್ಲ ಎಂದು ಮಹಾನಂದ ಪ್ರಶ್ನಿಸಿದ್ದರು. ಆಗ ತಮ್ಮ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಆವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಡಿದ ಅಮಲಿನಲ್ಲಿ ಪೊಲೀಸರೊಂದಿಗೆ ಗಲಾಟೆ: ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮದ್ಯ ಕುಡಿದು ಪೊಲೀಸರೊಂದಿಗೆ ಗಲಾಟೆ ಮಾಡಿದ ಆರೋಪದಡಿ ನಾಲ್ವರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಂದರ ನಗರದ ಸಚಿನ್ ಶಾಂತಪ್ಪ, ವಿಠ್ಠಲ ಪಾಪಣ್ಣ, ಸಾಯಿಕುಮಾರ ರಾಮಚಂದ್ರ ಮತ್ತು ಕಾಳಿಂಗ ರವಿಕುಮಾರ ಗಲಾಟೆ ಮಾಡಿದ ಆರೋಪಿಗಳು.

ಮೇ 19ರ ರಾತ್ರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮದ್ಯ ಕುಡಿದು ಗಲಾಟೆ ಮಾಡುತ್ತಿದ್ದರು. ಸಾರ್ವಜನಿಕರ ದೂರು ಆಧರಿಸಿ ಕಾನ್‌ಸ್ಟೆಬಲ್‌ಗಳಾದ ಶರಣಬಸಪ್ಪ ಮತ್ತು ದೇವಿಂದ್ರ ಆಸ್ಪತ್ರೆ ಆವರಣಕ್ಕೆ ಬಂದರು. ಮದ್ಯ ಪಾನ ಮಾಡದೆ, ಎದ್ದು ಹೋಗುವಂತೆ ಹೇಳಿದರು. ಸಚಿನ್ ಮತ್ತು ವಿಠಲ್ ಪೊಲೀಸರನ್ನು ಅವಾಚ್ಯ ಪದಗಳಿಂದ ಬೈದು, ಗಲಾಟೆ ಮಾಡಿದರು. ಆರೋಪಿಗಳು ಶರಣಬಸಪ್ಪ ಅವರ ಶರ್ಟ್ ಹಿಡಿದು ಎಳೆದಾಡಿದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ ಕಳವು: ಶೇಖ್ ರೋಜಾ ಬಡಾವಣೆಯ ದಿಲ್‍ಶಾದ್ ಬೇಗಂ ಅವರ ಮನೆಯ ತಿಜೋರಿಯಲ್ಲಿ ಇರಿಸಿದ್ದ ಚಿನ್ನಾಭರಣ ಮತ್ತು ನಗದು ಕಳ್ಳರು ಕದ್ದೊಯ್ದಿದ್ದಾರೆ.

ಮೂರು ಮಹಡಿ ಮನೆಯ ಇದ್ದು, ಮೇಲಿನ ಮಹಡಿ ಬಾಡಿಗೆಗೆ ಕೊಟ್ಟಿದ್ದರು. ಉಳಿದ ಎರಡು ಮಹಡಿಯಲ್ಲಿ ದಿಲ್‍ಶಾದ್ ಕುಟುಂಬಸ್ಥರು ವಾಸವಾಗಿದ್ದಾರೆ. ಎರಡನೇ ಮಹಡಿಯ ಕೋಣೆಯಲ್ಲಿ ಮಲಗಿದ್ದ ದಿಲ್‌ಶಾದ್ ದಂಪತಿ ಮಂಗಳವಾರ ಬೆಳಿಗ್ಗೆ 8.30ಕ್ಕೆ ಎದ್ದು ಕೆಳ ಮಹಡಿಗೆ ಬಂದಿದ್ದರು. ಕೆಲ ಹೊತ್ತಿನ ಬಳಿಕ ಕೋಣೆಗೆ ಹೋದಾಗ ತಿಜೋರಿಯಲ್ಲಿ ಇರಿಸಿದ್ದ ₹ 4.14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹7000 ನಗದು ಕಳುವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT