ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನ್ಯಾನೊ ‘ಟೆಕ್‌’ ಚಿಕಿತ್ಸೆಯ ಹಬ್: ಡಾ.ವಿವೇಕ ಜವಳಿ

ಜಿಮ್ಸ್ ಎಂಬಿಬಿಎಸ್‌ ಪದವೀಧರರ ಘಟಿಕೋತ್ಸವ: ಪೋರ್ಟಿಸ್ ಆಸ್ಪತ್ರೆಯ ಡಾ.ವಿವೇಕ ಜವಳಿ
Published 13 ಏಪ್ರಿಲ್ 2024, 7:43 IST
Last Updated 13 ಏಪ್ರಿಲ್ 2024, 7:43 IST
ಅಕ್ಷರ ಗಾತ್ರ

ಕಲಬುರಗಿ: ‘ಇತ್ತೀಚಿನ ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆ ಹಾಗೂ ಆವಿಷ್ಕಾರಗಳು ಅಪಾರ ಅವಕಾಶಗಳನ್ನು ತೆರೆದಿದ್ದು, ರೋಬೊ ಮತ್ತು ನ್ಯಾನೊ ತಂತ್ರಜ್ಞಾನದ ಬಳಕೆಯಿಂದಾಗಿ ಬೆಂಗಳೂರು ಸಿಟಿ ರೋಬೊ ಹಾಗೂ ನ್ಯಾನೊ ತಂತ್ರಜ್ಞಾನ ಚಿಕಿತ್ಸೆಯ ಹಬ್‌ ಆಗಲಿದೆ’ ಎಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ವಿವೇಕ ಜವಳಿ ಹೇಳಿದರು.

ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ಶುಕ್ರವಾರ ನಡೆದ 2018ರ ಬ್ಯಾಚ್‌ನ ಎಂಬಿಬಿಎಸ್‌ ಪದವೀಧರರ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

‘ವೈದ್ಯಕೀಯ ವಲಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಹತ್ತರ ಸಂಶೋಧನೆಗಳು ನಡೆಯುತ್ತಿವೆ. ಮುಂದಿನ ಐದಾರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದ್ದು, ರೋಬೊ ಸರ್ಜರಿ ಭವಿಷ್ಯವಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 38 ರೋಬೊಗಳು ಸರ್ಜರಿ ಮಾಡುತ್ತಿದ್ದು, ಆಸ್ಪತ್ರೆಗಳಲ್ಲಿ 1000ಕ್ಕೂ ಅಧಿಕ ರೋಗಿಗಳು ಸರ್ಜರಿಗಾಗಿ ಎದುರು ನೋಡುತ್ತಿದ್ದಾರೆ’ ಎಂದರು.

‘ಮೂಳೆ ಶಸ್ತ್ರಚಿಕಿತ್ಸೆಯ ಸಣ್ಣ ರೋಬೊಗಳಿಂದ ಹಿಡಿದು ಸಂಕೀರ್ಣವಾದ ಸರ್ಜರಿಗೂ ಬಳಕೆಯಾಗುತ್ತಿವೆ. 5ಜಿ, 6ಜಿ, 7ಜಿಯಿಂದಾಗಿ ಬೆಂಗಳೂರಿನಲ್ಲಿ ಕುಳಿತ ಪರಿಣಿತ ವೈದ್ಯರು ಮೆಲ್ಬೋರ್ನ್‌ನಲ್ಲಿನ ರೋಗಿಗೆ ಸರ್ಜರಿ ಮಾಡಬಹುದು. ಇದನ್ನೇ ಮೆಲ್ಬೋರ್ನ್‌ನಲ್ಲಿ ಕುಳಿತು ಚಿಕಿತ್ಸೆ ಕೊಡಬಹುದು. ರೋಬೊ ತಂತ್ರಜ್ಞಾನವು ಶಸ್ತ್ರಚಿಕಿತ್ಸೆಯಲ್ಲಿ ಗಮನಾರ್ಹದ ಬದಲಾವಣೆಯನ್ನೇ ತಂದಿದೆ’ ಎಂದು ಹೇಳಿದರು.

‘ಒಮ್ಮೆ ಬ್ಯಾಟರಿ ನಿರ್ವಹಣೆಯ ರಿಮೋಟ್‌ನಿಂದ ನಿಯಂತ್ರಿಸುವಂತಹ ನ್ಯಾನೊ ಕ್ಯಾಪ್ಸುಲ್‌ ನಮ್ಮ ಬಳಿ ಬಂದರೆ, ದಂತ ವೈದ್ಯರು ಕ್ಯಾಪ್ಸುಲ್ ಅನ್ನು ಬಾಯಿಯಲ್ಲಿ ಇರಿಸಿದರೆ ಸಾಕು. ಕೆಲವೇ ಸೆಕೆಂಡ್‌ಗಳಲ್ಲಿ ಮಿಲಿಯನ್ ನ್ಯಾನೊಗಳು ಹೊರಬರುತ್ತವೆ. ಹಲ್ಲಿನ ಎಲ್ಲ ಭಾಗಗಳಿಗೆ ತಲುಪಿ, ಸೆಲ್‌ಗಳ ಒಳ ಪ್ರವೇಶಿಸಿ ಸ್ವಚ್ಛಗೊಳಿಸಲಿವೆ. ಇದನ್ನು ಬ್ರೈನ್ ಟ್ಯೂಮರ್, ಶ್ವಾಸಕೋಶ ಸಂಬಂಧಿತ ಚಿಕಿತ್ಸೆಗಳ ಬಳಕೆಯಲ್ಲಿ ಊಹೆ ಮಾಡಿಕೊಂಡರೆ ಹೇಗಾಗಬಹುದು’ ಎಂದರು.

‘ಮಾಹಿತಿ ತಂತ್ರಜ್ಞಾನವು (ಐಟಿ) ಜ್ಞಾನದ ಕಣಜವನ್ನು ನಮ್ಮ ಮುಂದೆ ತಂದಿಟ್ಟಿದೆ. ಕೃತಕ ಬುದ್ಧಿಮತ್ತೆಯ (ಎಐ) ಚಾಟ್ ಜಿಪಿಟಿಯಲ್ಲಿ ‘ರೋಡ್ ಮ್ಯಾಪ್‌ ಆಫ್ ಕಾರ್ಡಿಯಾಕ್‌ ಸರ್ಜರಿ’ ಎಂದು ಕೇಳಿದರೆ, ಕ್ಷಣಾರ್ಧದಲ್ಲಿ ಮಾಹಿತಿಯ ಹೂರಣವೇ ನಿಮ್ಮ ಮುಂದೆ ಬರಲಿದೆ. ಹೀಗಾಗಿ, ಹೊಸತನದ ಕಲಿಕೆಗೆ ತೆರೆದುಕೊಳ್ಳಬೇಕು. ಎಲ್ಲ ಬಗೆಯ ರೋಗಗಳ ಚಿಕಿತ್ಸಾ ವಿಧಾನದ ಬಗ್ಗೆ ಅರಿವಿರಬೇಕು’ ಎಂದು ಸಲಹೆ ನೀಡಿದರು.

ಹೈದರಾಬಾದ್‌ನ ಉಸ್ಮಾನಿಯ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಮದ್ ಅಬ್ಬಾಸ್ ಅಲಿ ಮಾತನಾಡಿ, ‘ಸಮಾಜ, ನಮ್ಮ ಬಂಧುಗಳು, ಸ್ನೇಹಿತರು ವೈದ್ಯರಿಂದ ಅತ್ಯುತ್ತಮ ತಪಾಸಣೆಯನ್ನೇ ನಿರೀಕ್ಷಿಸುತ್ತಾರೆ. ರೋಗಿ ಗುಣಮುಖವಾದರೆ ನಿಮಗೆ ಗೌರವದ ಜತೆಗೆ ಪ್ರಶಂಸೆಯೂ ಲಭಿಸುತ್ತದೆ. ಪದವಿ ಪಡೆದ ಬಳಿಕ ಹೊಸ ಹಾದಿ ಸಿಗುವುದಿಲ್ಲ. ಆದರೆ, ನಿಮ್ಮ ಹೆಗಲ ಮೇಲೆ ಚಿಕಿತ್ಸೆಯ ಹೊಣೆಗಾರಿಕೆ ಬರುತ್ತದೆ. ರೋಗಿಗಳ ಗುಣಮುಖವೇ ನಿಮ್ಮ ಆದ್ಯತೆಯಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ಜಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ.ಎಸ್., ಪ್ರಾಂಶುಪಾಲ ಡಾ.ಅಜಯಕುಮಾರ ಜಿ., ಆರ್ಥಿಕ ಸಲಹೆಗಾರ್ತಿ ಭಾರತಿ, ಮುಖ್ಯ ಆಡಳಿತಾಧಿಕಾರಿ ಅರುಣಕುಮಾರ ಕುಲಕರ್ಣಿ ಉಪಸ್ಥಿತರಿದ್ದರು.

ಜಿಮ್ಸ್ ಸಂಸ್ಥೆಯಲ್ಲಿ ಎಲ್ಲ ಸೌಲಭ್ಯಗಳು ಘಟಕಗಳು ಇದ್ದು ಅತ್ಯುತ್ತಮ ಚಿಕಿತ್ಸೆ ಜತೆಗೆ ಗುಣಮಟ್ಟದ ಶಿಕ್ಷಣವೂ ನೀಡಲಾಗುತ್ತಿದೆ. ಶೀಘ್ರದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯೂ ಶುರುವಾಗಲಿದೆ
ಡಾ.ಉಮೇಶ ಎಸ್.ಆರ್. ಜಿಮ್ಸ್ ನಿರ್ದೇಶಕ
14 ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ಘಟಿಕೋತ್ಸವದಲ್ಲಿ 2018ನೇ ಬ್ಯಾಚ್‌ನ 144 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಜಿಮ್ಸ್‌ನ 14 ವಿಭಾಗಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿಭಾಗದ ತಲಾ ಒಬ್ಬೊಬ್ಬ ವಿದ್ಯಾರ್ಥಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಇಎನ್‌ಟಿ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದ ಡಾ.ದಿವ್ಯಾ ಪಡಶೆಟ್ಟಿ ಅವರಿಗೆ ರಾಘವೇಂದ್ರ ಮೆಲ್ಕುಂದಿ ಅವರ ಸ್ಮರಣಾರ್ಥವಾಗಿ ₹10000 ನಗದು ಬಹುಮಾನ ನೀಡಲಾಯಿತು. ಡಾ.ಈಶ್ವರ್ ಜವಳಿ ಅವರಿಗೆ ಸಮಗ್ರ ಅಗ್ರ ಶ್ರೇಯಾಂಕಕ್ಕೆ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT