ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಸಕ್ಕರೆ ಕಾರ್ಖಾನೆಯಿಂದ ರೈತರ ಮೇಲೆ ದೌರ್ಜನ್ಯ

ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಕ್ಕರೆ ಸಚಿವರಿಗೆ ಬಿ.ಆರ್‌.ಪಾಟೀಲ ಪತ್ರ
Last Updated 2 ಜುಲೈ 2019, 9:57 IST
ಅಕ್ಷರ ಗಾತ್ರ

ಕಲಬುರ್ಗಿ: ‘ಆಳಂದ ತಾಲ್ಲೂಕಿನ ಭೂಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಯು ರೈತರು ಪೂರೈಸಿದ ಪ್ರತಿ ಟನ್‌ ಕಬ್ಬಿಗೆ ₹ 2200 ನೀಡುವಂತೆ ಹೈಕೋರ್ಟ್‌ನ ಕಲಬುರ್ಗಿ ಪೀಠ ಆದೇಶ ನೀಡಿದ್ದರೂ ಕಾರ್ಖಾನೆಯವರು ₹ 2100 ನೀಡುವ ಮೂಲಕ ಆದೇಶವನ್ನು ಉಲ್ಲಂಘಿಸಿದೆ’ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಬಿ.ಆರ್‌.ಪಾಟೀಲ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2016ರ ಫೆಬ್ರುವರಿಯಲ್ಲಿ ಈ ಸಂಬಂಧ ಆದೇಶವಾಗಿದ್ದು, 2012–13ನೇ ಸಾಲಿನಲ್ಲಿ ರೈತರಿಗೆ ಅಂದಾಜು ₹ 6 ಕೋಟಿ ಬಾಕಿ ನೀಡಬೇಕಿದೆ’ ಎಂದರು.

200 ರೈತರ ಜಮೀನಿನ ಮೇಲೆ ಕಾನೂನುಬಾಹಿರವಾಗಿ ರೈತರ ಗಮನಕ್ಕೆ ತರದೇ ಕಾರ್ಖಾನೆಯವರು ಓರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ನಲ್ಲಿ ₹ 10 ಕೋಟಿ ಸಾಲ ಪಡೆದು ಮರುಪಾವತಿ ಮಾಡಿಲ್ಲ. ಇದರಿಂದಾಗಿ ಬ್ಯಾಂಕ್‌ನಿಂದ ರೈತರಿಗೆ ಸಾಲ ಮರುಪಾವತಿಗಾಗಿ ನೋಟಿಸ್‌ ಜಾರಿಯಾಗುತ್ತಿವೆ. ವಂಚನೆ ಮಾಡಿದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

2018–19ನೇ ಸಾಲಿನಲ್ಲಿ ಎನ್‌ಎಸ್‌ಎಲ್‌ ಕಾರ್ಖಾನೆಯು ಪ್ರತಿ ಟನ್‌ ಕಬ್ಬಿಗೆ ಎಫ್‌ಆರ್‌ಪಿ ದರವನ್ನು ₹ 2943 ನಿಗದಿಪಡಿಸಿದೆ. ಇದರಲ್ಲಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ₹ 700 ಹೊರತುಪಡಿಸಿ ರೈತರಿಗೆ ₹ 2243 ನಂತೆ ಪಾವತಿಯಾಗಬೇಕಿತ್ತು. ಆದರೆ, ಕೇವಲ ₹ 1500ರಂತೆ ಪಾವತಿಸಿ ಉಳಿದ ₹ 140 ಕೋಟಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಬಾಕಿ ಮರುಪಾವತಿಸದ ಕಾರ್ಖಾನೆಗಳ ಮೇಲೆ ಅಲ್ಲಿನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ಇಲ್ಲಿಯೂ ಕಾರ್ಯೋನ್ಮುಖರಾಗಬೇಕು. ಈ ನಿಟ್ಟಿನಲ್ಲಿ ರೈತರು ಹೋರಾಟಕ್ಕೆ ಮುಂದಾಗಬೇಕು ಎಂದರು.

ಕಾರ್ಖಾನೆಯು 2013ರಿಂದಲೇ ಪರವಾನಗಿ ನವೀಕರಿಸದೇ, ಭೂಸನೂರು ಗ್ರಾಮ ಪಂಚಾಯಿತಿಗೆ ₹ 5 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಕಾರ್ಖಾನೆಯು ಭೂಮಿ ಮೇಲಿನ ನೀರನ್ನು ಬಳಕೆ ಮಾಡಲು ಪರವಾನಗಿ ಪಡೆದುಕೊಂಡಿದೆ. ಆದಾಗ್ಯೂ, ಕಾನೂನು ಬಾಹಿರವಾಗಿ 22 ಕೊಳವೆಬಾವಿಗಳನ್ನು ಕೊರೆಸಿ ಬರಿದು ಮಾಡಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT