ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 2000 ಶಾಲಾ ಮಕ್ಕಳಿಂದ ಸ್ವಾತಂತ್ರ್ಯದ ನಡಿಗೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ
Last Updated 11 ಆಗಸ್ಟ್ 2022, 8:40 IST
ಅಕ್ಷರ ಗಾತ್ರ

ಕಲಬುರಗಿ: ಸ್ವಾತಂತ್ರ್ಯದ ಅಮೃತ‌ ಮಹೋತ್ಸವ ಅಂಗವಾಗಿ ಗುರುವಾರ ನಗರದ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ನಡೆದ 'ಸ್ವಾತಂತ್ರ್ಯದ ನಡಿಗೆ, ಅಮೃತ‌ ಮಹೋತ್ಸವದೆಡೆಗೆ' ನಡಿಗೆಯಲ್ಲಿ‌ ಸುಮಾರು 2000 ಶಾಲಾ ಮಕ್ಕಳು ಸಂಭ್ರಮದಿಂದ ಭಾಗವಹಿಸಿ ಉತ್ಸಾಹದ ನಡಿಗೆಯಲ್ಲಿ ಭಾಗಿಯಾದರು.

ಕಲಬುರಗಿ ಜಿಲ್ಲಾಡಳಿತ,‌ ಜಿಲ್ಲಾ‌ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ‌ ಈ ಕಾರ್ಯಕ್ರಮಕ್ಕೆ‌ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತ್ರಿವರ್ಣ ಧ್ವಜ ಬಣ್ಣದ ಬಲೂನುಗಳನ್ನು ಆಕಾಶದಲ್ಲಿ ತೇಲಿ ಬಿಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ‌ ಅನೇಕ ಪೂರ್ವಜರ ತ್ಯಾಗ ಬಲಿದಾನದ ಫಲವಾಗಿ ದೊರೆತ ಸ್ವಾತಂತ್ರ್ಯಕ್ಕೆ ಇದೀಗ‌ ಅಮೃತ ಮಹೋತ್ಸವದ‌ ಸಂಭ್ರಮ. ಸ್ವಾತಂತ್ರ್ಯಕ್ಕೆ ಪ್ರಾಣವನ್ನೇ ಲೆಕ್ಕಿಸದೇ ಹೋರಾಡಿದ ಮಹನೀಯರನ್ನು ಸ್ಮರಿಸುವ ಮತ್ತು ರಾಷ್ಟ್ರ ಪ್ರೀತಿ ಹೆಚ್ಚಿಸಲು ನಡಿಗೆ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಡಿ. ಬದೋಲೆ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.13 ರಿಂದ‌ 15ರವರೆಗೆ ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತೆ ಗರಿಮಾ ಪನ್ವಾರ್ ಮಾತನಾಡಿ, ಸಶಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು. ಸ್ವಾತಂತ್ರ್ಯದ ನಡಿಗೆಯಲ್ಲಿ ಭಾಗವಹಿಸಲು ಮಕ್ಕಳು ರಾಷ್ಟ್ರನಾಯಕರ ವೇಷಭೂಷಣ ಧರಿಸಿ ಬಂದಿರುವುದು ಸಂತಸ ತಂದಿದೆ ಎಂದರು.

ನಡಿಗೆ ಜಾಥಾ ಉದ್ದಕ್ಕೂ ರಾಷ್ಟ್ರನಾಯಕರ ವೇಷಭೂಷಣ ಧರಿಸಿದ ಮಕ್ಕಳು, ಕೈಯಲ್ಲಿ ಧ್ವಜ, ಧ್ವಜ ಬಣ್ಣದ‌ ಬಲೂನ್ ಗಳನ್ನು ಹಿಡಿದು ರಾಷ್ಟ್ರಭಕ್ತಿ, ರಾಷ್ಟ್ರೀಯತೆ ಮೆರೆದರು.

ಲಂಬಾಣಿ ಮಕ್ಕಳ ನೃತ್ಯ , ಡೊಳ್ಳು ಕುಣಿತ ನೃತ್ಯ ಗಮನ ಸೆಳೆಯಿತು.

ಲಂಬಾಣಿ ಸಮುದಾಯದ ಕಲಾವಿದರೊಂದಿಗೆ ಗರಿಮಾ ಪನ್ವಾರ್ ನೃತ್ಯಕ್ಕೆ ಹೆಜ್ಜೆ ಹಾಕಿದರು.

ಜಾಥಾದಲ್ಲಿ ಹೆಚ್ಚುವರಿ ಶಿಕ್ಷಣ ಆಯುಕ್ತಾಲಯದ ಸಹ ನಿರ್ದೇಶಕ ವಿಜಯಕುಮಾರ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಮ್ಮ‌ ಡವಳಗಿ, ವೀರಣ್ಣಾ ಬೊಮ್ಮನಳ್ಳಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗ ಇದ್ದರು.

ಸಹಸ್ರಾರು ಶಾಲಾ ಮಕ್ಕಳ ಮೆರವಣಿಗೆಯಿಂದಾಗಿ ಎಸ್ ವಿಪಿ ವೃತ್ತದಿಂದ ಜಗತ್ ವೃತ್ತದವರೆಗೆ ಕೆಲ ಹೊತ್ತು ಸಂಚಾರದಲ್ಲಿ ವ್ಯತ್ಯಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT